ಬೆಂಗಳೂರು: ಕರ್ನಾಟಕ ಕಾಂಗ್ರೆಸ್ (Karnataka Congress) ವಲಯದಲ್ಲಿ ಈಗ ಸಂಪುಟ ಪುನಾರಚನೆಯದ್ದೇ ತಲ್ಲಣ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸಂಪುಟದಲ್ಲಿದ್ದ ಬರೋಬ್ಬರಿ 17 ರಿಂದ 20 ಸಚಿವರು ಈ ಬಾರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಸಂಪುಟದಲ್ಲಿ ಸ್ಥಾನ ಕಳೆದುಕೊಳ್ಳುವ ದಟ್ಟ ಮುನ್ಸೂಚನೆಗಳು ಲಭ್ಯವಾಗಿವೆ.
ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿದ್ದ ಕೇವಲ 10 ರಿಂದ 12 ಹಿರಿಯ ಸಚಿವರಿಗಷ್ಟೇ ಈ ಬಾರಿ ಅದೃಷ್ಟ ಒಲಿಯಲಿದ್ದು, ಬಾಕಿ ಉಳಿದವರಿಗೆ ಹೈಕಮಾಂಡ್ (Congress High Command) ಕೊಕ್ ನೀಡಲು ಗಂಭೀರ ಚಿಂತನೆ ನಡೆಸಿದೆ. ಇದರಲ್ಲಿ ಪ್ರಮುಖವಾಗಿ ಬೆಂಗಳೂರು ಭಾಗದ ಮೂವರು ಪ್ರಭಾವಿ ಸಚಿವರಿಗೆ ಮಂತ್ರಿಗಿರಿ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.
ತಮ್ಮ ಆಪ್ತ ವಲಯದ ಹಲವು ನಾಯಕರಿಗೆ ಸಚಿವ ಸ್ಥಾನ ಕೈತಪ್ಪುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ಮೂಲಗಳ ಪ್ರಕಾರ ತಮ್ಮ ಬೆಂಬಲಿಗರಲ್ಲಿ ಕನಿಷ್ಠ 6 ರಿಂದ 7 ಜನರಿಗಾದರೂ ಹೊಸ ಸಂಪುಟದಲ್ಲಿ ಕಡ್ಡಾಯವಾಗಿ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಮುಂದೆ ಬಿಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಈ ಬಾರಿಯ ನೂತನ ಕ್ಯಾಬಿನೆಟ್ ಕೇವಲ ಪ್ರಭಾವದ ಆಧಾರದ ಮೇಲಲ್ಲ, ಬದಲಿಗೆ ಮೂರು ಪ್ರಮುಖ ಫಾರ್ಮುಲಾಗಳ ಅಡಿಯಲ್ಲಿ ರಚನೆಯಾಗಲಿದೆ. ಸಿದ್ದರಾಮಯ್ಯ ಬೆಂಬಲಿಗರು (ಮುಖ್ಯಮಂತ್ರಿಗಳ ಆಪ್ತ ವಲಯ), ಡಿ.ಕೆ. ಶಿವಕುಮಾರ್ ಆಪ್ತರು (ಕೆಪಿಸಿಸಿ ಅಧ್ಯಕ್ಷರ ನಿಷ್ಠಾವಂತರು), ಹೈಕಮಾಂಡ್ ಒಲವುಳ್ಳ ನಾಯಕರು (ದೆಹಲಿ ನಾಯಕರ ನೇರ ಆಯ್ಕೆ) ಅಡಿ ಆಯ್ಕೆಯಾಗಲಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿಗೆ KPCC ಅಧ್ಯಕ್ಷ ಸ್ಥಾನ?
ವಿಶೇಷವೆಂದರೆ ಈ ಮೂರು ಸೂತ್ರಗಳ ಪೈಕಿ ಹೈಕಮಾಂಡ್ ಕಡೆಯಿಂದಲೇ ನೇರವಾಗಿ ಸುಮಾರು 20 ನಾಯಕರಿಗೆ ಮಂತ್ರಿಗಿರಿ ಭಾಗ್ಯ ಸಿಗುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಯುವ ನಾಯಕತ್ವವನ್ನು ಮುಂಚೂಣಿಗೆ ತರುವ ದೃಷ್ಟಿಯಿಂದ ಹೈಕಮಾಂಡ್ ಈ ಬಾರಿ ‘ಹೊಸ ಮುಖ’ಗಳಿಗೆ ಹೆಚ್ಚಿನ ಮಣೆ ಹಾಕಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಯಾರಿಗೆಲ್ಲ ಸಿಗಲಿದೆ ‘ಸೇಫ್’ ಕಾರ್ಡ್?
ಹಲವು ಸಚಿವರ ತಲೆದಂಡವಾಗುವ ಭೀತಿಯ ನಡುವೆಯೂ, ತಮ್ಮ ಉತ್ತಮ ಕಾರ್ಯಕ್ಷಮತೆ ಹಾಗೂ ಹಿರಿಯ ಸೀನಿಯಾರಿಟಿ ಆಧಾರದ ಮೇಲೆ ಕೆಲವರು ಈ ಬಾರಿಯೂ ಮಂತ್ರಿ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ/ ಶರಣ ಪ್ರಕಾಶ್ ಪಾಟೀಲ್, ಡಾ.ಜಿ ಪರಮೇಶ್ವರ್, ಶಿವರಾಜ ತಂಗಡಗಿ, ಕೆ.ಎಚ್.ಮುನಿಯಪ್ಪ, ಮಂಕಾಳ್ ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಬಾರಿಯೂ ಮಂತ್ರಿ ಸಿಗುವ ಸಾಧ್ಯತೆಯಿದೆ.
