– ವಿಶ್ವದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಬೇಸನ್ ಇನ್ಸುಲಿನ್ ಅವಿಕ್ಲಿ ಲಾಂಚ್
ಆಧುನಿಕ ಯುಗದಲ್ಲಿ ಮಧುಮೇಹ (Diabetes) ಸಾಮಾನ್ಯ ಕಾಯಿಲೆ ಎನ್ನುವಂತಾಗಿದೆ. ಹಾಗಂತ ಅದನ್ನು ನಿರ್ಲಕ್ಷಿಸುವಂತಿಲ್ಲ. ಇದು ಒಂದು ಹಂತವನ್ನು ದಾಟಿಬಿಟ್ಟರೆ ನಿಯಂತ್ರಣವೂ ಕಷ್ಟ, ಆರೋಗ್ಯಕ್ಕೂ ಅಪಾಯಕಾರಿ. ನಾವು ಯಾವುದೇ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಉತ್ತಮ ಆಹಾರ ಕ್ರಮ, ಜೀವನಶೈಲಿ, ಔಷಧ, ಚಿಕಿತ್ಸೆ ಪ್ರಮುಖ ಪಾತ್ರ ವಹಿಸುತ್ತದೆ. ಈಗಿನ ತುಂಬಾ ಬ್ಯುಸಿಯೆನಿಸುವ ಜೀವನ ವಿಧಾನದಿಂದ ಕ್ರಮಬದ್ಧವಾಗಿ ಎಲ್ಲವನ್ನೂ ಪಾಲಿಸುವುದು ಅಸಾಧ್ಯವಾಗಿದೆ. ಹೀಗಾಗಿ, ಕಾಯಿಲೆ ನಿಂತ್ರಣಕ್ಕೆ ಔಷಧಗಳನ್ನೇ ಹೆಚ್ಚಾಗಿ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಔಷಧವು ದಿನನಿತ್ಯದ ಜೀವನ ಕ್ರಮದ ಒಂದು ಭಾಗ ಎನ್ನುವಂತಾಗಿದೆ. ಮನುಷ್ಯನ ಆರೋಗ್ಯದಲ್ಲಿ ಗಟ್ಟಿ ಸ್ಥಾನ ಪಡೆದುಕೊಂಡಿದೆ.
ಅದೇನೇ ಇರಲಿ, ಮಧುಮೇಹ ಒಂದು ಹಂತ ದಾಟಿದವರಿಗೆ ಪ್ರತಿದಿನ ಮಾತ್ರೆ ಅಥವಾ ಇನ್ಸುಲಿನ್ ಬೇಕಾಗುತ್ತದೆ. ಮೇದೋಜ್ಜೀರಕ ಗ್ರಂಥಿಯ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುವುದರಿಂದ ಮಧುಮೇಹ ಇರುವವರಿಗೆ ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದು ಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿರ್ವಹಿಸಲು ಅನೇಕ ರೋಗಿಗಳಿಗೆ ವಾರವಿಡೀ ನಿತ್ಯ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕು. ಎಷ್ಟೋ ಮಂದಿಗೆ ಇದು ಕಷ್ಟಸಾಧ್ಯ ಮತ್ತು ತುಂಬಾ ದುಬಾರಿ ಎನಿಸಬಹುದು. ಅಂತಹವರಿಗಾಗಿ ವಾರಕ್ಕೊಮ್ಮೆ ಮಾತ್ರ ತೆಗೆದುಕೊಳ್ಳಬೇಕಾದ ಹೊಸ ಇಂಜೆಕ್ಷನ್ ಈಗ ಮಾರುಕಟ್ಟೆಗೆ ಪ್ರವೇಶಿಸಿದೆ. ವಿಶ್ವದಲ್ಲೇ ಮೊದಲು, ಭಾರತ ಕ್ರಾಂತಿಕಾರಿ ಅನ್ವೇಷಣೆ ಮಾಡಿ ಯಶಸ್ವಿಯಾಗಿದೆ. ಇದನ್ನೂ ಓದಿ: PublicTV Explainer: ಮಧುಮೇಹಿಗಳು, ಸ್ಥೂಲಕಾಯರಿಗೆ ಗುಡ್ ನ್ಯೂಸ್; ಭಾರತಕ್ಕೆ ಬಂತು ಓಝೆಂಪಿಕ್ – ಏನಿದು ಔಷಧಿ?

ಮಧುಮೇಹಿಗಳ ದೇಶ ಭಾರತ
ವಿಶ್ವದಲ್ಲೇ ಅತಿಹೆಚ್ಚು ಮಧುಮೇಹಿಗಳಿರುವ ದೇಶಗಳ ಸಾಲಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಚೀನಾ ನಂ.1 ಸ್ಥಾನದಲ್ಲಿದೆ. ಭಾರತ ತನ್ನ ಒಟ್ಟು ಜನಸಂಖ್ಯೆಯಲ್ಲಿ ಶೇ. 11.4 ರಷ್ಟು ಮಧುಮೇಹಿಗಳನ್ನು ಹೊಂದಿದೆ. 11 ಕೋಟಿ ಮಂದಿ ಸಕ್ಕರೆ ಕಾಯಿಲೆ ಹೊಂದಿದ್ದಾರೆ. ನಗರ ಭಾಗದಲ್ಲೇ ಹೆಚ್ಚು ಅಂದರೆ ಶೇ. 16.4 ಇದೆ. ಗ್ರಾಮೀಣ ಭಾಗದಲ್ಲಿ ಶೇ. 8.9 ರಷ್ಟು ಜನರು ಮಧುಮೇಹಕ್ಕೆ ತುತ್ತಾಗಿದ್ದಾರೆ. ಬದಲಾದ ಜೀವನಶೈಲಿ ಮತ್ತು ನಗರೀಕರಣಕ್ಕೆ ಒಗ್ಗಿಕೊಂಡ ಪರಿಣಾಮ ದೇಶದಲ್ಲಿ ಇದು ಉಲ್ಬಣವಾಗಿದೆ. ಊಟದಲ್ಲಿ ಹೆಚ್ಚಾಗಿ ಅನ್ನ ಬಳಕೆ ಮತ್ತು ಸಂಸ್ಕರಿಸಿದ ಗೋದಿ ಆಹಾರ ಸೇವನೆಯಿಂದಾಗಿ ಈ ಸಮಸ್ಯೆ ಉಲ್ಬಣಗೊಂಡಿದೆ.
ವಾರಕ್ಕೊಮ್ಮೆ ಇನ್ಸುಲಿನ್!
ಟೈಪ್ 1 ಮತ್ತು ಟೈಪ್ 2 ಮಧುಮೇಹ ಹೊಂದಿರುವ ವಯಸ್ಕರ ಚಿಕಿತ್ಸೆಗಾಗಿ ವಾರಕ್ಕೊಮ್ಮೆ ತೆಗೆದುಕೊಳ್ಳುವ ವಿಶ್ವದ ಮೊದಲ ಬೇಸಲ್ ಇನ್ಸುಲಿನ್ ಅವಿಕ್ಲಿಯನ್ನು (Awiqli Insulin) ನೊವೊ ನಾರ್ಡಿಸ್ಕ್ ಇಂಡಿಯಾ (Novo Nordisk) ರಿಲೀಸ್ ಮಾಡಿದೆ. ಇದನ್ನು ಪ್ರತಿದಿನ ತೆಗೆದುಕೊಳ್ಳಬೇಕಾಗಿಲ್ಲ, ವಾರಕ್ಕೊಮ್ಮೆ ಈ ಇಂಜೆಕ್ಷನ್ ತೆಗೆದುಕೊಂಡರೆ ಸಾಕು. ಇಂಜೆಕ್ಷನ್ ತೆಗೆದುಕೊಳ್ಳುವ ಹೊರೆ ಮತ್ತು ನೋವನ್ನು ಇದು ಕಡಿಮೆ ಮಾಡುತ್ತದೆ. ಮಧುಮೇಹ ನಿರ್ವಹಣೆಗೆ ಹೆಚ್ಚಿನ ಅನುಕೂಲವಾಗಿದೆ. ಇದು ವಾರ್ಷಿಕ ಇಂಜೆಕ್ಷನ್ ಚುಚ್ಚಿಕೊಳ್ಳುವುದನ್ನು 365 ರಿಂದ ಕೇವಲ 52 ಕ್ಕೆ ಇಳಿಸುತ್ತದೆ. ಈ ಇಂಜೆಕ್ಷನ್ ಬಗ್ಗೆ ಕ್ಲಿನಿಕಲ್ ಪ್ರಯೋಗಗಳು ಬಹಿರಂಗಪಡಿಸಿರೋದೇನು? ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಇಂಜೆಕ್ಷನ್‌ಗಳಿಗಿಂತ ಇದು ಹೇಗೆ ಭಿನ್ನ ಎಂಬುದನ್ನು ತಿಳಿಯೋಣ. ಇದನ್ನೂ ಓದಿ: ಮಧುಮೇಹಿಗಳಿಗೆ ಗುಡ್‌ನ್ಯೂಸ್; ಔಷಧ ಬೆಲೆ ಶೇ.90 ಇಳಿಕೆ
ಕ್ಲಿನಿಕಲ್ ಪ್ರಯೋಗಗಳು ಏನು ಹೇಳಿವೆ?
ಭಾರತೀಯ ರೋಗಿಗಳನ್ನು ಒಳಗೊಂಡು ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ. ಇದು ಅತ್ಯಂತ ಸುರಕ್ಷಿತ ಎಂದು ಸಾಬೀತಾಗಿದೆ. ಪ್ರಯೋಗದ ಸಂಶೋಧನೆಗಳ ಬಗ್ಗೆ ಮಾತನಾಡಿರುವ ನೊವೊ ನಾರ್ಡಿಸ್ಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರಿಯಾ, ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ಸುಲಿನ್‌ಗಳಿಗೆ ಹೋಲಿಸಿದರೆ, ಅವಿಕ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ದಿನದ ಹೆಚ್ಚಿನ ಸಮಯ ರಕ್ತದಲ್ಲಿನ ಸಕ್ಕರೆ ಮಟ್ಟ ಸೂಕ್ತ ಪ್ರಮಾಣದಲ್ಲಿ ಇರುವಂತೆ ನೋಡುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಅವಿಕ್ಲಿಯ ಡೋಸ್ ಹೇಗೆ ಕೆಲಸ ಮಾಡುತ್ತೆ?
ಇದು ಇನ್ಸುಲಿನ್ ಗ್ರಾಹಕಗಳಿಗೆ ಅಂಟಿಕೊಳ್ಳುತ್ತದೆ. ಜೀವಕೋಶಗಳು ಗ್ಲೂಕೋಸ್ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಯಕೃತ್ತು ತನ್ನದೇ ಆದ ಸಕ್ಕರೆ ಉತ್ಪಾದನೆಯನ್ನು ನಿಧಾನಗೊಳಿಸುವಂತೆ ನೋಡಿಕೊಳ್ಳುತ್ತದೆ. ಆದರೆ, ಅವಿಕ್ಲಿ ವಿಭಿನ್ನವಾಗಿ ಕಾಣುವುದು, ಅದು ರಕ್ತದಲ್ಲಿನ ಸಕ್ಕರೆಯನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದರಲ್ಲ, ಬದಲಾಗಿ ಅದು ದೇಹದಲ್ಲಿ ಎಷ್ಟು ಕಾಲ ಸಕ್ರಿಯವಾಗಿರುತ್ತದೆ ಎಂಬುದರಲ್ಲಿ. ಇದು ಆಲ್ಬುಮಿನ್ ಎಂಬ ರಕ್ತ ಪ್ರೋಟೀನ್‌ಗೆ ಬಲವಾಗಿ ಬಂಧಿಸುತ್ತದೆ. ಇದು ಕ್ಲಿಯರೆನ್ಸ್ ಅನ್ನು ನಿಧಾನಗೊಳಿಸುತ್ತದೆ. ಒಂದು ಡೋಸ್ ಪೂರ್ತಿ ಒಂದು ವಾರ ಕೆಲಸ ಮಾಡುತ್ತದೆ. ಅದಕ್ಕಾಗಿಯೇ ವಾರಕ್ಕೊಮ್ಮೆ ಡೋಸಿಂಗ್ ತೆಗೆದುಕೊಂಡರೆ ಸಾಕು. ಏಕೆಂದರೆ ಇಲ್ಲಿ ಪ್ರೊಟೀನ್ ತಾತ್ಕಾಲಿಕ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ.
ಇನ್ಸುಲಿನ್ ತೆಗೆದುಕೊಳ್ಳೋದು ಹೇಗೆ?
ವಾರಕ್ಕೊಮ್ಮೆ ಹೊಟ್ಟೆ, ತೊಡೆ ಅಥವಾ ತೋಳಿನ ಮೇಲೆ ಇನ್ಸುಲಿನ್ ಚುಚ್ಚಿಕೊಳ್ಳಬಹುದು. ಟೈಪ್ 2 ಮಧುಮೇಹ ಹೊಂದಿರುವ, ಮೊದಲ ಬಾರಿಗೆ ಇನ್ಸುಲಿನ್ ಬಳಸುವವರು ಸಾಮಾನ್ಯವಾಗಿ ವಾರಕ್ಕೆ 70 ಯೂನಿಟ್‌ಗಳಿಂದ ಪ್ರಾರಂಭಿಸುತ್ತಾರೆ. ಆದರೆ, ದೈನಂದಿನ ಇನ್ಸುಲಿನ್ ತೆಗೆದುಕೊಳ್ಳುವ ಪರಿಪಾಠ ಬಿಟ್ಟು ವಾರಕ್ಕೊಮ್ಮೆ ತೆಗೆದುಕೊಳ್ಳುವವರು, ಸಾಮಾನ್ಯವಾಗಿ ಅವರ ಹಿಂದಿನ ದೈನಂದಿನ ಡೋಸ್‌ನ ಏಳು ಪಟ್ಟು ಪಡೆಯುತ್ತಾರೆ. ಪರಿಣಾಮವು ಕ್ರಮೇಣ ಹೆಚ್ಚಾಗುವುದರಿಂದ, ಸ್ಥಿರ ಮಟ್ಟವನ್ನು ತಲುಪಲು ಎರಡರಿಂದ ನಾಲ್ಕು ವಾರಗಳು ಬೇಕಾಗುತ್ತದೆ. ಇದನ್ನೂ ಓದಿ: ಮಧುಮೇಹಿಗಳಿಗೆ ಆಹಾರದ ಹೊರತಾಗಿ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲವು ಸಲಹೆ
ಬೇರೆ ಇನ್ಸುಲಿನ್‌ಗಳಿಗಿಂತ ಇದು ಹೇಗೆ ಭಿನ್ನ?
ಈಗ ಮಾರುಕಟ್ಟೆಯಲ್ಲಿ ಅನೇಕ GLP-1 ಇಂಜೆಕ್ಷನ್‌ಗಳು ಮಧುಮೇಹ ನಿರ್ವಹಣೆಗೆ ಮಾತ್ರವಲ್ಲದೆ ತೂಕ ನಷ್ಟಕ್ಕೂ ಜನಪ್ರಿಯತೆಯನ್ನು ಗಳಿಸುತ್ತಿವೆ. ಆದರೆ, ಆವ್ಲಿಕ್ ಇನ್ಸುಲಿನ್ ಭಿನ್ನವಾಗಿದೆ. GLP-1 ಔಷಧಿಗಳು ದೇಹದಲ್ಲಿನ ಇನ್ಸುಲಿನ್ ಬಿಡುಗಡೆಯನ್ನು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಆದರೆ ಅವಿಕ್ಲಿ ಸ್ವತಃ ಇನ್ಸುಲಿನ್ ಆಗಿದ್ದು, ದೇಹವು ಉತ್ಪಾದಿಸಲು ಅಥವಾ ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದ್ದನ್ನು ಮಾಡುತ್ತದೆ. ಊಟದ ಸಮಯದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಟೈಪ್1 or 2; ಯಾರಿಗೆ ಹೆಚ್ಚು ಪ್ರಯೋಜನ?
ಇನ್ಸುಲಿನ್ ಅಗತ್ಯವಿರುವ, ದೈನಂದಿನ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುತ್ತಿರುವ ಟೈಪ್ 2 ಮಧುಮೇಹ ಇರುವ ವಯಸ್ಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ವಾರಕ್ಕೊಮ್ಮೆ ಡೋಸಿಂಗ್ ಅನುಕೂಲಕರವಾಗಿದ್ದು, ನಿತ್ಯ ಇಂಜೆಕ್ಷನ್ ನೋವು ಅನುಭವಿಸುದು ತಪ್ಪುತ್ತದೆ. ದೇಹದಲ್ಲಿನ ಗ್ಲೂಕೋಸ್ ನಿರ್ವಹಣೆಗೂ ಇದು ಸಹಕಾರಿಯಾಗಿದೆ.
ಅಡ್ಡಪರಿಣಾಮ ಇದೆಯಾ?
ಮಾರುಕಟ್ಟೆಯಲ್ಲಿ ಹೊಸ ಔಷಧಿಯನ್ನು ಪರಿಚಯಿಸಿದಾಗಲೆಲ್ಲಾ ಅಡ್ಡಪರಿಣಾಮಗಳ ಬಗ್ಗೆ ಕಳವಳ ವ್ಯಕ್ತವಾಗುವುದು ಸ್ವಾಭಾವಿಕ. ಕೆಲವರು ಇದರ ಅಡ್ಡಪರಿಣಾಮಗಳನ್ನು ಅನುಭವಿಸಬಹುದು. ಆದರೆ, ಇವುಗಳನ್ನು ಸೂಕ್ತ ವೈದ್ಯಕೀಯ ಮೇಲ್ವಿಚಾರಣೆಯೊಂದಿಗೆ ನಿರ್ವಹಿಸಬೇಕು. ಹೈಪೊಗ್ಲಿಸಿಮಿಯಾ ಅಥವಾ ಕಡಿಮೆ ರಕ್ತದ ಸಕ್ಕರೆಯು ಅತ್ಯಂತ ಸಾಮಾನ್ಯ ಅಡ್ಡಪರಿಣಾಮವಾಗಿದೆ. ಇದು ವಾರದ ಡೋಸ್ ನಂತರ ಎರಡರಿಂದ ನಾಲ್ಕು ದಿನಗಳ ನಂತರ ಹೆಚ್ಚಾಗಿ ಸಂಭವಿಸುತ್ತದೆ. ಪದೇ ಪದೆ ಒಂದೇ ಜಾಗದಲ್ಲಿ ನಿರಂತರ ಇಂಜೆಕ್ಷನ್ ಕೊಡುವುದರಿಂದ ಆ ಭಾಗದಲ್ಲಿ ಸ್ವಲ್ಪ ಊದಿಕೊಳ್ಳಬಹುದು ಅಷ್ಟೆ. ಇದನ್ನೂ ಓದಿ: ಮಧುಮೇಹಿಗಳು ಆಲೂಗಡ್ಡೆ ತಿನ್ನುವುದನ್ನು ನಿಲ್ಲಿಸಬೇಕೆ?
ಮಧುಮೇಹ ಇರುವ ಮಕ್ಕಳಿಗೆ ಇಂಜೆಕ್ಷನ್ ಬೇಕೇ?
ಈ ಪ್ರಯೋಗವು ಮಕ್ಕಳನ್ನು ಒಳಗೊಂಡಿಲ್ಲ. ಹಾಗಾಗಿ, ಇದು ಮಧುಮೇಹ ಇರುವ ಮಕ್ಕಳಿಗೆ ನೀಡುವಂತಿಲ್ಲ. ಗರ್ಭಿಣಿಯರು ಅಥವಾ ತಾಯಿಯಾಗಲು ಬಯಸುವವರು ಈ ಇಂಜೆಕ್ಷನ್ ತೆಗೆದುಕೊಳ್ಳದೇ ಇರುವುದು ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ. ಈ ಇನ್ಸುಲಿನ್ ತೆಗೆದುಕೊಂಡ ಮಾತ್ರಕ್ಕೆ ರೋಗಿಗಳು ಆರೋಗ್ಯಕರ ಅಭ್ಯಾಸಗಳನ್ನು ಬಿಡಬಾರದು. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ತೂಕ ನಿರ್ವಹಣೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಮೇಲ್ವಿಚಾರಣೆ ಮಾಡುವುದು ಮುಖ್ಯವಾಗಿರುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
