ನವದೆಹಲಿ: ಮಮತಾ ಬ್ಯಾನರ್ಜಿ(Mamata Banerjee) ದೆಹಲಿಯಲ್ಲಿ INDIA ಒಕ್ಕೂಟದೊಂದಿಗೆ ಸಭೆ ನಡೆಸುತ್ತಿರುವಾಗಲೇ ತೃಣಮೂಲ ಕಾಂಗ್ರೆಸ್ (TMC) ಸಂಸದರು ದೀದಿಗೆ ಶಾಕ್ ನೀಡಿದ್ದಾರೆ.
ಟಿಎಂಸಿಯ ಪಕ್ಷದ 20 ಬಂಡಾಯ ಸಂಸದರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಬಿಜೆಪಿಯ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವನ್ನು ಸೇರಲು ಇಚ್ಛಿಸಿರುವುದಾಗಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನು ಅನುಭವಿಸಿದ ಬೆನ್ನಲ್ಲೇ ಪಕ್ಷದಲ್ಲಿ ದೊಡ್ಡ ಮಟ್ಟದ ಭಿನ್ನಮತ ಉಂಟಾಗಿ ಈಗ ಎರಡು ಹೋಳಾಗಿದೆ. ಇದನ್ನೂ ಓದಿ: 7 ಪ್ರಕರಣಗಳಲ್ಲಿ ವಾಂಟೆಡ್ – ತಲೆಮರೆಸಿಕೊಂಡಿದ್ದ ಟಿಎಂಸಿ ನಾಯಕ ನೇಪಾಳ ಗಡಿಯಲ್ಲಿ ಅರೆಸ್ಟ್

ತಾವು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಿಂದ ಹೊರಬಂದಿರುವುದರಿಂದ ನಮಗೆ ಸಂಸತ್ತಿನಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿಕೊಡಬೇಕು ಮತ್ತು ಟಿಎಂಸಿ ಸಂಸದೀಯ ನಾಯಕರಾಗಿರುವ ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವವನ್ನು ನಾವು ಒಪ್ಪುವುದಿಲ್ಲ ಎಂದು ಈ ಬಂಡಾಯ ಸಂಸದರು ಮನವಿ ಮಾಡಿದ್ದಾರೆ.
ಈ ಬಂಡಾಯ ಬಣದ ನಾಯಕಿಯಾಗಿ ಕಾಕೋಲಿ ಘೋಷ್ ದಸ್ತಿದಾರ್ (Kakoli Ghosh Dastidar) ಅವರನ್ನು ಗುರುತಿಸಬೇಕೆಂದು ಸ್ಪೀಕರ್ ಅವರಿಗೆ ಕೋರಲಾಗಿದೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ಅರೂಪ್ ಚಕ್ರವರ್ತಿ, ಪಾರ್ಥ ಭೌಮಿಕ್, ಶತಬ್ದಿ ರಾಯ್, ಜಗದೀಶ್ ವಸುನಿಯಾ, ಜೂನ್ ಮಾಲಿಯಾ ಸೇರಿದಂತೆ ಪ್ರಮುಖ ನಾಯಕರಿದ್ದಾರೆ.
ಲೋಕಸಭೆಯಲ್ಲಿ ಟಿಎಂಸಿ ಒಟ್ಟು 28 ಸಂಸದರನ್ನು ಹೊಂದಿದ್ದು, ಅವರಲ್ಲಿ 20 ಸಂಸದರು ಬಂಡಾಯ ಎದ್ದಿರುವುದರಿಂದ ಮಮತಾ ಬ್ಯಾನರ್ಜಿ ಅವರಿಗೆ ದೆಹಲಿ ಮಟ್ಟದಲ್ಲಿ ಭಾರೀ ರಾಜಕೀಯ ಹಿನ್ನಡೆಯಾಗಿದೆ.
