ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸುತ್ತಿರುವ ಡಿಕೆ ಶಿವಕುಮಾರ್ (DK Shivakumar) ಅವರು ಎಲ್ಲ ಮತ ಬಾಂಧವರ ಪ್ರೀತಿಯ ಮಗನಾಗಲಿ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಶುಭ ಹಾರೈಸಿದ್ದಾರೆ.
ಚಿತ್ರದುರ್ಗ (Chitradurga) ತಾಲ್ಲೂಕಿನ ಮಾದನಾಯಕನಹಳ್ಳಿ (Madanayakanahalli) ಗ್ರಾಮದಲ್ಲಿ ನಡೆದ ಲಿಂ.ಕೊಟ್ರುಸ್ವಾಮಿ ಹಾಗು ಲಿಂ.ಸಾರಂಗಜ್ಜನವರ ಕರ್ತೃ ಗದ್ದುಗೆಗಳ ಪುನಃ ನಿರ್ಮಾಣ ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಡಿಕೆಶಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ವಿಶೇಷ ಎನಿಸಿದೆ. ಡಿಕೆ ಶಿವಕುಮಾರ್ ನಮ್ಮ ಮಠದ ಮಗನಾಗಿ, ಶ್ರದ್ಧಾ ಭಕ್ತಿಯಿಂದ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಿಎಸ್‌ವೈ ನಿವಾಸಕ್ಕೆ ಭೇಟಿ – ಕಾರ್ಯಕ್ರಮಕ್ಕೆ ಬರುವಂತೆ ಡಿಕೆಶಿ ಆಹ್ವಾನ
ವೀರ ಗಂಗಾಧರ ಶಿವಾಚಾರ್ಯರ ಕೃಪಾಶೀರ್ವಾದದಿಂದ ಅವರಿಗೆ ಜಯ ಲಭಿಸಿದ್ದು, ಸಿಎಂ ಕಚೇರಿಯಲ್ಲಿ ಅಜ್ಜಯ್ಯ ಅವರ ಭಾವಚಿತ್ರವಿದೆ. ಹೀಗಾಗಿ ಎಲ್ಲಾ ಭಕ್ತಾದಿಗಳ ಸಂಕಲ್ಪದಿಂದ ಎಲ್ಲರೂ ಗೆದ್ದಿದ್ದೀರೆಂಬ ಸಂತೋಷವಿದೆ. ಇಂದು ಮದ್ಯಾಹ್ನ 3ರಿಂದ 4ಕ್ಕೆ ಸಿಎಂ ಪ್ರಮಾಣವಚನ ಸ್ವೀಕರಿಸಲಿದ್ದು, ರೈತರು, ವರ್ತಕರು, ಸೈನಿಕರು, ಮಹಿಳೆಯರು, ಯುವಕರು ಹಾಗೂ ಮುತ್ಸದ್ಧಿಗಳ ಸೇವೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಆಶೀರ್ವದಿಸಿದ್ದಾರೆ.
ಇನ್ನು ಸಿಎಂ ಆಗಲಿರುವ ಡಿಕೆಶಿ ಸೇವೆ ಸರಳ ಹಾಗೂ ಸಜ್ಜನಿಕೆಯಿಂದ ತೃಪ್ತಿಕರವಾಗಿರಲಿ. ಅವರ ಮೇಲೆ ಮಠದ ಹಾಗೂ ಗುರುಗಳ ಆಶೀರ್ವಾದ ಇರಲಿದೆ. ಸಿಎಂ ಪ್ರಮಾಣ ವಚನದ ಮುಹೂರ್ತ ಕೂಡ ಚೆನ್ನಾಗಿದ್ದು, ಗುರುನುಡಿದ ಮುಹೂರ್ತ ರಾಜಯೋಗ, ಪರಿಪೂರ್ಣವಾಗಿರಲಿದೆ. ಆ ಪ್ರಮಾಣವಚನ ಸಮಾರಂಭಕ್ಕೆ ನಾವು ಸಹ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬೆಂಗಳೂರಿಗೆ ಬರಲಿದ್ದಾರೆ ರೋಹಿತ್, ಹಾರ್ದಿಕ್ ಪಾಂಡ್ಯ
