ಚಿಕ್ಕಬಳ್ಳಾಪುರ: ರೈತರಿಗೆ ಆಸಲಿ ಗೊಬ್ಬರದ ಬದಲಿಗೆ ನಕಲಿ ಎಂಕೆಪಿ (MKP) ಗೊಬ್ಬರ ಮಾರಾಟ ಮಾಡಿದ ಆರೋಪದ ಮೇಲೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್‌ನಲ್ಲಿರುವ ಶ್ರೀಭೋಗನಂದೀಶ್ವರ ಕೃಷಿ ರೈತ ಉತ್ಪಾದಕ ಕಂಪನಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ’ ಎಂಬ ಘೋಷವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆಯಿಂದ ನೂರಾರು ರೈತರು ಐಸಿಎಲ್ ಕಂಪನಿಯ ನೀರಿನಲ್ಲಿ ಕರಗುವ ಎಂಕೆಪಿ ಗೊಬ್ಬರ ಖರೀದಿಸಿದ್ದರು. ಆದರೆ ಗೊಬ್ಬರದ ಪ್ಯಾಕಿಂಗ್ ಹಾಗೂ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಅನುಮಾನ ಮೂಡಿದೆ. ಇದರಿಂದ ರೈತರು ನೇರವಾಗಿ ಐಸಿಎಲ್ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಆಗ ತಮಗೆ ಮಾರಾಟವಾಗಿರುವುದು ನಕಲಿ ಉತ್ಪನ್ನ ಎಂಬ ಮಾಹಿತಿ ದೊರೆತಿದೆ ಎಂದು ರೈತರು ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ರೈತರು ಅಂಗಡಿಗೆ ಮುತ್ತಿಗೆ ಹಾಕಿ ಮಾಲೀಕ ಮೋಹನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ನಂದಿಗಿರಿಧಾಮ ಪೊಲೀಸ್ ಠಾಣೆಗೆ ತೆರಳಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಎತ್ತು, ಟ್ರ್ಯಾಕ್ಟರ್ ಇಲ್ಲ – ಬಿತ್ತನೆ ಕೂರಿಗೆಯನ್ನು ತಾವೇ ಎಳೆದ ವೃದ್ಧ ದಂಪತಿ
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿಯಲ್ಲಿ ದಾಳಿ ನಡೆಸಿ ಗೊಬ್ಬರದ ಮಾದರಿಗಳು, ದಾಖಲೆಗಳು ಹಾಗೂ ದಾಸ್ತಾನು ಪರಿಶೀಲನೆ ನಡೆಸಿದರು. ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.
ಪರಿಶೀಲನೆ ವೇಳೆ ಅಂಗಡಿಯ ಗೊಬ್ಬರ ಮಾರಾಟ ಪರವಾನಿಗೆ ಅವಧಿ ಮುಗಿದಿದ್ದರೂ ಮರುಪರವಾನಿಗೆ ಪಡೆಯದೇ ವ್ಯಾಪಾರ ನಡೆಸಲಾಗುತ್ತಿತ್ತು ಎಂಬುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಪ್ರಯೋಗಾಲಯದ ವರದಿ ಬಂದ ನಂತರ ನಕಲಿ ಗೊಬ್ಬರ ಮಾರಾಟ ಹಾಗೂ ಪರವಾನಿಗೆ ಉಲ್ಲಂಘನೆ ಸಂಬಂಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರೈತರಿಗೆ ಆಗಿರುವ ನಷ್ಟವನ್ನು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಜೋರು ಮಳೆ – ಮೂರ್ನ್ಕಾಲು ದಿನ ಮುಂದುವರಿಯೋ ಸಾಧ್ಯತೆ
