– ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಚರ್ಚೆ
ನವದೆಹಲಿ: ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತಾದ ವಿವಾದದ ನಡುವೆ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿರುವ ವಿರೋಧ ಪಕ್ಷಗಳ ‘ಇಂಡಿಯಾ’ (INDIA Bloc) ಮೈತ್ರಿಕೂಟವು, ‘ಎಸ್ಐಆರ್’ (SIR) ಪ್ರಕ್ರಿಯೆಯ ವಿರುದ್ಧ ಜಂಟಿ ಪ್ರತಿಭಟನೆಗೆ ಕಾರ್ಯಯೋಜನೆಯನ್ನು ಅಂತಿಮಗೊಳಿಸಲು ಮತ್ತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಲು ಬುಧವಾರ ಸಭೆ ಸೇರಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ಟಿಎಂಸಿಯ ಮಮತಾ ಬ್ಯಾನರ್ಜಿ ಹಾಗೂ ಎಡಪಕ್ಷಗಳು (ಸಿಪಿಐ, ಸಿಪಿಎಂ), ಎನ್ಸಿಪಿ-ಎಸ್ಪಿ ಮತ್ತು ಸೇನಾ ಯುಬಿಟಿ (Sena UBT) ಸದಸ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ದೆಹಲಿಗೆ ಆಗಮಿಸಿದ ಮಮತಾ ಅವರು, ಚುನಾವಣಾ ಆಯೋಗದ (EC) ಮೇಲೆ ಗಮನ ಕೇಂದ್ರೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ ಕಳ್ಳತನದ ವಿರುದ್ಧ ‘ಬೀದಿಗಿಳಿದು ಹೋರಾಡಬೇಕು’ – CWC ಸಭೆಯಲ್ಲಿ ರಾಹುಲ್ ಗಾಂಧಿ ಕರೆ
SIR ಪ್ರಕ್ರಿಯೆಯಲ್ಲಿನ ಮತದಾರರ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. SIR ವಿರುದ್ಧ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುವುದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮುಂದಿನ ಕ್ರಮ, ECI ಕಾರ್ಯವೈಖರಿ ಕುರಿತು ಪ್ರತಿಪಕ್ಷಗಳ ಜಂಟಿ ಪ್ರತಿಕ್ರಿಯೆ ರೂಪಿಸುವ ಬಗ್ಗೆ ನಾಯಕರು ಚರ್ಚಿಸಲಿದ್ದಾರೆ ಎನ್ನಲಾಗಿದೆ.
EVM, VVPAT ಸೇರಿದಂತೆ ಚುನಾವಣಾ ಪ್ರಕ್ರಿಯೆಯ ಇತರ ವಿಚಾರಗಳು, ಪ್ರತಿಪಕ್ಷಗಳ ನಡುವೆ ಜಂಟಿ ಕಾರ್ಯತಂತ್ರ ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಬಹುದು ಎನ್ನಲಾಗಿದೆ.
ಡಿಎಂಕೆ ಮತ್ತು ಎಎಪಿ ಸಭೆಯಲ್ಲಿ ಭಾಗವಹಿಸುವುದಿಲ್ಲ. ಇತ್ತ, ಉತ್ತರ ಪ್ರದೇಶದಲ್ಲಿ ರಾಜ್ಯಸಭಾ ಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಕಾರಣದಿಂದಾಗಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸಭೆಗೆ ಹಾಜರಾಗುವುದಿಲ್ಲ. ಬದಲಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಲಿದ್ದಾರೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರು ಮೋದಿ ಸರ್ಕಾರದ ಕೈಗೊಂಬೆ: ಖರ್ಗೆ ವಾಗ್ದಾಳಿ
ಸಿಪಿಎಂನ ಎಂ.ಎ. ಬೇಬಿ ಸೇರಿದಂತೆ ಎಡಪಕ್ಷದ ಸದಸ್ಯರು, ಮುಖ್ಯ ಚುನಾವಣಾ ಆಯುಕ್ತರ (CEC) ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ಚುನಾವಣಾ ಆಯೋಗದ ಪ್ರಧಾನ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಪಿಎಂ ಆರೋಪಿಸಿದೆ.

