ಕಲಬುರಗಿ: ನಗರದ (Kalaburagi) ಸರ್ಧಾರ್ ವಲ್ಲಭಭಾಯಿ ಪಟೇಲ್ (ಎಸ್‌ವಿಪಿ) ವೃತ್ತದಲ್ಲಿರುವ ಬಾರ್ & ರೆಸ್ಟೋರೆಂಟ್ ಒಂದರ ಕಟ್ಟಡದಲ್ಲಿ ಆಕಸ್ಮಿಕ ಅಗ್ನಿ ಅವಘಡ (Fire Accident) ಸಂಭವಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬಾರ್‌ನ ಮೇಲಂತಸ್ತಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಜ್ವಾಲೆಗಳು ವ್ಯಾಪಿಸಿ ಕಟ್ಟಡದ ಮೇಲ್ಭಾಗ ಧಗಧಗನೆ ಹೊತ್ತಿ ಉರಿದಿದೆ. ವಿಷಯ ತಿಳಿಯುತ್ತಿದ್ದಂತೆ ಎರಡು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ.
ಅಗ್ನಿಶಾಮಕ ಸಿಬ್ಬಂದಿ ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೆ ವ್ಯಾಪಿಸದಂತೆ ತಡೆಗಟ್ಟಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಪ್ರಾಥಮಿಕ ಮಾಹಿತಿಯಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
