– ಅಪಘಾತದ ತೀವ್ರತೆಗೆ ಕಾರು ಪೀಸ್ ಪೀಸ್
– ಬರ್ತಡೇ ಪಾರ್ಟಿ ಮುಗಿಸಿ ಬರುತ್ತಿದ್ದವರು ಮಸಣಕ್ಕೆ
ಮುಂಬೈ: ಬದ್ಲಾಪುರ ಬಳಿಯ ಮುಂಬೈ-ವಡೋದರಾ ಹೆದ್ದಾರಿಯಲ್ಲಿ ಬಿಎಂಡಬ್ಲ್ಯು Z4 ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬದ್ಲಾಪುರ ನಿವಾಸಿಗಳಾದ ಯೋಗೇಶ್ ದಿಘೆ ಮತ್ತು ರಿಕೇಬಾ ಜಕಾಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಆನಂದ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಥಾಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರೆಲ್ಲ ಬರ್ತಡೇ ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಲಂಡನ್ ಸಮೀಪ ಎರಡು ರೈಲುಗಳ ನಡುವೆ ಡಿಕ್ಕಿ – ಚಾಲಕ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ
ಅತಿ ಹೆಚ್ಚು ಕಾರ್ಯಕ್ಷಮತೆಯ ಕಾರು ಬಿಎಂಡಬ್ಲ್ಯು Z4 ಅಪಘಾತದ ತೀವ್ರತೆಗೆ ಸಂಪೂರ್ಣವಾಗಿ ಛಿದ್ರಗೊಂಡಿದೆ. ಅದರ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ವೇಳೆ ಕಾರಿನ ವೇಗ ಗಂಟೆಗೆ ಸುಮಾರು 250 ಕಿ.ಮೀ. ಆಗಿತ್ತು ಎಂದು ತಿಳಿದುಬಂದಿದೆ.
ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಕಾರು ಟಿಟ್ವಾಲಾದಿಂದ ಬದ್ಲಾಪುರದ ಕಡೆಗೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ದೇಹದ ಭಾಗಗಳು ಹಲವಾರು ಮೀಟರ್ ದೂರ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದ್ದಾರೆ.
ಕಾರಲ್ಲಿದ್ದವರು ಮದ್ಯಪಾನ ಮಾಡಿದ್ದರೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಅನುಮಾನಾಸ್ಪದ ಸಾವು
