ಬಳ್ಳಾರಿ: ಪ್ರೇಮಿಗಳಿಬ್ಬರು (Lovers) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬಳ್ಳಾರಿಯ (Ballari) ಇಂದಿರಾನಗರದ ಡೈರಿ ಕ್ರಾಸ್ ಬಳಿ ನಡೆದಿದೆ.
ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದ ಮಂಗಳಮುಖಿ ಸುಹಾಸಿನಿ (29) ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿಯ ಶೇಖರ್ (27) ಮೃತರು.
ಮಂಗಳಮುಖಿ ಸುಹಾಸಿನಿಯನ್ನು ಕೊಲೆ ಮಾಡಿ ಬಳಿಕ ಶೇಖರ್ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸುಹಾಸಿನಿ ಹಾಗೂ ಶೇಖರ್ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮಧ್ಯೆ ಅವರಿಬ್ಬರ ಶವ ಅವರ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ.
ಇಂದಿರಾ ನಗರದ ಮನೆಯಲ್ಲಿ ಮಂಗಳಮುಖಿ ಸುಹಾಸಿನಿ ಹಾಗೂ ಶೇಖರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರಲ್ಲಿ ಒಬ್ಬರ ಕೊಲೆಯಾಗಿದ್ದು, ಇನ್ನೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಸುಹಾಸಿನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರ ಸಾವಿನ ಬಗ್ಗೆ ತನಿಖೆ ಶುರುಮಾಡಿದ್ದಾರೆ. ಇದನ್ನೂ ಓದಿ: ನಾನು ಸತ್ರೆ ಒಂಟಿಯಾಗ್ತಾಳೆ – ನಿವೃತ್ತ ಇಸ್ರೋ ಉದ್ಯೋಗಿಯಿಂದ ಕತ್ತುಹಿಸುಕಿ ಪತ್ನಿಯ ಕೊಲೆ
ಮಂಗಳಮುಖಿ ಲಕ್ಷ್ಮಿ ಅವರು ಸುಹಾಸಿನಿಯನ್ನು ಚಿಕ್ಕವಳಿದ್ದಾಗಲೇ ದತ್ತು ಪಡೆದು ಅತ್ಯಂತ ಸಾಕಿದ್ದರು. ಲಕ್ಷ್ಮಿ ಮಾತ್ರವಲ್ಲದೇ ಅನೇಕ ಮಂಗಳಮುಖಿಯರು ಸುಹಾಸಿನಿಯನ್ನು ಸಾಕಿ ಸಲುಹಿದ್ದರು.
ಮೃತ ಶೇಖರ್ ಮೂಲತಃ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲ್ಪನ ಗುಡಿ ಗ್ರಾಮದವನಾಗಿದ್ದರೂ ಮಂಗಳಮುಖಿ ಸುಹಾಸಿನಿ ಪ್ರೀತಿಗೋಸ್ಕರ ಬಳ್ಳಾರಿ ನಗರದಲ್ಲೇ ಇದ್ದು ಆಟೋ ಓಡಿಸುತ್ತಿದ್ದ. ಮದುವೆಗೆ ಇಬ್ಬರ ಮನೆಯವರ ವಿರೋಧವಿದ್ದರಿಂದ ಸ್ಪಲ್ಪದಿನ ಊರು ಬಿಟ್ಟು ಹೋಗಿದ್ದರು. ಬಳಿಕ ಬಳ್ಳಾರಿಗೆ ಬಂದು ಇಂದಿರಾನಗರದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದರು. ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು. ಕೆಲ ದಿನಗಳಿಂದ ದೂರವಾಗಿದ್ದರು. ಇತ್ತೀಚೆಗೆ ಶೇಖರ್ ಮತ್ತೇ ಸುಹಾಸಿನಿ ಮನೆಗೆ ಬರುತ್ತಿದ್ದ.
ಅವರಿಬ್ಬರ ಜಗಳವೇ ಈ ಸಾವಿಗೆ ಕಾರಣವಾಗಿರಬಹುದು ಎನ್ನುವುದು ಸ್ಥಳೀಯರ ಅನುಮಾನ. ಇನ್ನೊಂದೆಡೆ ಶೇಖರ್ ಮನೆಯವರು ಸುಹಾಸಿಯನನ್ನ ಬಿಟ್ಟು ಬೇರೆ ಹುಡುಗಿಯನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದರು. ಇದಕ್ಕೆ ಸುಹಾಸಿನಿ ಶೇಖರ್ ಜೊತೆ ಜಗಳ ಮಾಡುತ್ತಿದ್ದಳು. ಇದೇ ವಿಚಾರದಲ್ಲಿ ಜಗಳ ನಡೆದು ಸುಹಾಸಿನಿಯನ್ನು ಶೇಖರ್ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.

