– ಬುಲೆಟ್ ರೈಲು 2027 ರಲ್ಲೇ ಸೇವೆಗೆ ಮುಕ್ತ
ನವದೆಹಲಿ: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ (Bullet Train Project) ವಿಳಂಬಕ್ಕೆ ಭಾರತದ ಬೇಜವಾಬ್ದಾರಿಯೇ ಕಾರಣ ಎನ್ನುವ ಜಪಾನ್ ಮಾಜಿ ಸಚಿವ ಹಿಡೇಕಿ ಮಕಿಹಾರಾ ಅವರ ಆರೋಪಗಳನ್ನ ಭಾರತ ಸರ್ಕಾರ ತಳ್ಳಿಹಾಕಿದೆ.
ಮಕಿಹಾರಾ ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಅಷ್ಟೇ, ವಾಸ್ತವತೆ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ. ಇದನ್ನೂ ಓದಿ: ‘ವಂದೇ ಮಾತರಂ’ಗೆ ಅಡ್ಡಿಪಡಿಸಿದರೆ 3 ವರ್ಷ ಜೈಲುಶಿಕ್ಷೆ – ಕೇಂದ್ರದ ಪ್ರಸ್ತಾವನೆ
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತ-ಜಪಾನ್ ನಡುವಿನ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಯೋಜನೆಗೆ ಸಂಬಂಧಿಸಿದ ಮಾತುಕತೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿವೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಜಪಾನ್‌ನಿಂದ ಹೊಸ ತಲೆಮಾರಿನ E20 ಶಿಂಕಾನ್ಸೆನ್ ರೈಲುಗಳನ್ನು ಭಾರತಕ್ಕೆ 2030ರ ದಶಕದ ಆರಂಭದಲ್ಲಿ ಒದಗಿಸಲಾಗುವುದು. ಈ ರೈಲುಗಳು ಇನ್ನೂ ಅಭಿವೃದ್ಧಿ ಹಂತದಲ್ಲಿರುವುದರಿಂದ, ಎರಡೂ ದೇಶಗಳು ಯೋಜನೆ ಆರಂಭಿಕ ಹಂತದಲ್ಲಿ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಹೈ-ಸ್ಪೀಡ್ ರೈಲುಗಳನ್ನ ಬಳಸಲು ಒಪ್ಪಿಕೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.
ಬುಲೆಟ್ ರೈಲು ಯೋಜನೆಯ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಮೊದಲ ಹಂತವನ್ನು 2027ರಲ್ಲೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಜೈಸ್ವಾಲ್ ಅವರು ಹೇಳಿದ್ದಾರೆ. ಇದನ್ನೂ ಓದಿ: ದಿನಸಿ ತರಲು ತೆರಳಿದ್ದ ರಾಷ್ಟ್ರ ಮಟ್ಟದ ಯುವ ಶೂಟರ್ ದಮಯಂತಿ ಸೇನ್ ನಾಪತ್ತೆ
インドでの新幹線計画は、私も関わったことがあるのですが、国際会議や交渉の場で繰り返されるインド人の無茶苦茶ぶりが際立っていました。とにかく約束を守らない。約束してもすぐにひっくり返す。自己利益を最後まで主張し続ける。特に担当大臣はひどく、一番上があれではまともな取引なんてできませ…
— 牧原秀樹 まきはらひでき (@hmakihara) July 14, 2026
ಜಪಾನ್ ಮಾಜಿ ಸಚಿವರ ಆರೋಪವೇನು?
ಭಾರತದ ಬುಲೆಟ್ ರೈಲು ಯೋಜನೆಯಲ್ಲಿ ನಾನೂ ಭಾಗಿಯಾಗಿದ್ದೆ. ಆದ್ರೆ ಅಂತಾರಾಷ್ಟ್ರೀಯ ಸಭೆಗಳು ಮತ್ತು ಮಾತುಕತೆಗಳಲ್ಲಿ ಭಾರತೀಯರಿಂದ ಪದೇ ಪದೇ ಬೇಜವಾಬ್ದಾರಿ ಕಂಡುಬಂದಿತ್ತು. ವಿವೇಚನಾ ರಹಿತ ನಡವಳಿಕೆ ತೋರುತ್ತಿದ್ದ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಕೆಲವೇ ಸಮಯದಲ್ಲಿ ಉಲ್ಟಾ ಹೊಡೆಯುತ್ತಿದ್ದರು ಎಂದು ಆರೋಪಿಸಿದ್ದಾರೆ. ಇದಲ್ಲದೇ, ಯೋಜನೆಯ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಜಪಾನ್‌ಗೆ ಅವಕಾಶ ನೀಡಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು.
ಭಾರತದ ಬುಲೆಟ್ ರೈಲು ಯೋಜನೆಯಲ್ಲಿ ಏನಿದೆ?
ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ ಭಾರತದ ಮೊದಲ ಬುಲೆಟ್ ರೈಲು ಯೋಜನೆಯಾಗಿದೆ. ಸುಮಾರು 508 ಕಿಲೋಮೀಟರ್ ಉದ್ದದ ಈ ಮಾರ್ಗವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳನ್ನು ಸಂಪರ್ಕಿಸಲಿದೆ. ಈ ಯೋಜನೆಯಲ್ಲಿ ಜಪಾನ್‌ನ ಅತ್ಯಾಧುನಿಕ ಶಿಂಕಾನ್ಸೆನ್ ತಂತ್ರಜ್ಞಾನ ಬಳಸಲಾಗುತ್ತಿದ್ದು, ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಕಡಿಮೆ ಬಡ್ಡಿದರದ ದೀರ್ಘಾವಧಿ ಸಾಲದ ಮೂಲಕ ಯೋಜನೆಗೆ ಆರ್ಥಿಕ ನೆರವು ನೀಡುತ್ತಿದೆ.
ಮುಂಬೈನ ಬಾಂದ್ರಾ ಕುರ್‌ಲಾ ಕಾಂಪ್ಲೆಕ್ಸ್ (BKC) ನಿಂದ ಆರಂಭವಾಗುವ ಈ ಬುಲೆಟ್ ರೈಲು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ. ಇದು ಮುಂಬೈ, ವಾಪಿ, ಸೂರತ್, ಆನಂದ್, ವಡೋದರಾ ಮತ್ತು ಅಹಮದಾಬಾದ್ ನಡುವಿನ ಸಂಪರ್ಕವನ್ನ ಮತ್ತಷ್ಟು ಬಲಪಡಿಸಲಿದೆ.
