ಮುಂಬೈ: ಮುಂಬರುವ ಐರ್ಲೆಂಡ್(Ireland) ಮತ್ತು ಇಂಗ್ಲೆಂಡ್ ಪ್ರವಾಸಗಳ ಟಿ20ಐ (T20I) ಸರಣಿಗೆ ಭಾರತ ತಂಡದ ನಾಯಕತ್ವದಲ್ಲಿ ಬಿಸಿಸಿಐ (BCCI) ಮಹತ್ವದ ಬದಲಾವಣೆ ಮಾಡಿದೆ.
ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿರುವ ಆಯ್ಕೆ ಸಮಿತಿ, ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್(Shreyas Iyer) ಅವರಿಗೆ ತಂಡದ ಚುಕ್ಕಾಣಿ ನೀಡಿದೆ. ಬಿಸಿಸಿಐನ ಈ ಅನಿರೀಕ್ಷಿತ ನಿರ್ಧಾರವನ್ನು ಸೂರ್ಯಕುಮಾರ್ ಯಾದವ್ ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.
ಮುಂಬೈ ಟಿ20 ಲೀಗ್ ಪಂದ್ಯದ ಟಾಸ್ ವೇಳೆ ಮಾತನಾಡಿ, ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡಕ್ಕೆ ನೂತನ ನಾಯಕರಾಗಿ ಆಯ್ಕೆಯಾಗಿರುವುದರಿಂದ ಖುಷಿಯಾಗಿದೆ. ಶ್ರೇಯಸ್ ಹಾಗೂ ನಾನು ಮುಂಬೈ ಮತ್ತು ಭಾರತ ತಂಡಕ್ಕೆ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಸತತ ಮೂರನೇ ಬಾರಿಗೆ ಮುಂಬೈ ಮೂಲದ ಆಟಗಾರ ಭಾರತ ಟಿ20 ತಂಡಕ್ಕೆ ನಾಯಕರಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಸೂರ್ಯಕುಮಾರ್ ತಿಳಿಸಿದ್ದಾರೆ.
Suryakumar Yadav congratulated Shreyas Iyer on becoming India’s new T20I captain.❤️ pic.twitter.com/dEdakH2n4q
— Vihaan. (@Vihaann96) June 6, 2026
ಅಜಿತ್ ಅಗರ್ಕರ್ ಹೇಳಿದ್ದೇನು?
ಬಿಸಿಸಿಐ (BCCI) ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ (Ajit Agarkar) ಈ ಬಗ್ಗೆ ಮಾತನಾಡಿ, ಸೂರ್ಯಕುಮಾರ್ ಯಾದವ್ ಕುರಿತು ಮಾತನಾಡುವುದಾದರೆ, ಅವರನ್ನು ಬದಲಿಸುವುದು ಕಠಿಣ ನಿರ್ಧಾರವಾಗಿತ್ತು. ಅವರ ನೇತೃತ್ವದಲ್ಲಿ ಭಾರತ ಕಳೆದ ವಿಶ್ವಕಪ್ ಗೆದ್ದಿತ್ತು. ಸಾಮಾನ್ಯವಾಗಿ ಪ್ರತಿಯೊಂದು ವಿಶ್ವಕಪ್ ಆವೃತ್ತಿಯ ಬಳಿಕ ತಂಡದ ಭವಿಷ್ಯದ ದೃಷ್ಟಿಯಿಂದ ಕೆಲ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಸೂರ್ಯಕುಮಾರ್ ಯಾದವ್ ಅವರ ವೈಯಕ್ತಿ ಫಾರ್ಮ್ ಕೂಡ ಈ ನಿರ್ಧಾರಕ್ಕೆ ಮುಖ್ಯ ಕಾರಣ. ನಮಗೆ ಮುಂಬರುವ ವಿಶ್ವಕಪ್‌ಗೆ ಇನ್ನೂ ಎರಡು ವರ್ಷಕ್ಕಿಂತ ಹೆಚ್ಚು ಸಮಯವಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ತಂಡಕ್ಕೆ ಈ ನಿರ್ಧಾರ ಸೂಕ್ತ ಎಂದು ಭಾವಿಸುತ್ತೇವೆ. ಶ್ರೇಯಸ್ ಅಯ್ಯರ್ ಅವರು ನಾಯಕತ್ವಕ್ಕೆ ಸಂಪೂರ್ಣ ಅರ್ಹರು ಎಂದಿದ್ದಾರೆ. ಇದನ್ನೂ ಓದಿ: PublicTV Explainer | ಕಾಂಟ್ರ್ಯಾಕ್ಟ್‌ನಿಂದಲೇ ಹೊರದಬ್ಬಿದ ಅಯ್ಯರ್‌ಗೆ ಇಂದು ಟೀಂ ಇಂಡಿಯಾ ನಾಯಕನ ಪಟ್ಟ!
ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಪ್ರಿನ್ಸ್ ಯಾದವ್.
