ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಆರ್‌ಸಿಬಿಗೆ (RCB) ಮಹತ್ವದ ಗೆಲುವು ತಂದುಕೊಟ್ಟರು. ಈ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್‌ಗೆ ಬಹುತೇಕ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ ಪಂದ್ಯದ ನಂತರ ಕೊಹ್ಲಿ (Virat Kohli) ನೀಡಿದ ಭಾವನಾತ್ಮಕ ಹೇಳಿಕೆ ಇದೀಗ ಅವರ ನಿವೃತ್ತಿ ಕುರಿತ ಚರ್ಚೆಗೆ ಕಾರಣವಾಗಿದೆ.
ಐಪಿಎಲ್ 2026ರ 56ನೇ ಪಂದ್ಯದಲ್ಲಿ ಆರ್‌ಸಿಬಿ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ ಅಜೇಯ 105 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇದು ಐಪಿಎಲ್‌ನಲ್ಲಿ (IPL 2026) ಅವರ 9ನೇ ಶತಕವಾಗಿದೆ. ಇದನ್ನೂ ಓದಿ: ಮೈದಾನದಲ್ಲಿ ಸಿಕ್ತು ಚಿನ್ನದ ಸರ – ಅಂಪೈರಿಗೆ ನೀಡಿದ ಡಿಡಿಪಿ

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ನನಗೆ ಬ್ಯಾಟಿಂಗ್ ತುಂಬಾ ಇಷ್ಟ. ಉನ್ನತ ಮಟ್ಟದಲ್ಲಿ ಸ್ಪರ್ಧಿಸುವುದು ಗೌರವದ ವಿಷಯ. ಆದರೆ ಒಂದು ದಿನ ಇದು ಎಲ್ಲವೂ ಮುಗಿಯಲಿದೆ ಎಂಬುದು ಗೊತ್ತಿದೆ. ಅದಕ್ಕಾಗಿಯೇ ಪ್ರತಿಯೊಂದು ಪಂದ್ಯದಲ್ಲೂ ನನ್ನ ಶ್ರಮ, ಮನಸ್ಸು ಮತ್ತು ಆತ್ಮ ಎಲ್ಲವನ್ನೂ ಪಣಕ್ಕಿಟ್ಟು ಆಡುತ್ತೇನೆ ಎಂದು ಹೇಳಿದರು.
ಕೊಹ್ಲಿಯ ಈ ಮಾತುಗಳು ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಅವರು ಭವಿಷ್ಯದಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳುವ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಮೂಡಿಸಿದೆ. ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಕೊಹ್ಲಿ, ಏಕದಿನ ಮತ್ತು ಐಪಿಎಲ್ ಟೂರ್ನಿಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಇದನ್ನೂ ಓದಿ: 1 ಪಂದ್ಯ, ಹಲವು ದಾಖಲೆಗಳು- ಕೊಹ್ಲಿ ವಿಶ್ವದಾಖಲೆಯ ಆಟ, ಮೊದಲ ಸ್ಥಾನಕ್ಕೆ ಜಿಗಿದ ಆರ್‌ಸಿಬಿ

ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಆಂಗ್ಕ್ರಿಶ್ ರಘುವಂಶಿ ಅಜೇಯ 71 ರನ್, ರಿಂಕು ಸಿಂಗ್ 49 ರನ್ ಗಳಿಸಿ ತಂಡಕ್ಕೆ ಬಲ ತುಂಬಿದರು.
193 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿಯ ಶತಕ ದೊಡ್ಡ ನೆರವಾಯಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಅಂಕಗಳೊಂದಿಗೆ ಐಪಿಎಲ್ 2026 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಪ್ಲೇ ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇದನ್ನೂ ಓದಿ: 278 ಐಪಿಎಲ್ ಪಂದ್ಯ – ಏಕಕಾಲದಲ್ಲಿ ಧೋನಿ ದಾಖಲೆ ಸರಿಗಟ್ಟಿದ ಕೊಹ್ಲಿ, ರೋಹಿತ್ ಶರ್ಮಾ

