– ಇಷ್ಟೊಂದು ಸಂಖ್ಯೆ ಭಕ್ತರು ಬಂದಿರೋದು ಇದೇ ಮೊದಲು
– ʻಪಬ್ಲಿಕ್ ಟಿವಿʼ ಜೊತೆಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಕಣ್ಣೂರು ಡಿಐಜಿ
ತಿರುವನಂತಪುರಂ: ಒಂದು ದಿನಕ್ಕೆ 1.25 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶವಿದೆ. ಆದ್ರೆ ಭಾನುವಾರ 1.70 ಲಕ್ಷಕ್ಕೂ ಹೆಚ್ಚು ಭಕ್ತರು ಬಂದಿದ್ದರು. ಇದರಿಂದಾಗಿ ದೇವರ ದರ್ಶನ ಪಡೆಯಲು ವಿಳಂಬವಾಗಿ ಭಕ್ತರು ಆಕ್ರೋಶಗೊಂಡಿದ್ದಾರೆ ಎಂದು ಕೇರಳದ ಕಣ್ಣೂರು ವಲಯದ ಡಿಐಜಿ ಯತೀಶ್ಚಂದ್ರ (Yathish Chandra) ಹೇಳಿದ್ದಾರೆ.
ಕೇರಳದ ಕೊಟ್ಟಿಯೂರಿನ ಶಿವನ ದೇವಾಸ್ಥಾನದಲ್ಲಿ (Kottiyoor Shiva Temle) ಅವ್ಯವಸ್ಥೆ ವೇಳೆ ಕನ್ನಡಿಗರ ಮೇಲಿನ ದುರ್ವತನೆ ಬಗ್ಗೆ ಡಿಐಜಿ ಯತೀಶ್ಚಂದ್ರ ʻಪಬ್ಲಿಕ್ ಟಿವಿʼ ಜೊತೆಗೆ ಸುದೀರ್ಘವಾಗಿ ಮಾತನಾಡಿದರು. ಇದನ್ನೂ ಓದಿ: ಕೊಟ್ಟಿಯೂರು ದೇವಸ್ಥಾನದಲ್ಲಿ ಕರ್ನಾಟಕ ಭಕ್ತರ ಮೇಲೆ ದುರ್ವರ್ತನೆ – ನೂಕುನುಗ್ಗಲು, ಭಾರೀ ಅವ್ಯವಸ್ಥೆ

ಮಾಹಿತಿ ಕೊರತೆಯಿಂದ ಸಮಸ್ಯೆ
ದೇವಸ್ಥಾನದ ಪೂಜಾ ಕಾರ್ಯ ನಡೆಯುವಾಗ ಅರ್ಧಗಂಟೆ ದೇವಾಸ್ಥಾನದ ಬಾಗಿಲು ಹಾಕಬೇಕಾಗುತ್ತೆ. 10 ನಿಮಿಷ ದೇವರ ಮೂರ್ತಿ ಶುದ್ಧೀಕರಿಸಬೇಕಾಗುತ್ತೆ. ಶಿವೇಲಿ ಅಂತ ದೇವರನ್ನ ಆನೆ ಮೇಲೆ ಕೂರಿಸಿಕೊಂಡು ಹೋಗುತ್ತಾರೆ. ಅದಾದ ಮೇಲೆ ಯಾರೂ ಕೂಡ ನೀರಿನೊಳಗೆ ಇಳಿಯೋ ಹಾಗಿಲ್ಲ. ಮೊದಲಿಂದಲೂ ಈ ರೀತಿಯ ಕೆಲವು ಕಟ್ಟುಪಾಡುಗಳನ್ನ ಪಾಲಿಸಿಕೊಂಡು ಬರಲಾಗಿದೆ. ಹೊರಗಿನಿಂದ ಬಂದಿರುವ ಭಕ್ತಾದಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲ ಹಾಗಾಗಿ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿ 2 ದೇವಸ್ಥಾನಗಳಿಗೆ ಒಂದು ದೇವಸ್ಥಾನದಿಂದ ಶಿವನ ಮೂರ್ತಿ ತಂದು ಮತ್ತೊಂದು ದೇವಸ್ಥಾನದಲ್ಲಿ ಪೂಜೆ ಮಾಡುವುದು ಪದ್ಧತೆ. ಆದ್ರೆ ವೀಕೆಂಡ್ ಆಗಿರುವುದರಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ದೇವಾಸ್ಥಾನಕ್ಕೆ ಬಂದಿದ್ದಾರೆ. ಇದೇ ಮೊದಲ ಬಾರಿಗೆ ದೇವಸ್ಥಾನಕ್ಕೆ ಈ ಪರಿ ಭಕ್ತಾದಿಗಳು ಬಂದಿರುವುದು. ನಾನು ಮುಂಚೆ ಕಣ್ಣೂರಲ್ಲಿ ಎಸ್‌ಪಿ ಆಗಿದ್ದಾಗ ಜಾಸ್ತಿ ಜನ ದೇವಸ್ಥಾನಕ್ಕೆ ಬರುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಹೆಚ್ಚು ಜನ ಬರ್ತಿದ್ದಾರೆ. ಬಹಳಷ್ಟು ವಾಹನಗಳು ಕರ್ನಾಟಕದಿಂದ ಬಂದಿವೆ ಎಂದಿದ್ದಾರೆ. ಇದನ್ನೂ ಓದಿ: Kottiyoor | ಮಹಿಳೆಯರ ಮೇಲೆ ಕಾಲಿಂದ ನೀರು ಎರಚುತ್ತಾರೆ, ಗೂಂಡಾಗಿರಿ ಮಾಡ್ತಿದ್ದಾರೆ: ಕನ್ನಡಿಗರ ಆಕ್ರೋಶ

ಭಕ್ತರೇ ತಾಳ್ಮೆ ಕಳೆದುಕೊಂಡ್ರು
ಸೋಶಿಯಲ್ ಮೀಡಿಯಾದಲ್ಲಿ (Social Media) ಸಮಸ್ಯೆ ವಿಡಿಯೋ ಹರಿದಾಡುತ್ತಿರುವುದು ಅದು ಶನಿವಾರದ್ದು. ಭಾನುವಾರ ಜನಸಂಖ್ಯೆ ಹೆಚ್ಚಿದ್ದರೂ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ವಾಹನಗಳನ್ನ ನಿಲ್ಲಿಸಿ ಹಂತಹಂತವಾಗಿ ಬ್ಯಾಚ್‌ವೈಸ್ ಬಿಡೋ ವ್ಯವಸ್ಥೆ ಮಾಡಿದ್ದೇವೆ. ಇಷ್ಟೆಲ್ಲಾ ಸುಧಾರಣ ಕ್ರಮ ಅನುಸರಿಸಿದರೂ ಕೂಡ ಭಕ್ತಾಧಿಗಳು ನಮ್ಮನ್ನು ಇಲ್ಲೇ ಯಾಕೆ ನಿಲ್ಲಿಸಿದ್ದೀರಿ ಅಂತ ತಾಳ್ಮೆ ಕಳೆದುಕೊಂಡು ಹತಾಶರಾಗುತ್ತಿದ್ದಾರೆ. ಬ್ಯಾಚ್‌ವೈಸ್ ವಾಹನಗಳನ್ನು ಬಿಡುವ ವೇಳೆಯೂ ಅಲ್ಲಲ್ಲಿ ಸ್ಥಳೀಯರೊಂದಿಗೆ ವಾಗ್ವಾದಗಳು ನಡೆದಿವೆ ಎಂದು ಹೇಳಿದ್ದಾರೆ.
ಕನ್ನಡ ಮಾತನಾಡುವ 15 ಪೊಲೀಸರ ನಿಯೋಜನೆ
ಭಾಷೆ ವಿಚಾರವಾಗಿ ಏನಾದರೂ ಸಮಸ್ಯೆಯಾಗಿದಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಕಾಸರಗೋಡಿನಿಂದ ಕನ್ನಡ ಮಾತನಾಡುವ 15 ಜನ ಪೊಲೀಸರನ್ನು ಕೂಡ ನಿಯೋಜಿಸಿದ್ದೇವೆ. ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳ ಭಾಗವಾಗಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸ್ಥಳೀಯರೊಂದಿಗೆ ಕೈ ಜೋಡಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಭಕ್ತಾದಿಗಳಲ್ಲಿ ನಮ್ಮ ವಿನಂತಿ ಏನೆಂದರೆ, ದೇವಾಸ್ಥಾನದ ಸಾಮರ್ಥ್ಯ ಇರುವುದೇ 1 ಲಕ್ಷ 25 ಸಾವಿರ ಮಾತ್ರ. ವಾರಾಂತ್ಯದಲ್ಲಿ ಈ ರೀತಿ ಹೆಚ್ಚು ಜನ ಬಂದಾಗ ಕಾಯಲೇಬೇಕಾಗುತ್ತದೆ. ಆದರೆ ಹೊರಗಿನಿಂದ ಬಂದವರಿಗೆ ಮಾಹಿತಿ ಕೊರತೆ ಇದೆ. ಇವತ್ತಿಂದ ಮೈಕ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ, ಸೋಶಿಯಲ್ ಮೀಡಿಯಾದಲ್ಲಿ ಕೆಲ ವೀಡಿಯೋ ತುಣುಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ಕಂಡುಬಂದಿತ್ತು. ಬಳಿಕ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಒಳಗಡೆ ಒಂದೆರಡು ಕುಡಿಯುವ ನೀರಿನ ಘಟಕಗಳು ಇವೆ. ಆದರೆ ಈ ಸಮಯದಲ್ಲಿ ಅದು ಯಾಕೆ ಲಭ್ಯವಿಲ್ಲ, ಅಂತ ಜಿಲ್ಲಾಡಳಿತಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
2ನೇಯದ್ದಾಗಿ ಪ್ಲಾಸ್ಟಿಕ್ ನೀರಿನ ಬಾಟಲ್ ಬ್ಯಾನ್ ಆಗಿದೆ. ಹಾಗಾಗಿ ದೇವಾಸ್ತಾನದ ಹತ್ತಿರ ಬಾಟಲ್ ತೆಗೆದುಕೊಂಡು ಹೋಗಲು ಬಿಡಲ್ಲ. ಅಲ್ಲಲ್ಲಿ ಲೋಟದಲ್ಲಿ ಕುಡಿಯುವ ನೀರಿನ್ನ ಕೊಡೋ ವ್ಯವಸ್ಥೆ ಮಾಡಲಾಗಿತ್ತು. ಆದರೆ ಭಕ್ತಾದಿಗಳ ಸಂಖ್ಯೆ ಹೆಚ್ಚು ಇದ್ದರಿಂದ ಸಮಸ್ಯೆ ಆಗಿರಬಹುದು.
ದೂರು ಕೊಟ್ಟರೆ ಕ್ರಮ
ಸ್ಥಳೀಯರು ಗೂಂಡಾ ರೀತಿ ವರ್ತಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ವೀಡಿಯೋದಲ್ಲಿ ಈ ರೀತಿ ಆಗಿರುವುದು ಕಂಡುಬಂದಿದೆ. ಹೊರಗಿನವರಿಗೆ ಆ ರೀತಿ ಯಾರಿಗಾದರೂ ಸಮಸ್ಯೆಯಾಗಿದ್ದರೆ ದೂರು ಕೊಡಬಹುದು. ನಾವೂ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ದೇವಾಸ್ಥಾನದ ಆಡಳಿತ ಮಂಡಳಿಯವರಾ ಅಥವಾ ಬೇರೆ ಯಾರಾದ್ರೂ ಆ ರೀತಿ ವರ್ತಿಸಿದ್ದಾರಾ ಎಂದು ನೋಡುತ್ತಿದ್ದೇವೆ. ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕ್ರಮ ತಗೋತಿವಿ ಎಂದು ಹೇಳಿದ್ದಾರೆ.
