– ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ವಿಜಯೇಂದ್ರ
ಬೆಂಗಳೂರು: 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಇಂದು ನಡೆದ ಬಿಜೆಪಿ ಸಂಘಟನಾ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಚುನಾವಣೆ ಗೆಲುವಿಗೆ ಹರೀಶ್ ದ್ವಿವೇದಿ ಸೂತ್ರ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಕಮಲ ಪಡೆ ಚುನಾವಣೆಗೆ ಒಂದೂವರೆ ವರ್ಷ ಮುಂಚೆ ಚುನಾವಣೆ ಸಿದ್ಧತೆ ಶುರು ಮಾಡಿದೆ. ಸಭೆಯಲ್ಲಿ ಚುನಾವಣೆ ಬಗ್ಗೆ ದ್ವಿವೇದಿ ಸ್ಪಷ್ಟನೆ ನೀಡಿದ್ದಾರೆ.
2028ಕ್ಕೆ ಗೆಲುವು ಒಂದೇ ಮಾನದಂಡ. NDA ಒಟ್ಟಾಗಿ ಚುನಾವಣೆ ಎದುರಿಸಲಿದೆ. ಗೆಲ್ಲುವ ಅಭ್ಯರ್ಥಿಯೊಂದೇ ಮಾನದಂಡವಾಗಬೇಕು. ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಯಾವ ಅಭ್ಯರ್ಥಿ ಗೆಲುವು ಸಾಧ್ಯವೋ ಅದೇ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಬಿಜೆಪಿ-ಜೆಡಿಎಸ್ ಯಾರೇ ಅಭ್ಯರ್ಥಿ ಆದರೂ ಗೆಲುವು ಮಾತ್ರ ಮಾನದಂಡ ಅಷ್ಟೆ. ಯಾರಿಗೆ ಟಿಕೆಟ್ ಕೊಟ್ಟರೂ ಇಬ್ಬರು ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಭಿನ್ನಪ್ರಾಯಕ್ಕೆ ಅವಕಾಶ ಕೊಡದೇ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ನಾಯಕರಿಗೆ ದ್ವಿವೇದಿ ಸೂಚಿಸಿದ್ದಾರೆ.
ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಹೈಕಮಾಂಡ್ ಮತ್ತೆ ಅವಕಾಶ ಕೊಟ್ಟರೆ ಹಿರಿಯರು-ಕಿರಿಯರನ್ನ ಒಟ್ಟಾಗಿ ತೆಗೆದುಕೊಂಡು ಹೋಗ್ತೀನಿ. ಇಲ್ಲದೇ ಹೋದರೆ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ವಿಜಯೇಂದ್ರ ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಎಲ್ಲ ನಾಯಕರು ಜಿಲ್ಲೆ, ತಾಲೂಕುಗಳಿಗೆ ಪ್ರವಾಸ ಮಾಡಲು ಸೂಚನೆ ನೀಡಲಾಗಿದೆ.
ಹಾಲು, ಸ್ಟಾಂಪ್ ಪೇಪರ್, ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ, ಆಲ್ಕೋಹಾಲ್ ದರ ಏರಿಕೆ, ಡೀಸೆಲ್, ಪೆಟ್ರೋಲ್ ಸುಂಕ ಹೆಚ್ಚಳ ಸೇರಿ ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುವ ಸ್ಥಿತಿ ಇದೆ. ಇನ್ನೊಂದೆಡೆ ಸರ್ಕಾರ ಆಡಳಿತಾತ್ಮಕವಾಗಿ ಅತ್ಯಂತ ನಿಷ್ಕ್ರಿಯ ಸ್ಥಿತಿಗೆ ತಲುಪಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ. ಬರಗಾಲದಿಂದ ರೈತರ ಸಂಕಷ್ಟ ತೀವ್ರವಾಗಿದೆ. ಜನ, ಜಾನುವಾರುಗಳು ಇದರಿಂದ ಕಷ್ಟ ಅನುಭವಿಸುವಂತಾಗಿದೆ. ಈ ಸರ್ಕಾರವು ಸುಳ್ಳು ಹೇಳುವ ಹಾಗೂ ತಪ್ಪು ಮಾಹಿತಿ ನೀಡುವ ವಿಚಾರಗಳೂ ಚರ್ಚೆಗೆ ಒಳಪಟ್ಟವು. ಈ ಸರ್ಕಾರವು ರೈತರನ್ನು ಭಿಕ್ಷುಕರಂತೆ ಕಾಣುತ್ತಿದೆ. ಬರ ಪರಿಹಾರ ಮೊತ್ತವನ್ನು ಸರಿಯಾಗಿ ನೀಡಿಲ್ಲ. ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಭೆಯಲ್ಲಿ ಬಿಜೆಪಿ ಟೀಕಿಸಿದೆ.
ವಿಧವಾ ಮಾಸಾಶನ, ಹಿರಿಯ ನಾಗರಿಕರ ಪಿಂಚಣಿಯನ್ನೂ ಕಳೆದ ಕೆಲವು ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ. ಮುಂಬರುವ ಚುನಾವಣೆಗಳಲ್ಲಿ ಗೆಲುವು ಖಚಿತ. ಇವೆಲ್ಲವನ್ನೂ ಕ್ರೋಢೀಕರಿಸಿ ಜನರ ಮುಂದಿಡಲಾಗುವುದು. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷವು ಗೆಲುವು ಸಾಧಿಸಲಿದೆ. ತೀವ್ರ ಬೆಲೆ ಹೆಚ್ಚಳ, ಹದಗೆಟ್ಟ ಕಾನೂನು ಸುವ್ಯವಸ್ಥೆ ಸೇರಿದಂತೆ ಇವೆಲ್ಲ ವಿಚಾರಗಳ ಕುರಿತು ಜನಜಾಗೃತಿ ಮೂಡಿಸಲು ಎಲ್ಲ ತಾಲೂಕುಗಳಲ್ಲೂ ಹೋರಾಟ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
