ಮುಂಬೈ: ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ಎರಡೂ ಸ್ವರೂಪಗಳಿಗೆ ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡಗಳನ್ನು ಪ್ರಕಟಿಸಿದೆ. ಈ ತಂಡಗಳಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ (Rohit Sharma) ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಸ್ಥಾನ ಪಡೆದಿದ್ದಾರೆ. ಆದರೆ ಅವರು ದೈಹಿಕವಾಗಿ ಫಿಟ್ ಆಗಿದ್ದರೆ ಮಾತ್ರ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಆರೋಗ್ಯ ತಪಾಸಣೆಗಾಗಿ ಬಿಸಿಸಿಐ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ಇಬ್ಬರಿಗೂ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ತೆರಳುವಂತೆ ಸೂಚಿಸಿದೆ. ಇದರಂತೆ ಹಾರ್ದಿಕ್ ಪಾಂಡ್ಯ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಬರಲಿದ್ದು, ಒಂದು ವಾರ ಇರಲಿದ್ದಾರೆ. ಬಳಿಕ ಅಫ್ಘಾನಿಸ್ತಾನ ತಂಡದ ವಿರುದ್ಧದ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ರೋಹಿತ್ ಶರ್ಮಾ ಅವರ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಜಮ್ಮು ಮತ್ತು ಕಾಶ್ಮೀರ ವೇಗಿ ಔಕಿಬ್ ನಬಿ ದಾರ್ ಮತ್ತು ಇತರ ಆರು ಮಂದಿ ಆಟಗಾರರಿಗೆ ಭಾರತ ತಂಡದಲ್ಲಿ ಸ್ಥಾನ ನೀಡದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆ ಜೂನ್ 6 ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆಯುವ ಅಭ್ಯಾಸ ಪಂದ್ಯದಲ್ಲಿ ಔಕಿಬ್ ಭಾಗಿಯಾಗುವಂತೆ ಬಿಸಿಸಿಐ ಸೂಚಿಸಿದೆ.
ಅಫ್ಘಾನಿಸ್ತಾನ ತಂಡದಲ್ಲಿ ಉತ್ತಮ ಸ್ಪಿನ್ನರ್‌ಗಳಿರುವುದರಿಂದ ಔಕಿಬ್ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಉತ್ತರ ಪ್ರದೇಶ ಮೂಲದ ಲೆಗ್-ಸ್ಪಿನ್ನರ್ ಜೀಶನ್ ಅನ್ಸಾರಿ ಅವರಿಗೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಂತೆ ಸೂಚಿಸಲಾಗಿದೆ.
ಕೇವಲ 7 ದಿನಗಳ ಅಂತರದಲ್ಲಿ ಮೂರು ಏಕದಿನ ಪಂದ್ಯಗಳನ್ನ ಆಡಬೇಕಿದೆ. ಇದರ ಜೊತೆಗೆ ಹವಾಮಾನ ವೈಪರಿತ್ಯವೂ ಇರುವ ಕಾರಣ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ತಮ್ಮ ಸಾಮರ್ಥ್ಯಕ್ಕುನುಗುಣವಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತ ಬ್ಯಾಟರ್‌ಗಳಿಗೂ ಕೂಡ ಉತ್ತಮ ಬ್ಯಾಟಿಂಗ್ ಅಭ್ಯಾಸದ ಅಗತ್ಯವಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ರಣಜಿ ಟ್ರೋಫಿಯ ಹಾಲಿ ಚಾಂಪಿಯನ್ಸ್ ಜಮ್ಮು ಕಾಶ್ಮೀರ ತಂಡದ ಪರ ಕಣಕ್ಕಿಳಿದಿದ್ದ ಔಕಿಬ್ 60 ವಿಕೆಟ್ ಪಡೆದು, ಭಾರತ ತಂಡದಲ್ಲಿರುವ ಪಂಜಾಬ್ ವೇಗಿ ಗುರ್ನೂರ್ ಬ್ರಾರ್ ಅವರನ್ನು ಹಿಂದಿಕ್ಕಿದ್ದಾರೆ. ಸದ್ಯಕ್ಕೆ ಬಿಸಿಸಿಐ ಬಿಡುಗಡೆ ಮಾಡಿರುವ 15 ಜನ ಆಟಗಾರರ ತಂಡದಲ್ಲಿ ಔಕಿಬ್ ಅವರ ಹೆಸರಿಲ್ಲ. ಆದರೆ ಔಕಿಬ್ ಅವರು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ಯು ಗುರ್ನೂರ್ ಬ್ರಾರ್ ಅವರಿಗೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಮಧ್ಯಮ ವೇಗಿ ಶಶಿಕಾಂತ್ ಅವರನ್ನು ತಂಡದಿಂದ ಹೊರಗಿಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಭಾರತದ ಮಾಜಿ ನಾಯಕ ಮತ್ತು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ದಿಲೀಪ್ ವೆಂಗ್‌ಸರ್ಕಾರ್ ಅವರು ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ದೊರೆಯದಿದ್ದರೆ ರಣಜಿ ಟ್ರೋಫಿಯ ಮಹತ್ವವೇನು ಎಂದು ಪ್ರಶ್ನಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಭಾರತ ತಂಡವು ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆರಂಭಿಸಲಿದೆ. ಐಪಿಎಲ್ ಫೈನಲ್ ಪಂದ್ಯದ ಭಾಗವಾಗಿದ್ದ ಆಟಗಾರರು ಮೊದಲ ದಿನದ ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ.
ಏಳು ಜನ ಗುಜರಾತ್ ಟೈಟಾನ್ಸ್ ತಂಡದ ಆಟಗಾರರಾದ ಶುಭಮನ್ ಗಿಲ್, ಸಾಯಿ ಸುದರ್ಶನ್, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಮಾನವ್ ಸುತಾರ್ ಮತ್ತು ವಾಷಿಂಗ್ಟನ್ ಸುಂದರ್ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ತಂಡದ ಭಾಗವಾಗಿದ್ದಾರೆ.
ಭಾರತ ಏಕದಿನ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ಕೀಪರ್), ಇಶಾನ್ ಕಿಶನ್ (ಕೀಪರ್), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಹರ್ಷ ದುಬೆ, ಗುರ್ನೂರ್ ಬ್ರಾರ್.
