– ಆಪರೇಷನ್ ಟೈಗರ್ ಸಕ್ಸಸ್?
– ಬಿಕ್ಕಟ್ಟು ನಿಯಂತ್ರಿಸಲು ಕಣಕ್ಕಿಳಿದ ಠಾಕ್ರೆ
ಮುಂಬೈ: ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ (UBT)ಗೆ ಮತ್ತೊಂದು ದೊಡ್ಡ ರಾಜಕೀಯ ಹೊಡೆತ ಬೀಳುವ ಸಾಧ್ಯತೆ ಇದೆ. ಪಕ್ಷದ 6 ಬಂಡಾಯ ಸಂಸದರು ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.
ಬಂಡಾಯ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಸಲ್ಲಿಸಿರುವ ಪತ್ರ ಹಾಗೂ ಸಭೆಯ ಫೋಟೋ ಮತ್ತು ವಿಡಿಯೊಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ ಶಿವಸೇನೆ (ಯುಬಿಟಿ)ಯಿಂದ ದೂರವಾಗಲು ಕಾರಣವಾದ ಬೆಳವಣಿಗೆಗಳ ಬಗ್ಗೆ ಅವರು ತಮ್ಮ ನಿಲುವು ಸ್ಪಷ್ಟಪಡಿಸಲಿದ್ದಾರೆ.
2022ರಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯದ ಬಳಿಕ ಉದ್ಧವ್ ಠಾಕ್ರೆ ತಮ್ಮದೇ ಶಿವಸೇನೆ (ಯುಬಿಟಿ) ಪಕ್ಷ ರಚಿಸಿದ್ದರು. ಇದೀಗ ಅದೇ ಪಕ್ಷದಲ್ಲಿ ಮತ್ತೊಮ್ಮೆ ಬಿರುಕು ಕಾಣಿಸಿಕೊಂಡಿದ್ದು, ಇದು ಠಾಕ್ರೆ ಕುಟುಂಬಕ್ಕೆ ಮತ್ತೊಂದು ರಾಜಕೀಯ ಸಂಕಷ್ಟ ತಂದೊಡ್ಡಿದೆ. ಪ್ರಸ್ತುತ ಶಿವಸೇನೆ (ಯುಬಿಟಿ)ಗೆ ಲೋಕಸಭೆಯಲ್ಲಿ 9 ಸಂಸದರು ಇದ್ದಾರೆ. ಇವರಲ್ಲಿ 6 ಮಂದಿ ಬಂಡಾಯ ಎದ್ದಿದ್ದಾರೆ. ಈ ಬೆಳವಣಿಗೆಯ ಹಿಂದೆ ಶಿಂಧೆ ಬಣದ ‘ಆಪರೇಷನ್ ಟೈಗರ್’ ಕೆಲಸ ಮಾಡಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.ಇದನ್ನೂ ಓದಿ: ಶಂಕಿತ ಅಪರಾಧಿಗಳ ಪತ್ತೆಗೆ ಬಂತು ಹೈಟೆಕ್ ಆ್ಯಪ್ – ಕೇವಲ 35 ಸೆಕೆಂಡ್‌ನಲ್ಲಿ ಜಾತಕ ಬಿಚ್ಚಿಡುತ್ತೆ ಅಭಿಜ್ಞಾನ್!
ಬಂಡಾಯ ಸಂಸದರು ಈಗಾಗಲೇ ಲೋಕಸಭೆ ಸ್ಪೀಕರ್ ಅವರನ್ನು ಭೇಟಿ ಮಾಡಿ ತಮ್ಮ ನಿಷ್ಠೆ ಬದಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪಕ್ಷದ ಮೂಲ ಸಿದ್ಧಾಂತಗಳಿಂದ ಠಾಕ್ರೆ ಕುಟುಂಬ ದೂರವಾಗಿದೆ ಎಂಬ ಕಾರಣವನ್ನೂ ಅವರು ಉಲ್ಲೇಖಿಸಿದ್ದಾರೆ. ಅಗತ್ಯವಿದ್ದರೆ ಮತ್ತೊಮ್ಮೆ ಸ್ಪೀಕರ್ ಅವರನ್ನು ಭೇಟಿ ಮಾಡಲು ಸಿದ್ಧವಿದ್ದೇವೆ ಎಂದು ಬಂಡಾಯ ಸಂಸದರು ತಿಳಿಸಿದ್ದಾರೆ. ಜೊತೆಗೆ ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಬೆಂಬಲ ಘೋಷಿಸುವ ಸಾಧ್ಯತೆಯೂ ಇದೆ.
ಇತ್ತ ಶಿವಸೇನೆ (ಯುಬಿಟಿ) ಬಂಡಾಯ ಸಂಸದರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಸಂಸದೀಯ ಪಕ್ಷದ ಸಭೆಗೆ ಗೈರಾಗಿದ್ದ ಕಾರಣ ಅವರ ಸದಸ್ಯತ್ವ ರದ್ದುಪಡಿಸುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಮತ್ತೊಂದೆಡೆ, ಪಕ್ಷದಲ್ಲಿ ಮತ್ತಷ್ಟು ಬಿರುಕು ಉಂಟಾಗದಂತೆ ತಡೆಯಲು ಉದ್ಧವ್ ಠಾಕ್ರೆ ಹಾನಿ ನಿಯಂತ್ರಣ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದನ್ನೂ ಓದಿ: ನನ್ನ, ತಂದೆ ಹತ್ಯೆಗೆ ಮಾಜಿ ಆಪ್ತನಿಂದ ಸಂಚು – ಲಾಲು ಪುತ್ರ ತೇಜ್ ಪ್ರತಾಪ್ ಗಂಭೀರ ಆರೋಪ
ಬಂಡಾಯ ಸಂಸದರ ಕ್ಷೇತ್ರಗಳಾದ ಯವತ್ಮಾಳ, ಪರಭಣಿ, ಹಿಂಗೋಲಿ, ಧಾರಾಶಿವ್ ಹಾಗೂ ಶಿರಡಿಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಪಕ್ಷವನ್ನು ಸಂಘಟಿಸುವ ಪ್ರಯತ್ನ ಮಾಡಲಿದ್ದಾರೆ. ಮಹಾರಾಷ್ಟ್ರ ರಾಜಕೀಯದಲ್ಲಿ ಈ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಶಿವಸೇನೆ (ಯುಬಿಟಿ)ಯ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
