ಅಹಮದಾಬಾದ್: 275 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ವಿಮಾನ ದುರಂತ (Ahmedabad Plane Crash) ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಘಟನೆ ಸಂಭವಿಸಿದ ಸುಮಾರು 10 ತಿಂಗಳ ಬಳಿಕ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (FDR) (ಬ್ಲ್ಯಾಕ್ ಬಾಕ್ಸ್) ಮಾಹಿತಿ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸಂತ್ರಸ್ತ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

2025ರ ಜೂ.12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಿಂದ (Ahmedabad Airport) ಹಾರಿದ್ದ ಏರ್ ಇಂಡಿಯಾ ವಿಮಾನ (AI 171, ಬೋಯಿಂಗ್ 787-8 ವಿಮಾನವು) ದುರಂತದಲ್ಲಿ ಸ್ಥಳೀಯರು ಸೇರಿ 275 ಜನರ ಸಾವನ್ನಪ್ಪಿದ್ದರು. ಅವಶೇಷಗಳನ್ನು ತೆರವುಗೊಳಿಸುವ ವೇಳೆ ಬಿಜೆ ಮೆಡಿಕಲ್ ಹಾಸ್ಟೆಲಿನ ಮೇಲ್ಛಾವಣಿಯಲ್ಲಿ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು. ಇದನ್ನು ವಶಪಡಿಸಿಕೊಂಡಿದ್ದ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ಆರಂಭಿಸಿತ್ತು. ಇದೀಗ ಇದರ ದತ್ತಾಂಶ ಬಿಡುಗಡೆಗೊಳಿಸುವಂತೆ ಪ್ರಧಾನಿ ಮೋದಿಗೆ (Narendra Modi) ಪತ್ರ ಬರೆಯಲಾಗಿದೆ. ಇದನ್ನೂ ಓದಿ: Ahmedabad Plane Crash | ಬ್ಲ್ಯಾಕ್ ಬಾಕ್ಸ್ ಡೌನ್‌ಲೋಡ್ ಪ್ರಕ್ರಿಯೆ ಪೂರ್ಣ, ವಿಶ್ಲೇಷಣೆ ಶುರು – ವಿಮಾನಯಾನ ಸಚಿವಾಲಯ

ಪಿಎಂ, ಸಿಎಂ, DGCA & AAIB ಗೆ ಪತ್ರ ರವಾನೆ
ಗುಜರಾತ್‌ನಾದ್ಯಂತ ಸುಮಾರು 30 ಸಂತ್ರಸ್ತರ ಕುಟುಂಬಗಳು ಶನಿವಾರ ಅಹಮದಾಬಾದ್‌ನಲ್ಲಿ ಸಭೆ ಸೇರಿದ್ದರು. ಅಪಘಾತಕ್ಕೆ ನಿಖರ ಕಾರಣ ಬಹಿರಂಗಪಡಿಸಲು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಮತ್ತು ಬ್ಲ್ಯಾಕ್ ಬಾಕ್ಸ್ ಡೇಟಾವನ್ನು ಬಹಿರಂಗಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದೇ ಪತ್ರದ ಪ್ರತಿಯನ್ನ ವಿಮಾನ ಅಪಘಾತ ತನಿಖಾ ಬ್ಯೂರೋ (AAIB), ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೂ ಕಳುಹಿಸಲಾಗಿದೆ. ಇದನ್ನೂ ಓದಿ: Ahmedabad Plane Crash | ಈವರೆಗೆ ಭಾರತದಲ್ಲಿ ಸಂಭವಿಸಿದ ಪ್ರಮುಖ ವಿಮಾನ ದುರಂತಗಳ ಪಟ್ಟಿ ಇಲ್ಲಿದೆ
ಜೊತೆಗೆ ಸಂತ್ರಸ್ತ ಕುಟುಂಬಸ್ಥರು, ಅಪಘಾತಕ್ಕೆ ನಿಖರ ಕಾರಣವೇನು? ತಾಂತ್ರಿಕ ಸಮಸ್ಯೆ ಏನಾದ್ರೂ ಇದೆಯೇ? ಎಂಬುದರ ಕುಳಿತು ನಾವು ಸತ್ಯಾಂಶ ತಿಳಿದುಕೊಳ್ಳಲು ಬಯಸುತ್ತೇವೆ. ಬ್ಲ್ಯಾಕ್ ಬಾಕ್ಸ್ ಡೇಟಾವನ್ನ ಸಾರ್ವಜನಿಕವಾಗಿ ಪ್ರಕಟಿಸಲು ಸಾಧ್ಯವಾಗದಿದ್ದರೆ, ಸಂತ್ರಸ್ತರ ಕುಟುಂಬಗಳಿಗಾದರೂ ಅದನ್ನೂ ತಲುಪಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಮಧ್ಯೆ ʻಮಗನನ್ನ ಕಳೆದುಕೊಂಡು ನನ್ನ ಮನೆ ಈಗ ಖಾಲಿ ಖಾಲಿ ಆಗಿದೆ. ಅವನ ಸ್ಥಾನ ತುಂಬಲು ಮತ್ಯಾರಿಂದಲೂ ಸಾಧ್ಯವಿಲ್ಲ. ನಮಗೆ ಯಾವುದೇ ಪರಿಹಾರ ಬೇಡ, ಹಣ ಬೇಡ, ಕಡೇ ಪಕ್ಷ ಏನಾಯ್ತು ಅಂತನಾದ್ರೂ ತಿಳಿಯಬೇಕು ಎಂದು 24 ವರ್ಷದ ಮಗನನ್ನು ಕಳೆದುಕೊಂಡ ಸಂತ್ರಸ್ತ ನಿಲೇಶ್ ಪುರೋಹಿತ್ ಅಲವತ್ತುಕೊಂಡಿದ್ದಾರೆ. ಇದನ್ನೂ ಓದಿ: Ahmedabad Plane Crash | ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 2 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದ AAIB
ದುಃಖಿತ ಕುಟುಂಬಗಳಿಗೆ ಸಿಗುತ್ತಿಲ್ಲ ಬೆಂಬಲ
ಇನ್ನೂ ವಿಮಾನ ದುರಂತ ನಡೆದು ದಿನಗಳು ಉರುಳುತ್ತಿದ್ದಂತೆ ಸಂತ್ರಸ್ತ ಕುಟುಂಬಗಳಿಗೆ ಸಿಗಬೇಕಾದ ಬೆಂಬಲ ಕಡಿಮೆಯಾಗುತ್ತಿದೆ. ಸಂತ್ರಸ್ತ ಕುಟುಂಬಗಳು ಬಲಿಪಶುಗಳ ವಸ್ತುಗಳನ್ನ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. 25,000 ಕ್ಕೂ ಹೆಚ್ಚು ವಸ್ತುಗಳನ್ನ ಪಟ್ಟಿ ಮಾಡಲಾಗಿದೆ. ಆದ್ರೆ ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಚಿತ್ರಗಳು ವಸ್ತುಗಳ ಗುರುತು ಪತ್ತೆಗೂ ಕಷ್ಟಸಾಧ್ಯವಾಗಿದೆ. ಇದರಿಂದ ಸಂತ್ರಸ್ತರ ಕುಟುಂಬಗಳು ಬಲಿಪಶುಗಳ ವಸ್ತುಗಳನ್ನು ಪಡೆದುಕೊಳ್ಳಲು ಹರಸಾಹಸ ನಡೆಸುತ್ತಿವೆ.

