– ಆರೋಗ್ಯ ಸ್ಥಿರವಾಗಿದ್ದರೂ ಚಿಕಿತ್ಸೆ ಅಗತ್ಯ ಎಂದ ವೈದ್ಯರು
ನವದೆಹಲಿ: 20 ದಿನಗಳಿಂದ ಉಪವಾಸ ಸತ್ಯಾಗ್ರಹ (Hunger Strike) ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ (Sonam Wangchuk) ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ನನ್ನ ಹಾಗೂ ಕುಟುಂಬದ ಅನುಮತಿ ಇಲ್ಲದೆ ಯಾವುದೇ ಚಿಕಿತ್ಸೆ ನೀಡಬೇಡಿ ಎಂದು ಅವರ ಪತ್ನಿ ಗೀತಾಂಜಲಿ ಜೆ. ತಿಳಿಸಿದ್ದಾರೆ.
ಗೀತಾಂಜಲಿ ಅವರು ಸೋಷಿಯಲ್ ಮೀಡಿಯಾ Xನಲ್ಲಿ, ʼಕಳೆದ 20 ದಿನಗಳಿಂದ ಅವರ ಆರೋಗ್ಯವನ್ನು ಗಮನಿಸುತ್ತಿರುವ ವೈದ್ಯರು ಹಾಗೂ ಕುಟುಂಬದ ಒಪ್ಪಿಗೆ ಇಲ್ಲದೆ ನೇರವಾಗಿ ಅಥವಾ ಐವಿ ಮೂಲಕ ಯಾವುದೇ ಚಿಕಿತ್ಸೆ ನೀಡಬಾರದು. ಶುಕ್ರವಾರದವರೆಗೂ ವಾಂಗ್ಚುಕ್ ಆರೋಗ್ಯವಾಗಿಯೇ ಇದ್ದರು. ಆಸ್ಪತ್ರೆಗೆ ದಾಖಲಿಸುವ ಅಗತ್ಯವೇ ಇರಲಿಲ್ಲʼ ಎಂದು ಬರೆದುಕೊಂಡಿದ್ದಾರೆ.
ಇತ್ತ, ದೆಹಲಿ ಪೊಲೀಸರು ಮಾತ್ರ ವೈದ್ಯರ ಸಲಹೆ ಹಾಗೂ ಹೈಕೋರ್ಟ್ ನಿರ್ದೇಶನದಂತೆ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಉಪವಾಸದಿಂದ ದೇಹ ದುರ್ಬಲಗೊಂಡಿದ್ದು, ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಎತ್ತು, ಟ್ರ್ಯಾಕ್ಟರ್ ಇಲ್ಲ – ಬಿತ್ತನೆ ಕೂರಿಗೆಯನ್ನು ತಾವೇ ಎಳೆದ ವೃದ್ಧ ದಂಪತಿ
ಸಫ್ದರ್‌ಜಂಗ್ ಆಸ್ಪತ್ರೆ ಬಿಡುಗಡೆ ಮಾಡಿದ ವೈದ್ಯಕೀಯ ಮಾಹಿತಿಯ ಪ್ರಕಾರ, 21ನೇ ದಿನದ ಉಪವಾಸದಿಂದ ವಾಂಗ್ಚುಕ್ ದೇಹದಲ್ಲಿ ನೀರಿನ ಕೊರತೆ ಮತ್ತು ನಿಶಕ್ತಿ ಕಂಡುಬಂದಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದರೂ, ನಿರಂತರ ನಿಗಾ ಮತ್ತು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಾಂಗ್ಚುಕ್ ಸುಮಾರು 9 ಕೆಜಿ ತೂಕ ಇಳಿಕೆಯಾಗಿದ್ದಾರೆ. ಆದರೂ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗುವವರೆಗೂ ಉಪವಾಸ ಕೈಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಡೆದ ಸಭೆಯಲ್ಲಿ, ಜುಲೈ 20ರಂದು ಸಂಸತ್‌ವರೆಗೆ ಶಾಂತಿಯುತ ಮೆರವಣಿಗೆ ನಡೆಸುವಂತೆ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಬೆಳವಣಿಗೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: ನೆಲಮಂಗಲದಲ್ಲಿ ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ – ಮೂರು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
