– ಡಿಸಿಎಂ ಜೊತೆ ಸಚಿವ ಸ್ಥಾನಕ್ಕೆ ವಿಸಿಕೆ ಷರತ್ತು
ಚೆನ್ನೈ: ಪಟ್ಟು ಬಿಡದ ನಟ-ರಾಜಕಾರಣಿ ವಿಜಯ್ (Thalapathy vijay) ತಮಿಳಗ ವೆಟ್ರಿ ಕಳಗಂ ಮತ್ತು ರಾಜ್ಯಪಾಲರ ನಡುವಿನ ಜಿದ್ದಾಜಿದ್ದಿನಿಂದಾಗಿ ತಮಿಳುನಾಡು ರಾಜಕೀಯ ಈಗ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿದೆ. ನಿನ್ನೆ 3ನೇ ಬಾರಿ ರಾಜ್ಯಪಾಲರನ್ನ (TamilNadu Governor) ಭೇಟಿ ಮಾಡಿದ ವಿಜಯ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ ಬಹುಮತದ ಮ್ಯಾಜಿಕ್ ನಂಬರ್ ಸುತ್ತಲಿನ ಅನಿಶ್ಚಿತತೆ ಮಾತ್ರ ಮುಂದುವರಿದಿದೆ.
ಟಿವಿಕೆ (TVK) ಅಧ್ಯಕ್ಷ ವಿಜಯ್ ನಿನ್ನೆ ರಾಜಭವನದಲ್ಲಿ ರಾಜ್ಯಪಾಲ ಆರ್.ವಿ ಅರ್ಲೇಕರ್ ಅವರನ್ನ ಭೇಟಿಯಾಗಿ, ತಮ್ಮ ಬಳಿ 116 ಶಾಸಕರ ಬೆಂಬಲವಿದೆ ಎಂದು ಪತ್ರ ಸಲ್ಲಿಸಿದ್ದಾರೆ. ಆದರೆ ವಿಜಯ್ ಪಕ್ಷಕ್ಕೆ ಇನ್ನೂ 2 ಸ್ಥಾನಗಳ ಕೊರತೆ ಇರುವುದು ಕಂಡುಬಂದಿದೆ. ಆದ್ದರಿಂದ ದಳಪತಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದು ಇಂದೂ ಕೂಡ ಅನುಮಾನವಾಗಿದೆ. ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತ ಸಾಬೀತುಪಡಿಸಲು 118 ಶಾಸಕರ ಅಗತ್ಯವಿದೆ.
ಡಿಸಿಎಂ ಜೊತೆ ಸಚಿವ ಸ್ಥಾನಕ್ಕೆ ಷರತ್ತು
ತಮಿಳುನಾಡು (TamilNadu) ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆ ಆಗ್ತಿದೆ. ಟಿವಿಕೆಗೆ ಬೆಂಬಲಿಸುವ ಬಗ್ಗೆ ವಿಸಿಕೆ ಪಕ್ಷ ಇಂದು ಅಧಿಕೃತವಾಗಿ ಘೋಷಿಸಲಿದೆ. ತಡರಾತ್ರಿ ವಿಜಯ್ ನಿವಾಸಕ್ಕೆ ಆಗಮಿಸಿದ್ದ ವಿಸಿಕೆ ಪಕ್ಷದ ನಾಯಕರು ಬೆಂಬಲ ನೀಡಬೇಕಾದ್ರೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಅಂತ ಷರತ್ತು ಇಟ್ಟಿದ್ದಾರೆ.
ವಿಸಿಕೆ ಷರತ್ತುಗಳೇನು?
* ಬೇಡಿಕೆ 1: ಉಪಮುಖ್ಯಮಂತ್ರಿ ಜೊತೆಗೆ ಸಚಿವ ಸ್ಥಾನ
* ಬೇಡಿಕೆ 2: ಸಂಸದ ತಿರುಮಾವಲವನ್‌ಗೆ ಡಿಸಿಎಂ ಹುದ್ದೆ
* ಬೇಡಿಕೆ 3: ವಿಜಯ್‌ರಿಂದ ತೆರವಾಗುವ ಕ್ಷೇತ್ರದಿಂದ ಸ್ಪರ್ಧೆ
* ಬೇಡಿಕೆ 4: ಎಸ್‌ಸಿ ಕಲ್ಯಾಣಕ್ಕಾಗಿ ಶಾಸಕಾಂಗ ಕಾಯ್ದೆ
ಹೀಗೆ ವಿಜಯ್ ಮುಂದೆ ಬೇಡಿಕೆಗಳನ್ನು ಇಟ್ಟಿರುವ ವಿಸಿಕೆ ತಮ್ಮ ಬೇಡಿಕೆ ಒಪ್ಪಿದ್ರೆ ಮಾತ್ರ ಬೆಂಬಲ ಎಂದಿದೆ. ವಿಜಯ್‌ಗೆ ಗಡುವು ನೀಡಿರುವ ವಿಸಿಕೆ ಇಂದು ಅಧಿಕೃತವಾಗಿ ಬೆಂಬಲ ಘೋಷಿಸುವ ಸಾಧ್ಯತೆ ಇದೆ. ಸದ್ಯ ವಿಜಯ್ ಪಕ್ಷಕ್ಕೆ ವಿಸಿಕೆ ಹೊರತು 116 ಶಾಸಕರ ಬೆಂಬಲ ಇದೆ. ವಿಸಿಕೆ ಬೆಂಬಲ ಖಾತ್ರಿಯಾದ್ರೆ 118 ಶಾಸಕರ ಬಲ ಆಗಲಿದೆ.
ಟಿವಿಕೆ ಪಕ್ಷಕ್ಕಿಲ್ಲ ಮುಸ್ಲಿಂ ಲೀಗ್ ಬೆಂಬಲ
ಟಿವಿಕೆಗೆ ಈ ಹಿಂದೆ ಬೆಂಬಲ ನೀಡಬಹುದು ಎನ್ನಲಾಗಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಈಗ ಅಧಿಕೃತವಾಗಿ ಹಿಂದೆ ಸರಿದಿದೆ. ನಮ್ಮದು ಸಿದ್ಧಾಂತದ ಮೈತ್ರಿ, ಡಿಎಂಕೆಯನ್ನು ಬಿಟ್ಟು ಬೇರೆ ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಪಕ್ಷ ಘೋಷಿಸಿದೆ. ಇದು ವಿಜಯ್ ಅವರ ಲೆಕ್ಕಾಚಾರಕ್ಕೆ ಹಿನ್ನಡೆ ಉಂಟುಮಾಡಿದೆ.

