ನಟ ಡಾರ್ಲಿಂಗ್ ಕೃಷ್ಣ(Darling Krishna) ಅಭಿನಯದ ಹೊಸ ಕನ್ನಡ ಚಿತ್ರಕ್ಕೆ (Sandalwood) ಮುಹೂರ್ತ ನೆರವೇರಿದೆ. ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಪಿ.ಸಿ. ಶೇಖರ್ ನಿರ್ದೇಶಿಸುತ್ತಿದ್ದು, ಪ್ರಕಾಶ್ ಬೂದೂರು ನಿರ್ಮಿಸುತ್ತಿದ್ದಾರೆ. ಶೇಷಾದ್ರಿಪುರದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸರಳ ಪೂಜಾ ಸಮಾರಂಭದ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಿರ್ಮಾಪಕ ಪ್ರಕಾಶ್ ಬೂದೂರು, ನಿರ್ದೇಶಕ ಪಿ.ಸಿ. ಶೇಖರ್ ಹಾಗೂ ನಾಯಕ ಡಾರ್ಲಿಂಗ್ ಕೃಷ್ಣ ಉಪಸ್ಥಿತರಿದ್ದರು. ಚಿತ್ರದ ಶೀರ್ಷಿಕೆ ಸೇರಿದಂತೆ ಉಳಿದ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಪ್ರಕಟಿಸುವುದಾಗಿ ತಿಳಿಸಿದೆ.
ನಿರ್ಮಾಪಕ ಪ್ರಕಾಶ್ ಬೂದೂರು ಮಾತನಾಡಿ, ಮಹಾನ್ ಚಿತ್ರದ ಬಳಿಕ ನಿರ್ದೇಶಕ ಪಿ.ಸಿ. ಶೇಖರ್ ಅವರೊಂದಿಗೆ ಇದು ನನ್ನ ಎರಡನೇ ಸಿನಿಮಾ. ಅವರ ಕಥೆ ಹೇಳುವ ಶೈಲಿ ಮತ್ತು ಉತ್ತಮ ಮನರಂಜನಾ ಚಿತ್ರಗಳನ್ನು ನೀಡುವ ಸಾಮರ್ಥ್ಯದ ಮೇಲೆ ನನಗೆ ಅಪಾರ ನಂಬಿಕೆ ಇದೆ. ಕಥೆ ಕೇಳಿದ ಕ್ಷಣದಲ್ಲೇ ಈ ಚಿತ್ರವನ್ನು ನಿರ್ಮಿಸಬೇಕೆಂದು ನಿರ್ಧರಿಸಿದೆ. ಈ ಪಾತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಸೂಕ್ತ ಎನ್ನಿಸಿತು. ಅವರ ಸಹಜ ಅಭಿನಯ ಮತ್ತು ಕಾಮಿಡಿ ಟೈಮಿಂಗ್ ಈ ಪಾತ್ರಕ್ಕೆ ಹೊಸ ಆಯಾಮ ನೀಡಲಿದೆ ಎಂದು ಹೇಳಿದರು.
ನಾಯಕ ಡಾರ್ಲಿಂಗ್ ಕೃಷ್ಣ ಮಾತನಾಡಿ, ಲವ್ ಬರ್ಡ್ಸ್ ಚಿತ್ರದ ನಂತರ ಪಿ.ಸಿ. ಶೇಖರ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದು ಸಂತೋಷವಾಗಿದೆ. ಇದು ನನಗೂ ನಿರ್ದೇಶಕರಿಗೂ ಹೊಸ ಜಾನರ್‌ನ ಸಿನಿಮಾ. ನಾನು ಈವರೆಗೆ ಮಾಡದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರೇಕ್ಷಕರಿಗೆ ಎರಡೂವರೆ ಗಂಟೆಗಳ ಶುದ್ಧ ಮನರಂಜನೆ ನೀಡುವ ಚಿತ್ರ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನೂ ಓದಿ: ಜು.5ಕ್ಕೆ ಆಮಿರ್ ಖಾನ್-ಗೌರಿ ಮದುವೆ; ಇಬ್ಬರ ಮಕ್ಕಳಿಂದಲೇ ವೆಡ್ಡಿಂಗ್ ಮೆನು ಪ್ಲ್ಯಾನ್
ನಿರ್ದೇಶಕ ಪಿ.ಸಿ. ಶೇಖರ್ ಮಾತನಾಡಿ, ಲವ್ ಬರ್ಡ್ಸ್ ಬಳಿಕ ಡಾರ್ಲಿಂಗ್ ಕೃಷ್ಣ ಅವರೊಂದಿಗೆ ಮತ್ತೆ ಸಿನಿಮಾ ಮಾಡುತ್ತಿರುವುದು ಖುಷಿಯ ವಿಚಾರ. ಇದು ಕಾಮಿಡಿ ಎಂಟರ್‌ಟೈನರ್ ಜೊತೆಗೆ ಥ್ರಿಲ್ಲರ್ ಕಥಾಹಂದರ ಹೊಂದಿರುವ ಹೊಸ ಜಾನರ್‌ನ ಸಿನಿಮಾ. ಈ ರೀತಿಯ ಕಥೆಯನ್ನು ನಾನು ಮತ್ತು ಕೃಷ್ಣ ಮೊದಲ ಬಾರಿಗೆ ಮಾಡುತ್ತಿದ್ದೇವೆ. ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆಯುತ್ತಿದ್ದು, ಚಿತ್ರದ ಉಳಿದ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕಿರುತೆರೆಗೆ ಎಂಟ್ರಿ ಕೊಟ್ಟ ಮಾಜಿ ಸಚಿವ ಬಿ.ಸಿ ಪಾಟೀಲ್

