ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿ, ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ಸ್ ಆಗಿ ಐತಿಹಾಸಿಕ ಸಾಧನೆ ಮಾಡಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಕೇವಲ 155 ರನ್‌ಗಳಿಗೆ ಗಿಲ್ ಪಡೆಯನ್ನು ಕಟ್ಟಿಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶಸ್ವಿಯಾಗಿದ್ದರು. ಈ ಸುಲಭ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ಇನ್ನು 12 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಟೂರ್ನಿಯುದ್ದಕ್ಕೂ ಆರ್‌ಸಿಬಿ ಬೌಲರ್‌ಗಳು ತೋರಿದ ಅದ್ಭುತ ಪಾರಮ್ಯವೇ ತಂಡದ ಈ ಚಾಂಪಿಯನ್‌ಶಿಪ್‌ಗೆ ಪ್ರಮುಖ ಕಾರಣ. ಭುವನೇಶ್ವರ್ ಕುಮಾರ್, ರಸಿಕ್ ಸಲಾಂ, ಜೋಶ್ ಹೇಜಲ್‌ವುಡ್, ಕೃನಾಲ್ ಪಾಂಡ್ಯ ಹಾಗೂ ಜಾಕೋಬ್ ಡಫಿ ಒಳಗೊಂಡ ಬೌಲಿಂಗ್ ಪಡೆ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದರಿಂದ ಮತ್ತೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಬಹಳ ಮುಖ್ಯವಾಗಿ ಆರ್‌ಸಿಬಿ ಒಟ್ಟು 45 ಕೋಟಿ ರೂ. ಖರ್ಚು ಮಾಡಿ ಬೌಲರ್‌ಗಳನ್ನು ಖರೀದಿಸಿತ್ತು. ಈ ತಂತ್ರ ಫಲ ನೀಡಿದ್ದು ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್
2025ರ ಐಪಿಎಲ್ ಹರಾಜಿನಲ್ಲಿ 10.75 ಕೋಟಿ ರೂ. ಭಾರಿ ಮೊತ್ತಕ್ಕೆ ಆರ್‌ಸಿಬಿ ಸೇರಿದ ಭುವಿ, ಫ್ರಾಂಚೈಸಿ ಇಟ್ಟ ನಂಬಿಕೆಯನ್ನು ನೂರಕ್ಕೆ ನೂರರಷ್ಟು ಉಳಿಸಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಆಡಿದ 16 ಪಂದ್ಯಗಳಲ್ಲಿ 7.95ರ ಅದ್ಭುತ ಎಕಾನಮಿಯಲ್ಲಿ 501 ರನ್ ನೀಡಿ ಬರೋಬ್ಬರಿ 28 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಿತ್ತಿದ್ದಲ್ಲದೆ, ಕೊನೆಯಲ್ಲಿ ಸಿಕ್ಸರ್ ಸಿಡಿಸಿ ಪಂದ್ಯ ಶ್ರೇಷ್ಠ (Man of the Match) ಪ್ರಶಸ್ತಿ ಜಯಿಸಿದ್ದರು.

ಫೈನಲ್ ಹೀರೋ ರಸಿಕ್ ಸಲಾಂ
ಪ್ರಸಕ್ತ ಸೀಸನ್‌ನಲ್ಲಿ ಆರ್‌ಸಿಬಿ ಪರ ಎಕ್ಸ್-ಫ್ಯಾಕ್ಟರ್ ಆಗಿ ಮೂಡಿಬಂದವರು ಯುವ ವೇಗಿ ರಸಿಕ್ ಸಲಾಂ. ಒಟ್ಟು 12 ಪಂದ್ಯಗಳಿಂದ 19 ವಿಕೆಟ್ ಉರುಳಿಸಿ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಗುಜರಾತ್ ವಿರುದ್ಧದ ಮಹತ್ವದ ಫೈನಲ್ ಪಂದ್ಯದಲ್ಲಿ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 27 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು. ಜಿಟಿ ತಂಡವನ್ನು 155 ರನ್‌ಗಳಿಗೆ ನಿಯಂತ್ರಿಸುವಲ್ಲಿ ಇವರ ಪಾತ್ರ ದೊಡ್ಡದಿತ್ತು. ಇದನ್ನೂ ಓದಿ: ಮುಂದಿನ ಬಾರಿ RCB ತವರು ಮೈದಾನ ಯಾವುದು?

ಅದೃಷ್ಟದ ಆಟಗಾರ ಜೋಶ್ ಹೇಜಲ್‌ವುಡ್
ಫೈನಲ್ ಪಂದ್ಯಗಳ ಲಕ್ಕಿ ಚಾರ್ಮ್ ಜೋಶ್ ಹೇಜಲ್‌ವುಡ್ ಈ ಬಾರಿಯೂ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಆಡಿದ 13 ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಸ್ಥಿರತೆ ಕಾಯ್ದುಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 12 ರನ್ ನೀಡಿ 4 ವಿಕೆಟ್ ಕಿತ್ತು ಎದುರಾಳಿ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು ಹಾಗೂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಇದನ್ನೂ ಓದಿ: ಲಕ್ಕಿ ಸ್ಟಾರ್ ಹೇಜಲ್‌ವುಡ್ – ಆಡಿದ 10 ಫೈನಲ್‌ಗಳಲ್ಲೂ ಗೆದ್ದು ಬೀಗಿದ ಆಸಿಸ್ ವೇಗಿ!

ಆಲ್‌ರೌಂಡರ್ ಕೃನಾಲ್ ಪಾಂಡ್ಯ
ತಮ್ಮ ಸ್ಪಿನ್ ಜಾದೂ ಹಾಗೂ ಬ್ಯಾಟಿಂಗ್ ಮೂಲಕ ಕೃನಾಲ್ ಪಾಂಡ್ಯ ತಂಡಕ್ಕೆ ಮಧ್ಯಮ ಓವರ್‌ಗಳಲ್ಲಿ ಗಟ್ಟಿ ಬಲ ನೀಡಿದರು. 16 ಪಂದ್ಯಗಳಿಂದ 8.42ರ ಎಕಾನಮಿಯಲ್ಲಿ 14 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಮಾತ್ರವಲ್ಲದೆ ಮುಂಬೈ ಇಂಡಿಯನ್ಸ್ ವಿರುದ್ಧದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ ಭರ್ಜರಿ 73 ರನ್ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಇದನ್ನೂ ಓದಿ: ಆಡಿದ 5 ಐಪಿಎಲ್ ಫೈನಲ್‌ಗಳಲ್ಲೂ ಗೆಲುವು – ಕೃನಾಲ್ ಪಾಂಡ್ಯ ‘ಅನ್‌ಬೀಟನ್’ ಚಾಂಪಿಯನ್!

ಜಾಕೋಬ್ ಡಫಿ ಇಂಪ್ಯಾಕ್ಟ್
ಟೂರ್ನಿಯಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು 9 ವಿಕೆಟ್ ಪಡೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 22 ರನ್‌ಗಳಿಗೆ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಡಾಟ್ ಹೀರೋ ಸುಯಶ್ ಶರ್ಮಾ
ಈ ಸೀಸನ್‌ನಲ್ಲಿ 10 ವಿಕೆಟ್ ಕಬಳಿಸಿರುವ ಸುಯಶ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 20 ಡಾಟ್ ಬಾಲ್‌ಗಳನ್ನು ಎಸೆಯುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ‘ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಸ್ಪಿನ್ನರ್’ ಎಂಬ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ.
ಆರ್‌ಸಿಬಿ ತಂಡದ ಬ್ಯಾಟರ್‌ಗಳು ರನ್ ಮಳೆ ಹರಿಸಿದರೆ, ಬೌಲರ್‌ಗಳು ಮಾತ್ರ ತಾವೂ ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಇಡೀ ಟೂರ್ನಿಯಲ್ಲಿ ಸಂಘಟಿತ ದಾಳಿ ನಡೆಸಿ ಎದುರಾಳಿಗಳನ್ನು ಧೂಳೀಪಟ ಮಾಡಿದ್ದಾರೆ. ಇದೇ ಬೌಲಿಂಗ್ ಪಡೆಯ ಪಾರಮ್ಯ ಆರ್‌ಸಿಬಿ ಮುಡಿಗೆ ಸತತ ಎರಡನೇ ಬಾರಿಗೆ ಚಾಂಪಿಯನ್ ಕಿರೀಟ ಮುಡಿಗೇರುವಂತೆ ಮಾಡಿದೆ. ಇದನ್ನೂ ಓದಿ: 19 ವರ್ಷ, 19 ಆವೃತ್ತಿ – ಆರ್‌ಸಿಬಿ ಸೋಲು-ಗೆಲುವಿನ ರೋಚಕ ಇತಿಹಾಸ!

ಯಾರಿಗೆ ಎಷ್ಟು ಕೋಟಿ?
ಜೋಶ್ ಹ್ಯಾಜಲ್‌ವುಡ್ -12.50 ಕೋಟಿ
ಭುವನೇಶ್ವರ್ ಕುಮಾರ್ – 10.75 ಕೋಟಿ
ರಸಿಖ್ ದಾರ್ ಸಲಾಂ – 6 ಕೋಟಿ
ಯಶ್ ದಯಾಳ್ – 5 ಕೋಟಿ
ಸುಯಾಶ್ ಶರ್ಮಾ ಸ್ಪಿನ್ – 2.60 ಕೋಟಿ
ಜಾಕೋಬ್ ಡಫಿ – 2 ಕೋಟಿ
ನುವಾನ್ ತುಷಾರ – 1.60 ಕೋಟಿ
ಅಭಿನಂದನ್ ಸಿಂಗ್ – 30 ಲಕ್ಷ
ಒಟ್ಟು – 40.75 ಕೋಟಿ ರೂ.
ಆಲ್‌ರೌಂಡರ್ ಆಟಗಾರರು
ಕೃನಾಲ್ ಪಾಂಡ್ಯ – 5.75 ಕೋಟಿ
ವೆಂಕಟೇಶ್ ಅಯ್ಯರ್ – 7 ಕೋಟಿ
ಮಂಗೇಶ್ ಯಾದವ್ – 5.20 ಕೋಟಿ
ವಿಕಿ ಒಸ್ಟ್ವಾಲ್ – 30 ಲಕ್ಷ
