– ಪಾಕಿಸ್ತಾನ ಯುದ್ಧದ ಮಧ್ಯಸ್ಥಿಕೆ ವಹಿಸುತ್ತಿದೆಯಲ್ಲ ಎಂದಿದ್ದ ವಿಪಕ್ಷಗಳು
ನವದೆಹಲಿ: ಪಾಕಿಸ್ತಾನದಂತೆ (Pakistan) ನಮ್ಮದು ದಲ್ಲಾಳಿ ಕೆಲಸ ಮಾಡುವ ದೇಶವಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ವಿಪಕ್ಷಗಳ ಪ್ರಶ್ನೆಗೆ ತಿರುಗೇಟು ನೀಡಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸರ್ವಪಕ್ಷ ಸಭೆಯಲ್ಲಿ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಶಮನ ಮಾಡುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ ಎನ್ನಲಾದ ವಿಪಕ್ಷಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಅಲ್ಲದೇ ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಕುರಿತು ಭಾರತ (India) ಮೌನ ತಾಳಿದೆ ಎಂಬ ವಿಪಕ್ಷಗಳ ಆರೋಪಗಳನ್ನ ತಳ್ಳಿಹಾಕಿದರು. ಇದನ್ನೂ ಓದಿ: ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಅಸ್ತು

‘ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ನಿಲ್ಲಿಸಲು ತಾನು ಮಧ್ಯಸ್ಥಿಕೆ ವಹಿಸಲು ಯತ್ನಿಸುತ್ತಿರುವುದಾಗಿ ಪಾಕಿಸ್ತಾನ ಹೇಳುತ್ತಿದ್ದು, ಇದು ಹೊಸ ವಿಚಾರ ಅಲ್ಲ. ಪಾಕಿಸ್ತಾನವನ್ನ ಅಮೆರಿಕ 1981 ರಿಂದಲೂ ತನ್ನ ಉದ್ದೇಶ ಸಾಧನೆಗೆ ಬಳಕೆ ಮಾಡಿಕೊಳ್ಳುತ್ತಿದೆ. ಅಲ್ಲಿನ ಪರಿಸ್ಥಿತಿ ಹಾಗೂ ಬೆಳವಣಿಗೆಗಳ ಕುರಿತು ಭಾರತ ಪ್ರತಿಕ್ರಿಯಿಸುತ್ತಿದೆ ಎಂಬುದಾಗಿ ಹೇಳಿದರು ಎಂಬುದಾಗಿ ಉನ್ನತ ಮೂಲಗಳು ತಿಳಿಸಿವೆ.
ಸದ್ಯ ಕೊಲ್ಲಿ ರಾಷ್ಟ್ರಗಳಲ್ಲಿ ನೆಲಸಿರುವ ಭಾರತೀಯರ ಸುರಕ್ಷತೆ ಹಾಗೂ ದೇಶದ ಇಂಧನ ಬೇಡಿಕೆಗಳನ್ನ ಪೂರೈಸುವುದು ತನಗೆ ಮುಖ್ಯ. ಈ ವಿಚಾರದಲ್ಲಿ ತಾನು ಯಶಸ್ಸು ಕಂಡುಕೊಂಡಿದೆ. ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನದಂತೆ ದಲ್ಲಾಳಿ ಕೆಲಸ ಮಾಡುವ ದೇಶ ನಮ್ಮದಲ್ಲ ಎಂದು ಜೈಶಂಕರ್ ತಿರುಗೇಟು ನೀಡಿದರು. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಬಿಕ್ಕಟ್ಟು – ರಷ್ಯಾದಿಂದ ಮತ್ತೆ 6 ಕೋಟಿ ಬ್ಯಾರಲ್ ಕಚ್ಚಾ ತೈಲ ಖರೀದಿಸಿದ ಭಾರತ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಯುದ್ಧ ನಿಲ್ಲಬೇಕು. ಇದು ಜಗತ್ತಿನ ಪ್ರತಿಯೊಬ್ಬರನ್ನೂ ಬಾಧಿಸುತ್ತಿದೆ ಎಂಬುದಾಗಿ ಮೋದಿ ಸ್ಪಷ್ಟ ಮಾತುಗಳಲ್ಲಿ ಭಾರತದ ನಿಲುವನ್ನ ತಿಳಿದ್ದಾರೆ ಎಂಬುದಾಗಿ ಸಭೆಗೆ ಕೇಂದ್ರ ಸಚಿವರು ವಿವರಿಸಿದರು ಎಂದು ಮೂಲಗಳು ಹೇಳಿವೆ.
‘ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರ ಸಾವಿಗೆ ಭಾರತ ಸಂತಾಪ ಸೂಚಿಸಲಿಲ್ಲ. ಇಂಥ ನಡೆ ಮೂಲಕ, ಭಾರತ ತನ್ನ ನೈತಿಕ ದೌರ್ಬಲ್ಯ ಪ್ರದರ್ಶಿಸಿತು ಎಂಬ ವಿಪಕ್ಷಗಳ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿತು. ಇರಾನ್‌ನ ರಾಯಭಾರ ಕಚೇರಿ ಕಾರ್ಯಾರಂಭ ಮಾಡಿದ ವೇಳೆ, ವಿದೇಶಾಂಗ ಕಾರ್ಯದರ್ಶಿ ಅಲ್ಲಿಗೆ ತಕ್ಷಣವೇ ಭೇಟಿ ನೀಡಿ, ಶೋಕ ಸಂದೇಶ ಪುಸ್ತಕದಲ್ಲಿ ಭಾರತದ ಸಂತಾಪ ತಿಳಿಸುವ ಸಂದೇಶ ಬರೆದು ಸಹಿ ಹಾಕಿದರು ಎಂದು ವಿಪಕ್ಷಗಳಿಗೆ ಸರ್ಕಾರ ವಿವರಿಸಿತು.

