-ಹೊರಡುವ ಮುನ್ನ ಗೋಚರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಪತಿ
-ಮದುವೆ ಮಂಟಪದ ಬಳಿಯೇ ಅಪಘಾತ
ವಾಷಿಂಗ್ಟನ್: ವಿವಾಹವಾಗಿ ಇನ್ನೇನು ಹೊಸ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲೇ ಸೂತಕದ ಛಾಯೆ ಆವರಿಸಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹನಿಮೂನ್‌ಗೆ ಹೊರಟಿದ್ದಾಗ ಹೆಲಿಕಾಪ್ಟರ್ ಪತನಗೊಂಡು ಭಾರತೀಯ ಮೂಲದ ಪೈಲಟ್ (Indian-Origin Pilot) ಸಾವನ್ನಪ್ಪಿರುವ ಘಟನೆ ಅಮೆರಿಕಾದ (America) ಜಾರ್ಜಿಯಾದಲ್ಲಿ (Georgia) ನಡೆದಿದೆ.
ಡೆಲ್ಟಾ ಏರ್‌ಲೈನ್ಸ್‌ನಲ್ಲಿ (Delta Air Lines) ಸಹ-ಪೈಲಟ್ ಆಗಿ ಕೆಲಸ ಮಾಡುತ್ತಿದ್ದ 26 ವರ್ಷದ ಡೇವ್ ಫಿಜಿ ಮೃತ ದುರ್ದೈವಿ. ಇವರು ಮೂಲತಃ ಕೇರಳದವರು (Kerala) ಎಂದು ತಿಳಿದುಬಂದಿದೆ. ಮದುವೆ ಸಂಭ್ರಮ ಮುಗಿಸಿ ನವದಂಪತಿ ಹನಿಮೂನ್‌ಗೆ ತೆರಳುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ `Robinson R66′ ಹೆಲಿಕಾಪ್ಟರ್ ಡಾಸನ್‌ವಿಲ್ಲೆ ಮದುವೆ ಮಂಟಪದ ಬಳಿಯೇ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 7 ಲಕ್ಷ ಕೊಟ್ರೂ ಕಾರಿಗೆ ಡಿಮ್ಯಾಂಡ್ – ವರದಕ್ಷಿಣೆ ಚಿತ್ರಹಿಂಸೆಗೆ ಇನ್ಸ್ಟಾ ಇನ್ಫ್ಲೂಯೆನ್ಸರ್ ಬಲಿ
ಈ ಭೀಕರ ಅಪಘಾತದಲ್ಲಿ ಹೆಲಿಕಾಪ್ಟರ್‌ನ ಮುಖ್ಯ ಪೈಲಟ್ ಕೂಡ ಸಾವನ್ನಪ್ಪಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಅಪಘಾತದಲ್ಲಿ ಡೇವ್ ಪತ್ನಿ ಜೆಸ್ನಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅಟ್ಲಾಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃತ್ತಿಯಲ್ಲಿ ನರ್ಸ್ ಎಂದು ತಿಳಿದುಬಂದಿದೆ.
ಈ ಕುರಿತು ಮೃತ ಡೇವ್ ತಂದೆ ಜಾರ್ಜ್ ಫಿಜಿ ಅವರು ಮಾತನಾಡಿ, ನನ್ನ ಮಗ ಅಷ್ಟೊಂದು ಸಂತೋಷವಾಗಿದ್ದನ್ನು ನಾನು ಯವತ್ತೂ ನೋಡಿರಲಿಲ್ಲ. ಅದೆಲ್ಲ ಕೆಲ ಗಂಟೆಗಳಲ್ಲೇ ಅಂತ್ಯವಾಗುತ್ತದೆ ಎಂದುಕೊಂಡಿರಲಿಲ್ಲ ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಹತ್ತು ವರ್ಷಗಳ ಹಿಂದೆ ಚರ್ಚ್‌ನಲ್ಲಿ ಪರಿಚಯವಾಗಿದ್ದ ಜೆಸ್ನಿಯನ್ನು ಡೇವ್ ಶುಕ್ರವಾರವಷ್ಟೇ (ಮೇ 29) ಮದುವೆಯಾಗಿದ್ದರು. ಡಾಸನ್‌ವಿಲ್ಲೆಯ ರೆಸಾರ್ಟ್‌ವೊಂದರಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಸುಮಾರು 400ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಆರತಕ್ಷತೆ ಮುಗಿದ ನಂತರ ದಂಪತಿ ಜಾರ್ಜಿಯಾದ ಡೆಕಾಲ್ಬ್-ಪೀಚ್‌ಟ್ರೀ ವಿಮಾನ ನಿಲ್ದಾಣಕ್ಕೆ ತೆರಳಲು ʻRobinson R66ʼ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಅವರು ಅಟ್ಲಾಂಟಾದ ಹೋಟೆಲ್‌ಗೆ ತೆರಳಬೇಕಿತ್ತು. ಆದರೆ, ಹೆಲಿಕಾಪ್ಟರ್ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡು ಮದುವೆ ಮಂಟಪದ ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:One Felt Nice, We Did It Twice – ಆರ್‌ಸಿಬಿಯನ್ನು ಅಭಿನಂದಿಸಿದ ಅನುಷ್ಕಾ
ಶವದ ಪಕ್ಕದಲ್ಲೇ 6 ಗಂಟೆ ಕಳೆದ ನವವಿವಾಹಿತೆ:
ದಟ್ಟ ಅರಣ್ಯ ಪ್ರದೇಶದಲ್ಲಿ ಅಪಘಾತ ನಡೆದಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಹೆಲಿಕಾಪ್ಟರ್ ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಹೀಗಾಗಿ ಗಾಯಗೊಂಡಿದ್ದ ಪತ್ನಿ ಜೆಸ್ನಿ ಸುಮಾರು 6 ಗಂಟೆಗಳ ಕಾಲ ಅವಶೇಷಗಳ ಮಧ್ಯೆ ಸಿಲುಕಿಕೊಂಡಿದ್ದರು. ಪ್ರಜ್ಞೆ ಬಂದಾಗ ಪತಿ ಡೇವ್ ಮಡಿಲಲ್ಲಿ ಮಲಗಿದ್ದ. ದೇಹವೆಲ್ಲ ರಕ್ತಸಿಕ್ತವಾಗಿ, ಸಂಪೂರ್ಣ ತಣ್ಣಗಾಗಿತ್ತು. ಜೆಸ್ನಿ ನರ್ಸ ಆಗಿರುವುದರಿಂದ ಡೇವ್ ಸಾವನ್ನಪ್ಪಿದ್ದಾನೆ ಎಂಬುದು ಕೂಡಲೇ ಗೊತ್ತಾಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ಹವಾಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಡೇವ್:
ಪೈಲಟ್ ಆಗಿದ್ದರಿಂದ ಡೇವ್ ಹೆಲಿಕಾಪ್ಟರ್ ಹತ್ತುವ ಮುನ್ನವೇ ಹವಾಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ದಟ್ಟ ಮಂಜು ಕವಿದಿದೆ, ಏನೂ ಕಾಣಿಸುತ್ತಿಲ್ಲ ಇಂತಹ ಹವಾಮಾನದಲ್ಲಿ ನಾವು ಪ್ರಯಾಣಿಸುವುದಿಲ್ಲ ಎಂದು ಹೆಲಿಕಾಪ್ಟರ್ ಪೈಲಟ್‌ಗೆ ತಿಳಿಸಿದ್ದರು. ಆದರೆ, ಪೈಲಟ್ ನಾವು ಇನ್ನೂ ಎತ್ತರದಲ್ಲಿ ಹಾರಾಟ ನಡೆಸುತ್ತೇವೆ, ಹೀಗಾಗಿ ಏನೂ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಸದ್ಯ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಘಟನೆ ಕುರಿತು ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆ ಹಚ್ಚುತ್ತಿದೆ.ಇದನ್ನೂ ಓದಿ: ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್‌ಗೆ ಐಸ್ ಕ್ಯೂಬ್ ಸುರಿದು ಸಂಭ್ರಮಿಸಿದ ಸಾಲ್ಟ್, ಡೇವಿಡ್
