ತಿರುವನಂತಪುರಂ: ಮಲಯಾಳಂ ಚಿತ್ರರಂಗದ(Malayalam Film) ಹಿರಿಯ ನಟ ಮತ್ತು ಹಾಸ್ಯ ಕಲಾವಿದ ಸಲೀಂ ಕುಮಾರ್ (56) ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೊಚ್ಚಿಯ(Kochi) ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾಗಿದ್ದಾರೆ.
ಸಲೀಂ ಕುಮಾರ್(Salim Kumar) ಅವರು ದೀರ್ಘಕಾಲದಿಂದ ಲಿವರ್ ಸಿರೋಸಿಸ್ (ಯಕೃತ್ತಿನ ಕಾಯಿಲೆ) ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸುನಿತಾ ಹಾಗೂ ಗಂಡು ಮಕ್ಕಳಾದ ಚಂದು, ಆರೋಮಲ್ ಅವರನ್ನು ಅಗಲಿದ್ದಾರೆ.
10 ಅಕ್ಟೋಬರ್ 1969 ರಂದು ಕೇರಳದ ನಾರ್ತ್ ಪರವೂರ್‌ನಲ್ಲಿ ಜನಿಸಿದ ಸಲೀಂ ಕುಮಾರ್, ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿದ್ದರು. ಆರಂಭದಲ್ಲಿ ಮಿಮಿಕ್ರಿ ಮತ್ತು ಕೇವಲ ಹಾಸ್ಯ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿ ಮನೆಮಾತಾಗಿದ್ದ ಅವರು, ನಂತರದ ದಿನಗಳಲ್ಲಿ ಗಂಭೀರ ಪಾತ್ರಗಳನ್ನು ಪೋಷಿಸಿ ಸೈ ಎನಿಸಿಕೊಂಡಿದ್ದರು.
2010 ರಲ್ಲಿ ಬಿಡುಗಡೆಯಾದ ‘ಅದಾಮಿಂಟೆ ಮಕನ್ ಅಬು’ ಚಿತ್ರದ ಅತ್ಯುತ್ತಮ ಮತ್ತು ಕರುಣಾಜನಕ ನಟನೆಗಾಗಿ ಅವರಿಗೆ ದೇಶದ ಅತ್ಯುನ್ನತ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಒಲಿದುಬಂದಿತ್ತು. ‘ಅಚಾನುರಂಗತಾ ವೀಡು’ ಚಿತ್ರದ ನಟನೆಗಾಗಿ ಕೇರಳ ರಾಜ್ಯದ ಎರಡನೇ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಕೇವಲ ನಟನೆಯಷ್ಟೇ ಅಲ್ಲದೆ 2017 ರಲ್ಲಿ ಅವರು ನಿರ್ದೇಶಿಸಿದ ‘ಕರುತ ಜೂಥನ್’ ಚಿತ್ರಕ್ಕೆ ‘ಅತ್ಯುತ್ತಮ ಕಥೆ’ ರಾಜ್ಯ ಪ್ರಶಸ್ತಿ ಕೂಡ ಲಭಿಸಿತ್ತು. ಇದನ್ನೂ ಓದಿ: ನೆಪೋಟಿಸಂ ಬಗ್ಗೆ ಸುದೀಪ್ ಮಾತು ಖಡಕ್
#WATCH | Kochi, Keralam | Renowned Malayalam actor and National Award winner Salim Kumar passes away at the age of 56.
Visuals from the hospital in which the actor was admitted pic.twitter.com/2bn9QyIzFF
— ANI (@ANI) June 7, 2026
ಸಲೀಂ ಕುಮಾರ್ ಅವರ ಹೆಸರಿನ ಹಿಂದೆ ಒಂದು ವಿಶಿಷ್ಟ ಇತಿಹಾಸವಿದೆ. ಅವರ ತಂದೆ ಗಂಗಾಧರನ್ ಅವರು ಯಾವುದೇ ಧರ್ಮವನ್ನು ನಂಬದ ನಾಸ್ತಿಕರಾಗಿದ್ದರು. ತಮ್ಮ ಮಗನಿಗೆ ಯಾವುದೇ ಒಂದು ನಿರ್ದಿಷ್ಟ ಧರ್ಮದ ಬಣ್ಣ ಬಳಿಯಬಾರದು, ಆತ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂಬ ಉದಾತ್ತ ಉದ್ದೇಶದಿಂದ ಅವರು ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡನ್ನೂ ಬಿಂಬಿಸುವಂತೆ ‘ಸಲೀಂ ಕುಮಾರ್’ ಎಂದು ನಾಮಕರಣ ಮಾಡಿದ್ದರು.
ತಮ್ಮ ವಿಶಿಷ್ಟ ನಟನೆ, ಮುಗ್ಧ ಹಾಸ್ಯ ಹಾಗೂ ಗಂಭೀರ ಪಾತ್ರಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿದ್ದ ಸಲೀಂ ಕುಮಾರ್ ಅವರ ನಿಧನದಿಂದಾಗಿ ಚಿತ್ರರಂಗ ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡು ಬಡವಾಗಿದೆ.
