ಚಾಮರಾಜನಗರ: ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿ ಜೀವಂತ ಉಡ ಹಿಡಿದು ಮಾರಾಟಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಸಿಐಡಿ ಅರಣ್ಯ ಘಟಕದ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಪಾಪನಕೆರೆ ಸಮೀಪ ಆರೋಪಿಗಳು ಜೀವಂತ ಉಡವನ್ನು ಹಿಡಿದು ಮಾರಾಟಕ್ಕೆ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ದಾಳಿ ನಡೆಸಿದರು. ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ, ಅವರಿಂದ ಜೀವಂತ ಉಡವನ್ನು ವಶಪಡಿಸಿಕೊಂಡರು. ಬಂಧಿತ ಆರೋಪಿಗಳನ್ನು ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಮೇಡಿ ಮಲ್ಲಸಂದ್ರ ಗ್ರಾಮದ ಜಮೀರುಲ್ಲ ಶರೀಫ್ (56) ಹಾಗೂ ಆನೇಕಲ್ ತಾಲ್ಲೂಕಿನ ಶಿಕಾರಿಪಾಳ್ಯದ ಶೇಖ್ ರಫೀಕ್ (54) ಎಂದು ಗುರುತಿಸಲಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರಡಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಟ್ಟೂರು, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಕೊಳ್ಳೇಗಾಲ ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪನಿರೀಕ್ಷಕ ಅವಿನಾಶ್ ನೇತೃತ್ವದಲ್ಲಿ ಸಿಬ್ಬಂದಿ ಬಸವರಾಜು ಎಂ., ಸಯದ್ ಜಮೀಲ್ ಅಹಮ್ಮದ್, ರಾಮಚಂದ್ರ, ಸಯ್ಯದ್ ಮುಷರಫ್, ಲತಾ, ಪ್ರಭಾಕರ್ ಹಾಗೂ ಬಸವರಾಜು ನಡೆಸಿದರು.
