ನವದೆಹಲಿ: ಅಮೆರಿಕ (America)ದಲ್ಲಿ ಪಾರ್ಟ್‌ಟೈಮ್ ಪಿಜ್ಜಾ (Pizza) ಡೆಲಿವರಿ ಕೆಲಸ ಮಾಡುತ್ತಿದ್ದ ತೆಲಂಗಾಣ (Telangana) ಮೂಲದ 28 ವರ್ಷದ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ನಕಲಿ ಪಿಜ್ಜಾ ಆರ್ಡರ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಯುವಕನನ್ನು ಅಂಶುಲ್ ಕುಂಚಾ ಎಂದು ಗುರುತಿಸಲಾಗಿದೆ. ಅವರು ಅಮೆರಿಕದ ಫಿಲಡೆಲ್ಫಿಯಾ ನಗರದಲ್ಲಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವಾರಾಂತ್ಯದಲ್ಲಿ ಹೆಚ್ಚುವರಿ ಆದಾಯಕ್ಕಾಗಿ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ:ಕುಟುಂಬಸ್ಥರಿಗೆ ಚಾಕು ಇರಿದ ಪಾಪಿ ಮಗ – ತಂದೆ ಅಕ್ಕ ಸಾವು, ತಾಯಿ ಸ್ಥಿತಿ ಗಂಭೀರ
ಶನಿವಾರ ರಾತ್ರಿ ಅಂಶುಲ್ ಅವರಿಗೆ ಪಿಜ್ಜಾ ಡೆಲಿವರಿ ಆರ್ಡರ್ ಬಂದಿತ್ತು. ಆರ್ಡರ್ ನೀಡಿದ್ದ ಸ್ಥಳಕ್ಕೆ ತಲುಪಿದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅಂಶುಲ್ ಅವರ ತಲೆಗೆ ಹಲವು ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕುಟುಂಬಸ್ಥರು, ಅಂಶುಲ್ ಅವರ ಯಾವುದೇ ವಸ್ತುಗಳನ್ನು ಕಳ್ಳತನ ಮಾಡಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಈ ಹತ್ಯೆಯ ಹಿಂದಿನ ಉದ್ದೇಶ ಏನು ಎಂಬ ಪ್ರಶ್ನೆ ಮೂಡಿದೆ. ಘಟನೆಯ ವೇಳೆ ಮುಖ ಮುಚ್ಚಿಕೊಂಡಿದ್ದ ಇಬ್ಬರು ಶಂಕಿತರು ಸ್ಥಳದ ಸುತ್ತಮುತ್ತ ಕಾಣಿಸಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಅಂಶುಲ್ ಅವರ ಸಹೋದರಿ ತನ್ವಿ, ಇದು ಪೂರ್ವಯೋಜಿತ ಸಂಚು ಎಂದು ಆರೋಪಿಸಿದ್ದಾರೆ. ನಕಲಿ ಪಿಜ್ಜಾ ಆರ್ಡರ್ ಮೂಲಕ ಅಂಶುಲ್ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ
ಸುಮಾರು ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಅಂಶುಲ್ ಅವರ ಪಾರ್ಥಿವ ಶರೀರವನ್ನು ಶೀಘ್ರವೇ ಭಾರತಕ್ಕೆ ತರಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಜೊತೆಗೆ ಹತ್ಯೆ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ನಡುವೆ, ನ್ಯೂಯಾರ್ಕ್‌ನ ಭಾರತೀಯ ರಾಯಭಾರ ಕಚೇರಿ ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿದ್ದು, ಸ್ಥಳೀಯ ಅಧಿಕಾರಿಗಳು ಹಾಗೂ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ಸಹಾಯ ನೀಡಲಾಗುತ್ತಿದೆ ಎಂದು ತಿಳಿಸಿದೆ.
