ದೇಶದ ʻರಾಷ್ಟ್ರಗೀತೆʼ, ‘ವಂದೇ ಮಾತರಂ’ ಗೀತೆಗೆ (Vande Mataram) ಅವಮಾನ ಮಾಡುವುದು ಅಥವಾ ಅದರ ಗಾಯನಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದನ್ನ ಅಪರಾಧವೆಂದು ಪರಿಗಣಿಸುವ ಮಹತ್ವದ ಮಸೂದೆಯನ್ನು ಕೇಂದ್ರ ಸರ್ಕಾರ (Union government) ಸಂಸತ್ತಿನಲ್ಲಿ ಮಂಡಿಸಲು ಸಜ್ಜಾಗಿದೆ. ಈ ಮಸೂದೆ ಜಾರಿಯಾದರೆ, ರಾಷ್ಟ್ರಗೀತೆ ʻಜನ ಗಣ ಮನʼಕ್ಕೆ ಇರುವಂತೆಯೇ ‘ವಂದೇ ಮಾತರಂ’ಗೂ ಕಾನೂನುಬದ್ಧ ರಕ್ಷಣೆ ದೊರೆಯಲಿದೆ.
ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದಿರುವ ʻರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ–2026ʼ (National Honour (Amendment) Bill, 2026) ಅನ್ನು ಇದೇ ಜುಲೈ 20 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ. ಸಂಸತ್ತಿನ ಉಭಯ ಸದನಗಳ ಅನುಮೋದನೆ ಹಾಗೂ ರಾಷ್ಟ್ರಪತಿಯ ಒಪ್ಪಿಗೆ ದೊರೆತ ಬಳಿಕ ಈ ಮಸೂದೆ ಕಾನೂನಾಗಿ ಜಾರಿಗೆ ಬರಲಿದೆ. ಇದನ್ನೂ ಓದಿ: ಬುಲೆಟ್ ರೈಲು ವಿಳಂಬಕ್ಕೆ ಬೇಜವಾಬ್ದಾರಿಯೇ ಕಾರಣ – ಜಪಾನ್ ಮಾಜಿ ಸಚಿವರ ಹೇಳಿಕೆಗೆ ಭಾರತ ತಿರುಗೇಟು

ಈಗಿನ ಕಾನೂನು ಏನು ಹೇಳುತ್ತದೆ?
ಪ್ರಸ್ತುತ ಜಾರಿಯಲ್ಲಿರುವ ʻರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ–1971ʼ ಅಡಿಯಲ್ಲಿ ಭಾರತದ ರಾಷ್ಟ್ರಧ್ವಜ, ಸಂವಿಧಾನ ಮತ್ತು ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದನ್ನ ಅಪರಾಧವೆಂದು ಪರಿಗಣಿಸಲಾಗಿದೆ. ರಾಷ್ಟ್ರಗೀತೆಯ (National Anthem) ಗಾಯನಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೂ ಶಿಕ್ಷೆಯ ಅವಕಾಶವಿದೆ. ಹೊಸ ತಿದ್ದುಪಡಿ ಮೂಲಕ ‘ವಂದೇ ಮಾತರಂ’ ಅನ್ನು ಸಹ ಇದೇ ಪಟ್ಟಿಗೆ ಸೇರಿಸಲು ಸರ್ಕಾರ ಮುಂದಾಗಿದೆ. ಇದರಿಂದ ರಾಷ್ಟ್ರಗೀತೆಯಷ್ಟೇ ವಂದೇ ಮಾತರಂಗೂ ಕಾನೂನುಬದ್ಧ ರಕ್ಷಣೆಯನ್ನು ಪಡೆಯಲಿದೆ.
ಯಾವ ಶಿಕ್ಷೆ ವಿಧಿಸಲಾಗುತ್ತದೆ?
ಪ್ರಸ್ತಾವಿತ ಮಸೂದೆಯ ಪ್ರಕಾರ, ‘ವಂದೇ ಮಾತರಂ’ಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದರೆ ಅಥವಾ ಅದರ ಗಾಯನಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದ್ರೆ, ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಅಥವಾ ಜೈಲು ಶಿಕ್ಷೆ ಹಾಗೂ ದಂಡ ಎರಡೂ ವಿಧಿಸಬಹುದಾಗಿದೆ. ಆದರೆ, ಈ ಕಾನೂನು ಉದ್ದೇಶಪೂರ್ವಕವಾಗಿ ನಡೆದ ಅವಮಾನ ಅಥವಾ ಅಡ್ಡಿಪಡಿಸುವ ಕೃತ್ಯಗಳಿಗೆ ಮಾತ್ರ ಅನ್ವಯಿಸುತ್ತದೆ. ಅನಾಹುತವಾಗಿ ನಡೆದ ತಪ್ಪುಗಳು ಅಥವಾ ಉದ್ದೇಶವಿಲ್ಲದ ಘಟನೆಗಳು ಇದರ ವ್ಯಾಪ್ತಿಗೆ ಬರುವುದಿಲ್ಲ.

ಈ ಮಸೂದೆ ಏಕೆ ಅವಶ್ಯ?
ಕೇಂದ್ರ ಸರ್ಕಾರದ ಅಭಿಪ್ರಾಯದಂತೆ, ‘ವಂದೇ ಮಾತರಂ’ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಪಾರ ಐತಿಹಾಸಿಕ ಮಹತ್ವ ಹೊಂದಿದ್ದು, ದೇಶಭಕ್ತಿಯ ಸಾಂಕೇತವಾಗಿ ವಿಶೇಷ ಸ್ಥಾನ ಪಡೆದಿದೆ. ಆದ್ದರಿಂದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನಕ್ಕೆ ಇರುವಂತೆಯೇ ಕಾನೂನುಬದ್ಧ ರಕ್ಷಣೆಯನ್ನ ಇದಕ್ಕೂ ನೀಡಬೇಕಾಗಿದೆ ಎಂದು ಸರ್ಕಾರ ತಿಳಿಸಿದೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರಗೀತೆ, ವಂದೇ ಮಾತರಂ, ನಾಡಗೀತೆ ಹಾಗೂ ವಿದೇಶಿ ರಾಷ್ಟ್ರಗೀತೆಗಳನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುವ ಹಾಗೂ ಪ್ರದರ್ಶಿಸುವ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ದೇಶಾದ್ಯಂತ ಏಕರೂಪದ ಪಾಲನೆ ಖಚಿತಪಡಿಸುವ ಉದ್ದೇಶವೂ ಈ ಕ್ರಮದ ಹಿಂದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ‘ವಂದೇ ಮಾತರಂ’ಗೆ ಅಡ್ಡಿಪಡಿಸಿದರೆ 3 ವರ್ಷ ಜೈಲುಶಿಕ್ಷೆ – ಕೇಂದ್ರದ ಪ್ರಸ್ತಾವನೆ

‘ವಂದೇ ಮಾತರಂ’ನ ಐತಿಹಾಸಿಕ ಮಹತ್ವ ಏನು?
ಬಂಕಿಮಚಂದ್ರ ಚಟರ್ಜಿ (ಬಂಕಿಮಚಂದ್ರ ಚಟ್ಟೋಪಾಧ್ಯಾಯ) ಅವರು ರಚಿಸಿದ ‘ವಂದೇ ಮಾತರಂ’ ಮೊದಲು ಅವರ ‘ಆನಂದಮಠ’ ಕಾದಂಬರಿಯಲ್ಲಿ ಪ್ರಕಟಗೊಂಡಿತು. ನಂತರ ಅದು ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಪ್ರೇರಣಾದಾಯಕ ಗೀತೆಯಾಗಿ ರೂಪುಗೊಂಡಿತು. ಭಾರತದ ರಾಷ್ಟ್ರಗೀತೆ ʻಜನ ಗಣ ಮನʼ ಆಗಿದ್ದರೂ, ʻವಂದೇ ಮಾತರಂʼ ದೇಶದ ರಾಷ್ಟ್ರಗೀತೆ ಎಂಬ ಗೌರವ ಹೊಂದಿದೆ. ಅದರ ಮೊದಲ ಎರಡು ಚರಣಗಳನ್ನು ಅಧಿಕೃತ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಹಾಡಲಾಗುತ್ತದೆ.
ಈ ವರ್ಷ ʻವಂದೇ ಮಾತರಂ’ ಗೀತೆಯ ಐತಿಹಾಸಿಕ ಪರಂಪರೆಗೆ 150 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಮಸೂದೆಗೆ ವಿಶೇಷ ಮಹತ್ವ ಸಿಕ್ಕಿದೆ. ಇದನ್ನೂ ಓದಿ: ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆದ್ರೆ ಸರ್ಕಾರಿ ಯೋಜನೆಗಳ ಸೌಲಭ್ಯ ಸಿಗಲ್ವಾ? – ಸುಪ್ರೀಂ ಹೇಳಿದ್ದೇನು?

ಮುಂದೇನು?
ಈ ಮಸೂದೆ ಮೊದಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಬೇಕು. ಬಳಿಕ ರಾಷ್ಟ್ರಪತಿಯ ಒಪ್ಪಿಗೆ ದೊರೆತರೆ ಅದು ಕಾನೂನಾಗಿ ಜಾರಿಗೆ ಬರಲಿದೆ. ಕಾನೂನಾಗಿ ಜಾರಿಗೆ ಬಂದ ನಂತರ ʻವಂದೇ ಮಾತರಂ’ಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದು ಅಥವಾ ಅದರ ಗಾಯನಕ್ಕೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಇದರೊಂದಿಗೆ ಭಾರತದ ರಾಷ್ಟ್ರಗೀತೆಯಷ್ಟೇ ಕಾನೂನುಬದ್ಧ ರಕ್ಷಣೆ ಲಭಿಸುವ ಹೊಸ ಅಧ್ಯಾಯ ಆರಂಭವಾಗಲಿದೆ.
