ನವದೆಹಲಿ: ಐಪಿಎಲ್ 2026ರ (IPL 2026) ಲೀಗ್ ಹಂತದ ಪಂದ್ಯಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿವೆ. ಇದರ ನಡುವೆ ಮೂರು ತಂಡಗಳ ನಾಯಕರನ್ನು ಬದಲಿಸುವ ಬಗ್ಗೆ ಫ್ರ್ಯಾಂಚೈಸಿಗಳು ಚಿಂತನೆ ನಡೆಸಿವೆ ಎನ್ನಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮೂರು ತಂಡದ ನಾಯಕರನ್ನು ಬದಲಿಸುವ ಬಗ್ಗೆ ಫ್ರ್ಯಾಂಚೈಸಿ ಯೋಚಿಸಿದೆ. ಈವರೆಗೆ ನಡೆದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ಹಾಗೂ ತಂಡವನ್ನು ಮುನ್ನಡೆಸಲು ವಿಫಲವಾದ ಹಿನ್ನೆಲೆ ರಿಷಭ್ ಪಂತ್, ಅಕ್ಷರ್ ಪಟೇಲ್ ಮತ್ತು ಅಜಿಂಕ್ಯ ರಹಾನೆ ಅವರನ್ನ ನಾಯಕತ್ವ ಸ್ಥಾನದಿಂದ ಕೆಳಗಿಳಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸದ್ದಿಲ್ಲದೇ ನಿವೃತ್ತಿ ಬಗ್ಗೆ ಸುಳಿವು ಕೊಟ್ರಾ ಕಿಂಗ್ ಕೊಹ್ಲಿ?
ಲಕ್ನೋ ಸೂಪರ್ ಜೈಂಟ್ಸ್:
2025 ಐಪಿಎಲ್‌ಗೆ ನಡೆದ ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ. ಮೊತ್ತಕ್ಕೆ ಬಿಕರಿಯಾಗಿದ್ದ ರಿಷಭ್ ಪಂತ್ ಅವರನ್ನು ಹೊರದಬ್ಬುವ ನಿರ್ಧಾರಕ್ಕೆ ಫ್ರಾಂಚೈಸಿ ಬಂದಿದೆ ಎಂದು ಹೇಳಲಾಗುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ಈ ಆವೃತ್ತಿಯ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದ ಬೆನ್ನಲ್ಲೇ ನಾಯಕತ್ವ ಬದಲಾವಣೆಯ ಮಾತು ಕೇಳಿಬಂದಿದೆ. ಈ ಸೀಸನ್‌ನಲ್ಲಿ ಪಂತ್ ಬ್ಯಾಟಿಂಗ್ ಹಾಗೂ ನಾಯಕತ್ವ ಎರಡಲ್ಲಿಯೂ ವೈಫಲ್ಯ ಅನುಭವಿಸಿದ್ದಾರೆ. 11 ಪಂದ್ಯಗಳಲ್ಲಿ ಕೇವಲ 251 ರನ್ ಗಳಿಸಿರುವ ಪಂತ್ ಅವರ ಸ್ಟ್ರೈಕ್ ರೇಟ್ ಕಾಯ್ದುಕೊಳ್ಳುವಲ್ಲಿ ಹಿಂದುಳಿದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್:
ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಎರಡನೇ ವರ್ಷ ಪ್ಲೇ ಆಫ್‌ನಿಂದ ಹೊರಬಿದ್ದಿದೆ. ಆಡಿರುವ 9 ಪಂದ್ಯಗಳಲ್ಲಿ ಕೇವಲ 100 ರನ್ ಗಳಿಸಿರುವ ಅವರು ಒಂದು ಪಂದ್ಯದಲ್ಲಿ 56 ರನ್ ಗಳಿಸಿದರೆ, ಉಳಿದ 8 ಪಂದ್ಯಗಳಲ್ಲಿನ ಮೊತ್ತ 44 ರನ್ ಇದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ವಿಫಲರಾಗಿದ್ದಾರೆ. ಇಬ್ಬರು ಸಮಾನಪಾಲುದಾರರನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಸೀಸನ್‌ನಲ್ಲಿ ಜೆಎಸ್‌ಡಬ್ಲ್ಯೂ ಗ್ರೂಪ್‌ಗೆ ವರ್ಗಾವಣೆಯಾಗಲಿದೆ. ಹೀಗಾಗಿ ಹೊಸ ಮ್ಯಾನೇಜ್‌ಮೆಂಟ್ ತಂಡಕ್ಕೆ ಸಂಪೂರ್ಣ ಹೊಸ ರೂಪ ನೀಡಲು ಮುಂದಾಗಿದೆ. ಈ ಪ್ರಕ್ರಿಯೆಯಲ್ಲಿ ಅಕ್ಷರ್ ಪಟೇಲ್ ನಾಯಕತ್ವಕ್ಕೆ ಕುತ್ತು ಎದುರಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ಮೈದಾನದಲ್ಲಿ ಸಿಕ್ತು ಚಿನ್ನದ ಸರ – ಅಂಪೈರಿಗೆ ನೀಡಿದ ಡಿಡಿಪಿ
ಕೋಲ್ಕತ್ತಾ ನೈಟ್ ರೈಡರ್ಸ್:
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಹಿರಿಯ ಆಟಗಾರ ಹಾಗೂ ನಾಯಕ ಅಜಿಂಕ್ಯ ರಹಾನೆ ಆಟವು ಆಧುನಿಕ ಕ್ರಿಕೆಟ್‌ಗೆ ಸರಿಹೊಂದುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಓಪನರ್ ಬ್ಯಾಟ್ಸ್ಮನ್ ಆಗಿರುವ ಅವರು ತಂಡಕ್ಕೆ ವೇಗದ ಆರಂಭ ನೀಡುವಲ್ಲಿ ವಿಫಲರಾಗಿದ್ದು, ಈ ಸೀಸನ್‌ನಲ್ಲಿ ಕೇವಲ 237 ರನ್ ಗಳಿಸಿದ್ದಾರೆ. ಸದ್ಯ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಕೆಕೆಆರ್‌ಗೆ ಪ್ಲೇಫ್ಟ್‌ಗೆ ಹೋಗುವ ಸಾಧ್ಯತೆಗಳು ಮುಗಿದಿದೆ. ಹೀಗಾಗಿ ಮುಂದಿನ ಆವೃತ್ತಿಗೆ ಯುವ ನಾಯಕನಿಗೆ ಮಣೆ ಹಾಕಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
2027 ರ ಆವೃತ್ತಿಗಾಗಿ ನಡೆಯುವ ಮಿನಿ ಹರಾಜಿನಲ್ಲಿ ಈ ಮೂರು ಫ್ರಾಂಚೈಸಿಗಳು ಹೊಸ ನಾಯಕರನ್ನು ಅಥವಾ ತಂಡದಲ್ಲಿರುವ ಇತರ ಪ್ರತಿಭೆಗಳಿಗೆ ಜವಾಬ್ದಾರಿ ನೀಡಲು ಚಿಂತನೆ ನಡೆಸುತ್ತಿವೆ. ಪಂತ್ ಮತ್ತು ಅಕ್ಷರ್ ಅವರು ಆಟಗಾರರಾಗಿ ತಂಡದಲ್ಲಿ ಮುಂದುವರಿಯುವ ಸಾಧ್ಯತೆ ಇದ್ದರೂ, ನಾಯಕತ್ವದ ಜವಾಬ್ದಾರಿಯಿಂದ ಅವರನ್ನು ಮುಕ್ತಗೊಳಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.ಇದನ್ನೂ ಓದಿ: ಪಂಜಾಬ್‌ಗೆ ಇಂದು ಮುಂಬೈ ಸವಾಲು – ಗೆಲುವಿನ ಹುಡುಕಾಟದಲ್ಲಿ ಶ್ರೇಯಸ್ ಪಡೆ

