– ನಿತ್ಯವೂ ಜನರಿಗೆ ಜೀವ ಭಯ
ಬೆಂಗಳೂರು: ರಾಜ್ಯದಲ್ಲಿ ಸಂಭವಿಸುವ ಮಾನವ ವನ್ಯಜೀವಿ ಸಂಘರ್ಷದಲ್ಲಿ ಶೇ.38 ರಷ್ಟು ಸಾವು ನೋವುಗಳು ಕೊಡಗು (Kodagu) ಜಿಲ್ಲೆಯೊಂದರಲ್ಲೇ ನಡೆಯುತ್ತಿದೆ. ಅದರಲ್ಲೂ ಇತ್ತೀಚೆಗೆ ಮಾನವ ಸಾವು ಪ್ರಕರಣಗಳು ಹೆಚ್ಚಿವೆ. ಕೇವಲ ಎರಡೂವರೆ ತಿಂಗಳಿನಲ್ಲಿ 6-7 ಮಂದಿ ಕಾಡಾನೆ ದಾಳಿಗೆ (Wild Elephant Attack) ಸಿಲುಕಿ ಮೃತಪಟ್ಟಿದ್ದಾರೆ.
ಹೀಗಾಗಿ ನಿರಂತರವಾಗಿ ಕಾಡಾನೆಗಳ ಅಟ್ಟಹಾಸದಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ ಎಂದು ಕೊಡಗಿನ ರೈತರು ಸಿಡಿದಿದ್ದಾರೆ. ರಾಜ್ಯ ಹೆದ್ದಾರಿಯನ್ನೇ ಬಂದ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಆನೆ-ಮಾನವನ ಸಂಘರ್ಷ ಇಂದು, ನಿನ್ನೆಯದು ಅಲ್ಲ. ಹಿಂದೆ ರಾತ್ರಿ ಸಮಯದಲ್ಲಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳು ಇತ್ತೀಚಿನ ವರ್ಷಗಳಲ್ಲಿ ಹಗಲಿನ ವೇಳೆಯಲ್ಲೇ ಗ್ರಾಮೀಣ ಜನರಿಗೆ ಉಪಟಳ ನೀಡುತ್ತಿವೆ. ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ – ಆರೆಂಜ್ ಅಲರ್ಟ್ ಘೋಷಣೆ

ಹೀಗಾಗಿ ಕೊಡಗಿನ ಹಲವಾರು ಗ್ರಾಮೀಣ ಭಾಗಗಳಲ್ಲಿ ಕಾಫೀ ತೋಟಗಳಿಗೆ ತೆರಳಲು ಕಾರ್ಮಿಕರು ಹಿಂದೆಟ್ಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. 2 ದಿನಗಳ ಹಿಂದಷ್ಟೇ ಕಾಡಾನೆ ತುಳಿತಕ್ಕೆ ಸಿಕ್ಕಿ ಐಜಿಪಿ ಪತ್ನಿ ಸಾವನ್ನಪ್ಪಿದ್ದಾರೆ. ಇದು ಜಿಲ್ಲೆಯ ಜನರ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.
ಇಷ್ಟೇ ಅಲ್ಲದೇ ತೋಟಕ್ಕೆ ಹೋಗಿದ್ದ ಕಾರ್ಮಿಕರನ್ನ ಕಾಡಾನೆ ಅಟ್ಟಾಡಿಸಿಕೊಂಡು ಹೋಗಿತ್ತು. ಈ ನಡುವೆ ತೋಟದ ಕಾರ್ಮಿಕರು ಕ್ಷಣಾರ್ಧದಲ್ಲೇ ಪ್ರಾಣಪಾಯದಿಂದ ಪಾರಾಗಿ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ದಿನ ನಿತ್ಯ ಕಾಡಾನೆಗಳ ಉಪಟಳ ಹೆಚ್ಚಾಗಿ ಜನರೇ ಜೀವಭಯದಿಂದ ಬದುಕುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ವನ್ಯಜೀವಿ ಬೇಟೆಗಾಗಿ ಸಂಚು – ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ 7 ಮಂದಿ ಅರೆಸ್ಟ್
ಇತ್ತ ಜಿಲ್ಲೆಯ ರೈತ ಸಂಘ, ಹಸಿರು ಸೇನೆ ಸಂಘಟನೆ ಸೇರಿದಂತೆ ಗ್ರಾಮೀಣ ಭಾಗದ ನೂರಾರು ಜನರು ಅರಣ್ಯ ಇಲಾಖೆಯ ಕಾರ್ಯವೈಖರಿ ವಿರುದ್ಧ ಸಿಡಿದೆದ್ದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಮೊನ್ನೆ ಬೆಳಿಗ್ಗೆಯಿಂದಲ್ಲೇ ರೈತ ಸಂಘಟನೆಯ ಸದಸ್ಯರು ಗ್ರಾಮೀಣ ಪ್ರದೇಶದ ನೂರಾರು ರೈತರು ಕೊಡಗಿನ ತಿತಿಮತಿ ಗ್ರಾಮದಲ್ಲಿ ಗೋಣಿಕೋಪ್ಪ-ಮೈಸೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ರು. ಅರಣ್ಯ ಇಲಾಖೆಯ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯದಿಂದ ದಿನ ಬೆಳಿಗ್ಗೆ ಅದ್ರೆ ಸಾಕು ಕೊಡಗು ಜಿಲ್ಲೆಯ ನಾನಾ ಭಾಗಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಪ್ರತಿ ಬಾರಿ ಜೀವಗಳು ಬಲಿಯಾದ ಸಂದರ್ಭದಲ್ಲಿ ಪರಿಹಾರ ಹಣ ನೀಡಿ ಹೋಗುತ್ತಾರೆ. ಶಾಶ್ವತವಾದ ಪರಿಹಾರ ಮಾತ್ರ ಮಾಡ್ತಿಲ್ಲ ಎಂದು ಕಿಡಿಕಾರಿದ್ರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮೈಸೂರು ವಲಯದ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿ 1 ತಿಂಗಳ ಸಮಯ ಕೇಳಿದ್ದಾರೆ. ಆನೆ ಕಂದಕ ಮತ್ತು ತೂಗು ಸೌರಬೇಲಿಯ ಸಮರ್ಪಕ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
