ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿ ಉದಯೋನ್ಮುಖ ಪ್ರತಿಭೆಗಳ ದೊಡ್ಡ ವೇದಿಕೆ ಎಂಬುದು ಮತ್ತೆ ಸಾಬೀತಾಗಿದೆ. ಪ್ರತಿ ವರ್ಷವೂ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡುತ್ತಾ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದುಕೊಳ್ಳುವ ತವಕದಲ್ಲಿದ್ದರೆ, ಈಗಾಗಲೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದವರು ನಾಯಕನ ಪಟ್ಟದ ಮೇಲೆ ಕಣ್ಣಿಟ್ಟಿರುತ್ತಾರೆ. ಇದಕ್ಕೆ T20i ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಶ್ರೇಯಸ್ ಅಯ್ಯರ್ (Shreyas Iyer) ಅವರೇ ಸಾಕ್ಷಿಯಾಗಿದ್ದಾರೆ.
ಭಾರತೀಯ ಕ್ರಿಕೆಟ್ (Indian Cricket) ಇತಿಹಾಸದಲ್ಲಿ ಕ್ಯಾಪ್ಟನ್ಸಿ ಎಂದಾಕ್ಷಣ ತಟ್ಟನೆ ನೆನಪಾಗುವ ಹೆಸರುಗಳೆಂದ್ರೆ, ಕಪಿಲ್ ದೇವ್, ಮೊಹಮ್ಮದ್ ಅಝರುದ್ದೀನ್, ಸೌರವ್ ಗಂಗೂಲಿ, ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೆಸರು. ಸದ್ಯ ಭಾರತ ತಂಡದ ಏಕದಿನ ತಂಡವನ್ನ ಯುವ ಆಟಗಾರ ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ಆದ್ರೆ ಭವಿಷ್ಯದ ಟೂರ್ನಿಗಳ ಉದ್ದೇಶದಿಂದ ಬಿಸಿಸಿಐ ಹೊಸ ನಾಯಕತ್ವಕ್ಕೆ ಮಣೆ ಹಾಕಿದೆ. ಒಂದೇ ವರ್ಷದಲ್ಲಿ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದುಕೊಟ್ಟ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನ ಹೊರದಬ್ಬಿ, ಶ್ರೇಯಸ್ ಅಯ್ಯರ್ ಅವರಿಗೆ ಬಿಸಿಸಿಐ T20i ನಾಯಕತ್ವದ ಹೊಣೆ ನೀಡಿದೆ.

ಗಮನಾರ್ಹವೆಂದ್ರೆ 2023 ರಲ್ಲಿ ಬಿಸಿಸಿಐ (BCCI) ಕೇಂದ್ರ ಗುತ್ತಿಗೆಯಿಂದಲೇ ಹೊರಬಿದ್ದ ಶ್ರೇಯಸ್ ಅಯ್ಯರ್ ಇಂದು ಟೀಂ ಇಂಡಿಯಾ ನಾಯಕನಾಗಿ ಆಯ್ಕೆಯಾಗಿರುವುದರ ಹಿಂದೆ ಅನೇಕ ಏಳುಬೀಳಿನ ಕಥೆಗಳಿವೆ. ಅವುಗಳನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಅಯ್ಯರ್ ಬಿಸಿಸಿಐ ಕಾಂಟ್ರ್ಯಾಕ್ಟ್ ಕಳೆದುಕೊಂಡಿದ್ದೇಕೆ?
ದೇಸಿ ಕ್ರಿಕೆಟ್‌ನಲ್ಲಿ ಆಡಲು ಆಸಕ್ತಿ ತೋರದ ಹಿನ್ನೆಲೆ 2023 ರಲ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆಯಿಂದಲೇ ಶ್ರೇಯಸ್ ಅಯ್ಯರ್ ಅವರನ್ನ ಕೈಬಿಟ್ಟಿತ್ತು. ಅಷ್ಟೇ ಅಲ್ಲ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೇರಿದಂತೆ ಅನೇಕ ಏಕದಿನ ಹಾಗೂ ಟಿ20 ಸರಣಿಗಳಿಂದಲೂ ದೂರ ಇಟ್ಟಿತು. ಇದಕ್ಕೆಲ್ಲ ಕುಗ್ಗದ ಅಯ್ಯರ್, ಪ್ರತಿಯೊಂದು ಹಂತವನ್ನು ಸವಾಲಾಗಿ ಸ್ವೀಕರಿಸಿದ್ರು. ಮತ್ತೆ ದೇಸಿ ಕ್ರಿಕೆಟ್‌ನತ್ತ ಮರಳಿದ್ರು.

ರಣಜಿ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡಿದ ಶ್ರೇಯಸ್ ಅಯ್ಯರ್ ಮುಂಬೈ ಪರ ಆಡುತ್ತಿದ್ರು. ಆ ಸಂದರ್ಭದಲ್ಲಿ ಅನೇಕ ಇನ್ನಿಂಗ್ಸ್‌ಗಳಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು. ಇದರಿಂದ ಸಾಕಷ್ಟು ಟೀಕೆಗಳಿಗೂ ಗುರಿಯಾದರು. ಆದ್ರೆ ಅವರನ್ನ ಕೈ ಹಿಡಿದಿದ್ದು 2024 ರ ಐಪಿಎಲ್ ಟೂರ್ನಿ.
ವೃತ್ತಿ ಬದುಕಿಗೆ ತಿರುವು ಕೊಟ್ಟ ಚಾಂಪಿಯನ್ ಪಟ್ಟ
ಹೌದು. ಇನ್ನೇನು ರಾಷ್ಟ್ರೀಯ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರ ವೃತ್ತಿ ಬದುಕು ಮುಗಿದೇ ಹೋಯ್ತು ಅಂತ ಅನೇಕರು ಭಾವಿಸಿದ್ದರು. ಆದ್ರೆ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್, ಟ್ರೋಫಿ ಗೆದ್ದುಕೊಡುವಲ್ಲಿ ಯಶಸ್ವಿಯಾದರು. ಇದು ಮುಂದೆ ಅವರ ಕ್ರಿಕೆಟ್ ವೃತ್ತಿ ಬದುಕಿನ ಹಂತವನ್ನೇ ಬದಲಿಸುತ್ತಾ ಬಂದಿತ್ತು.

ಲೈಫ್ ಕೊಟ್ಟ ಆ ಒಂದು ಫೋನ್ ಕಾಲ್
2024 ಐಪಿಎಲ್ ಟೂರ್ನಿ ಬಳಿಕ ಶ್ರೇಯಸ್ ಅಯ್ಯರ್ ಮತ್ತೆ ರಾಷ್ಟ್ರೀಯ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದು ಆ ಒಂದು ಫೋನ್ ಕಾಲ್‌ನಿಂದ. ಅಸಲಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆಯ್ಕೆಯಾದ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರ ಹೆಸರೇ ಇರಲಿಲ್ಲ. ಅದೇ ಸಮಯಕ್ಕೆ ರಿಷಭ್ ಪಂತ್ ಅವರು ತಂಡದಿಂದ ಹೊರಗುಳಿಯಬೇಕಾಯಿತು. ಈ ವೇಳೆ ಮನೆಯಲ್ಲಿ ಟಿವಿ ನೋಡ್ತಾ ಕುಳಿತಿದ್ದ ಅಯ್ಯರ್ ಅವರಿಗೆ ರೋಹಿತ್ ಶರ್ಮಾ ಅವರಿಂದ ಫೋನ್ ಕಾಲ್ ಬಂದಿತ್ತು. ಕೂಡಲೇ ಚಾಂಪಿಯನ್ಸ್ ಟ್ರೋಫಿ ತಂಡವನ್ನ ಕೂಡಿಕೊಂಡರು. ಆ ಸೀಸನ್‌ನಲ್ಲಿ ಟೀಂ ಇಂಡಿಯಾ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅಯ್ಯರ್ 5 ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಅತಿಹೆಚ್ಚು (243 ರನ್) ಹಾಗೂ ಟೂರ್ನಿಯಲ್ಲಿ 2ನೇ ಗರಿಷ್ಠ ರನ್ ಗಳಿಸಿದ್ರು. ಅಲ್ಲದೇ ಸೆಮಿಫೈನಲ್, ಫೈನಲ್‌ನಲ್ಲಿ ಬಲಿಷ್ಠ ತಂಡಗಳ ವಿರುದ್ಧ ನಿರ್ಣಾಯಕ ಸ್ಕೋರ್ ಗಳಿಸಿ ಟ್ರೋಫಿ ತಂದುಕೊಡುವಲ್ಲಿ ಯಶಸ್ವಿಯಾದರು.

ನಿಜವಾಗೇಬಿಡ್ತು ವದಂತಿ
2025ರ ಟಿ20 ಏಷ್ಯಾಕಪ್ ಟೂರ್ನಿಗೆ ಶ್ರೇಯಸ್ ಅಯ್ಯರ್ ಅವರನ್ನ ಬಿಸಿಸಿಐ ಆಯ್ಕೆ ಮಾಡದೇ ಕಡೆಗಣಿಸಿತ್ತು. 2026 ಟಿ20 ವಿಶ್ವಕಪ್ ವೇಳೆ ತಂಡದಲ್ಲಿದ್ದರೂ ಪ್ಲೇಯಿಂಗ್-11ಗೆ ಇಳಿಸದ ಕಾರಣ ಕ್ರಿಕೆಟ್ ತಜ್ಞರು ಬಿಸಿಸಿಐ ವಿರುದ್ಧ ವ್ಯಾಪಕ ಟೀಕೆ ಮಾಡುತ್ತಿದ್ದರು. ಆ ಬಳಿಕ ಶ್ರೇಯಸ್ ಅಯ್ಯರ್ ಅವರಿಗೆ ಟೀಂ ಇಂಡಿಯಾದ ನಾಯಕತ್ವ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂಬ ವದಂತಿ ಹಬ್ಬಿತ್ತು. ಆದ್ರೆ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಯ್ಯರ್ ಅವರ ಆಲ್‌ರೌಂಡ್ ಪ್ರದರ್ಶನ ಆ ವದಂತಿಯನ್ನ ನಿಜವಾಗಿಸಿದೆ. ಸದ್ಯ ಬಿಸಿಸಿಐ ಅವರನ್ನ ಟಿ20 ತಂಡಕ್ಕೆ ನೂತನ ನಾಯಕನನ್ನಾಗಿ ಆಯ್ಕೆ ಮಾಡಿದೆ.
ಅಯ್ಯರ್‌ಗೆ ನಾಯಕನ ಪಟ್ಟ ನೀಡಲು ಕಾರಣವೇನು?
* ನಾಯಕ-ಆಟಗಾರನಾಗಿ ಅಯ್ಯರ್ ಸಕ್ಸಸ್
2025-26 ನೇ ಆವೃತ್ತಿಯ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಅಮೋಘ ಪ್ರದರ್ಶನ ನೀಡುತ್ತಾ ಬಂದರು. ತಂಡ ಸಂಕಷ್ಟದಲ್ಲಿದ್ದಾಗ ತಾನೇ ಜವಾಬ್ದಾರಿ ತೆಗೆದುಕೊಂಡು, ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಅಯ್ಯರ್ ತೋರುತ್ತಿದ್ದರು. ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಹಾಗಾಗಿ ಅವರು ನಾಯಕತ್ವದ ಜೊತೆಗೆ ಬ್ಯಾಟರ್ ಆಗಿಯೂ ಯಶಸ್ವಿಯಾಗುತ್ತಿದ್ದರು. ಇದರ ಜೊತೆಗೆ ಅವರು ಕ್ಷೇತ್ರ ರಕ್ಷಣೆಯ ವಿಷಯದಲ್ಲಿ ಉಳಿದ ಆಟಗಾರರಿಗಿಂತಲೂ ಒಂದು ಹೆಜ್ಜೆ ಮುಂದಿದ್ದರು. ಅದಕ್ಕೆ ಉದಾಹರಣೆಯಾಗಿ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಕ್ಯಾಚ್ ಅನ್ನು ಅಯ್ಯರ್ ಪಡೆದುಕೊಂಡ ರೀತಿ.

* ನಾಯಕನಾಗಿ ಶ್ರೇಯಸ್ ಅಯ್ಯರ್ ಸಾಧನೆ
ಐಪಿಎಲ್‌ನಲ್ಲಿ ನಾಯಕನಾಗಿ ಮೂರು ಬೇರೆ ಬೇರೆ ತಂಡಗಳನ್ನು ಫೈನಲ್‌ಗೆ ತೆಗೆದುಕೊಂಡು ಹೋದ ಸಾಧನೆ ಅಯ್ಯರ್ ಮಾಡಿದ್ದಾರೆ. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ಗೆ ತೆಗೆದುಕೊಂಡು ಹೋಗಿದ್ದರು. 10 ವರ್ಷಗಳ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಫೈನಲ್‌ಗೆ ತೆಗೆದುಕೊಂಡು ಹೋಗಿದ್ದರು. ಇದರ ಜೊತೆಗೆ 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಪ್ಲೇ ಆಫ್‌ಗೆ ತಲುಪಿಸಿದ್ದರು. ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವಿನ ಫಲಿತಾಂಶ ಹೊಂದಿರುವ ನಾಯಕ ಎಂಬ ದಾಖಲೆ ಕೂಡ ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿದೆ.
* ಯುವಪಡೆ ಮುನ್ನಡೆಸುವ ಜವಾಬ್ದಾರಿ
ಒಂದು ಕಾಲದಲ್ಲಿ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಕ್ರಿಸ್ ಗೇಲ್, ಆಡಂ ಗಿಲ್ಕ್ರಿಸ್ಟ್, ಮಹೇಲ ಜಯವರ್ಧನೆ, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಿಂದ ಕೂಡಿರುತ್ತಿದ್ದ ಪಂಜಾಬ್ ಕಿಂಗ್ಸ್ ಕಳೆದ 2 ಆವೃತ್ತಿಗಳಲ್ಲಿ ಯುವ ಪಡೆಯನ್ನ ಹೊಂದಿದೆ. ಅಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಆಟಗಾರರಿಲ್ಲ. ತಂಡವು ದೇಶೀಯ ಹಾಗೂ ಸ್ಥಳೀಯ ಆಟಗಾರರಿಂದ ಕೂಡಿದೆ. ಉದಾಹರಣೆಗೆ, ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ವೈಶಾಕ್ ವಿಜಯ್ ಕುಮಾರ್ ಹೀಗೆ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಯುವ ಪ್ರತಿಭೆಗಳೇ ಈ ತಂಡದ ಶಕ್ತಿಯಾಗಿದ್ದಾರೆ. ಇಂತಹ ತಂಡವನ್ನ 2025 ರಿಂದ ಅಯ್ಯರ್ ಅವರು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. 2026 ರ ಐಪಿಎಲ್‌ನಲ್ಲಿ 7 ಪಂದ್ಯಗಳ ಬಳಿಕ ಎದುರಿಸಿದ ಸತತ 6 ಸೋಲು ತಂಡವನ್ನು ಪ್ಲೇ ಆಫ್‌ನಿಂದ ಹೊರಗುಳಿಯುವಂತೆ ಮಾಡಿತು.

ʻಸ್ಕೈʼ ಹೊರದಬ್ಬಿದ್ದೇಕೆ?
3-4 ತಿಂಗಳ ಹಿಂದಷ್ಟೇ ಭಾರತ ತಂಡಕ್ಕೆ ಐತಿಹಾಸಿಕ ಟಿ20 ವಿಶ್ವಕಪ್ ತಂದುಕೊಟ್ಟಿದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನ ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಬಿಸಿಸಿಐ ಕಾರಣ ನೀಡಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮಾತನಾಡಿ, ಕಠಿಣ ದಾರಿಯ ಮೂಲಕ ಬಂದು ವಿಶ್ವಕಪ್ ತಂದುಕೊಟ್ಟಿರುವುದು ನಿಜ. ವಿಶ್ವಕಪ್ ಗೆದ್ದ ತಕ್ಷಣ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಆದರೆ ಪ್ರತಿಯೊಂದು ವಿಶ್ವಕಪ್ ಮುಗಿದ ನಂತರ ನಾವು ಮುಂದಿನ ಹಾದಿಯ ಬಗ್ಗೆ ಯೋಚಿಸಬೇಕಾಗುತ್ತದೆ. ಸೂರ್ಯ ಅವರ ಇತ್ತೀಚಿನ ಫಾರ್ಮ್ ಹಾಗೂ ಮುಂದಿನ 2 ವರ್ಷಗಳ ಟಿ20 ಸರಣಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಈ ಕಠಿಣ ನಿರ್ಧಾರಕ್ಕೆ ಬಂದಿದ್ದೇವೆ. ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಅರ್ಹರಾಗಿದ್ದಾರೆ. ತಂಡದ ಹಿತದೃಷ್ಟಿಯಿಂದ ಸೂರ್ಯಕುಮಾರ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿಯೇ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
