– ಸರ್ಕಾರದಿಂದಲೇ ಓಟಿಟಿ ವೇದಿಕೆ ಪ್ರಾರಂಭಿಸಲು ಮನವಿ
ಕನ್ನಡ ಚಿತ್ರರಂಗದ ಉಳಿವಿಗೆ ರಾಜ್ಯ ಸರ್ಕಾರ ನೆರವು ನೀಡಲಿದೆ. ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಆಲೋಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಭರವಸೆ ನೀಡಿದ್ದಾರೆ. ಹಾಗೆಯೇ, ಚಿತ್ರನಗರಿ ಘೋಷಣೆ ಮಾಡಿರುವ ಅನುದಾನದ ಬಿಡುಗಡೆಗೆ ಕ್ರಮಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರ ನೇತೃತ್ವದ ಚಲನಚಿತ್ರ ರಂಗದ ಗಣ್ಯರ ನಿಯೋಗವು ನನ್ನನ್ನು ಭೇಟಿ ಮಾಡಿ, ಕನ್ನಡ ಚಿತ್ರರಂಗದ ವಿವಿಧ ವಿಷಯಗಳ ಕುರಿತು ಚರ್ಚಿಸಿತು.
ಈ ಸಂದರ್ಭದಲ್ಲಿ ಮಂಡಳಿಯ ಮಾಜಿ ಅಧ್ಯಕ್ಷರಾದ ಗಂಗರಾಜು, ಸಾ. ರಾ. ಗೋವಿಂದ್, ಗೌರವ ಕಾರ್ಯದರ್ಶಿ ರಮೇಶ್ ಬಾಬು, ಹಿರಿಯ… pic.twitter.com/pLuwJmyX8B
— DK Shivakumar (@DKShivakumar) July 1, 2026
ಕನ್ನಡ ಚಿತ್ರರಂಗ ಉಳಿವಿಗಾಗಿ ʻಸಮಗ್ರ ಹೊಸ ಚಲನಚಿತ್ರ ನೀತಿʼ ಸೇರಿದಂತೆ ʻಚಲನಚಿತ್ರ ಪ್ರಾಚ್ಯಾಗಾರ (ಆರ್ಕೈವ್) ಸಹಾಯಧನ ಹೆಚ್ಚಳʼ, ʻಸರ್ಕಾರದ ಓಟಿಟಿ ವೇದಿಕೆ, ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿʼ, ʻಏಕಪರದೆ ಚಿತ್ರಮಂದಿರಗಳ ನವೀಕರಣʼ, ʻಆಧುನೀಕರಣಕ್ಕೆ ವಿಶೇಷ ನೆರವುʼ, ʻಚಿತ್ರರಂಗದವರಿಗೆ ಫ್ಲಾಟ್ ನಿರ್ಮಾಣಕ್ಕೆ ಬಿಡಿಎಯಿಂದ 5 ಎಕರೆ ಭೂಮಿʼ ನೀಡುವಂತೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲಾ (Jayamala) ಅವರ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.
ಚಲನಚಿತ್ರ ವಾಣಿಜ್ಯ ಮಂಡಳಿಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನ ಆಲೋಚನೆ ಮಾಡುತ್ತೇವೆ. ಹೊಸ ಚಲನಚಿತ್ರ ನೀತಿ ತರಲು ಚರ್ಚಿಸುತ್ತೇವೆ. ಸಹಾಯಧನ ಹೆಚ್ಚಳ, ಪ್ರಾಚ್ಯಾಗಾರ ಪ್ರಾರಂಭಿಸಲು ಹಾಗೂ ಈ ವರ್ಷದ ಚಲನಚಿತ್ರ ಪ್ರಶಸ್ತಿ ಪ್ರಕ್ರಿಯೆ ಪ್ರಾರಂಭಿಸಿಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಚಿತ್ರನಗರಿ ನಿರ್ಮಾಣಕ್ಕೆ ಘೋಷಣೆ ಮಾಡಿರುವ ಅನುದಾನದ ಬಿಡುಗಡೆಯ ಬಗ್ಗೆ ಹಣಕಾಸು ಇಲಾಖೆಯ ಎಸಿಎಸ್ ಅವರನ್ನು ಉಲ್ಲೇಖಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಪತ್ರದಲ್ಲಿ ಏನಿದೆ?
2011 ರಲ್ಲಿ ರೂಪಿಸಿದ್ದ ಚಲನಚಿತ್ರ ನೀತಿಯನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಕಳೆದ 15 ವರ್ಷದಲ್ಲಿ ತಂತ್ರಜ್ಞಾನ ವಿಚಾರವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಆದ ಕಾರಣ ಹೊಸ ನೀತಿಯಲ್ಲಿ ಓಟಿಟಿ ಮತ್ತು ಡಿಜಿಟಲ್ ವಿತರಣಾ ವ್ಯವಸ್ಥೆ, ಎಐ ಮತ್ತು ಹೊಸ ತಂತ್ರಜ್ಞಾನ ಬಳಕೆ, ಕನ್ನಡ ಚಿತ್ರರಂಗ ರಕ್ಷಣೆ, ಸಣ್ಣ ಚಿತ್ರಗಳಿಗೆ ಪ್ರೋತ್ಸಾಹ, ಚಿತ್ರಮಂದಿರಗಳ ಉಳಿವು, ಕಲಾವಿದರು ಮತ್ತು ಕಾರ್ಮಿಕರ ಕಲ್ಯಾಣ, ಚಲನಚಿತ್ರ ಶಿಕ್ಷಣ ಮತ್ತು ಆಕ್ರೈವ್, ಜಾಗತಿಕ ಮಾರುಕಟ್ಟೆ ವಿಸ್ತರಣೆ ಬಗ್ಗೆ ಬದಲಾವಣೆ ತರಬೇಕು.
ಪ್ರತಿವರ್ಷ 250 ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅನೇಕ ಓಟಿಟಿ ವೇದಿಕೆಗಳು ಬಹುರಾಷ್ಟ್ರೀಯ ಕಂಪನಿಗಳಾಗಿರುವ ಕಾರಣಕ್ಕೆ ಸಣ್ಣ ಮೊತ್ತದ ಸಿನಿಮಾಗಳು ಎಂದು ಖರೀದಿ ಮಾಡುತ್ತಿಲ್ಲ. ಆದ ಕಾರಣಕ್ಕೆ ಸರ್ಕಾರದಿಂದಲೇ ಓಟಿಟಿ ವೇದಿಕೆ ಪ್ರಾರಂಭಿಸಿ ಕನ್ನಡ ಚಿತ್ರರಂಗದ ಉಳಿವಿಗೆ ಸಹಕಾರಿಯಾಗಬಹುದು.
ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ ಮೂಲಕ ಚಿತ್ರಮಂದಿರಗಳ ಲೈಸೆನ್ಸ್ ನವೀಕರಣಕ್ಕೆ ಏಕಗವಾಕ್ಷಿ ಯೋಜನೆ ತರಬೇಕು. ಅನೇಕ ನಿಯಮಗಳು ಸೆಲ್ಯುಲಾಯ್ಡ್ ಕಾಲಕ್ಕೆ ಹೊಂದಿಕೆಯಾಗುವಂತಿದ್ದು ಡಿಜಿಟಲ್ ಯುಗಕ್ಕೆ ಅನ್ವಯವಾಗುವಂತೆ ಷರತ್ತುಗಳನ್ನ ರೂಪಿಸಬೇಕು. ಈ ಮೊದಲು 1,200 ಚಿತ್ರಮಂದಿರಗಳು ರಾಜ್ಯದಲ್ಲಿದ್ದವು. ಈಗ ಅವುಗಳ ಸಂಖ್ಯೆ 400 ಕ್ಕೆ ಕುಸಿದಿದೆ. ಆದ ಕಾರಣ ಹೊಸ ಬಡಾವಣೆ, ಗ್ರಾಮೀಣ ಪ್ರದೇಶದಲ್ಲಿ ಹೊಸ ಚಿತ್ರಮಂದಿರಗಳನ್ನ ನಿರ್ಮಿಸುವುದಕ್ಕೆ ವಿಶೇಷ ಪ್ರೋತ್ಸಾಹ, ತೆರಿಗೆ, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು.

ಹಳೆಯ ಏಕ ಪರದೆ ಚಿತ್ರಮಂದಿರಗಳ ನವೀಕರಣ, ಆಧುನೀಕರಣಕ್ಕೆ ನೆರವಿನ ಜೊತೆಗೆ ಶೇ.4 ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯುವ ವ್ಯವಸ್ಥೆ ಮಾಡಬೇಕು.
2025-26 ರಲ್ಲಿ ಸರ್ಕಾರ ಚಲನಚಿತ್ರಗಳ ಆಕ್ರೈವಿಂಗ್ ಕಾರ್ಯಕ್ಕೆ 3 ಕೋಟಿ ಹಣ ಘೋಷಣೆ ಮಾಡಿತ್ತು. ಇದರ ಬಗ್ಗೆ ಯಾವುದೇ ಕೆಲಸಗಳು ಪ್ರಾರಂಭವಾಗಿಲ್ಲ. 1934 ರಿಂದ 2010 ರ ವರೆಗೆ ಸೆಲ್ಯುಲಾಲ್ಡ್ ನಲ್ಲಿ ಚಿತ್ರೀಕರಣಗೊಂಡ 3 ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ಇದರಲ್ಲಿ ಅನೇಕ ಅಪರೂಪದ ಚಿತ್ರಗಳು ಹಾಳಾಗುತ್ತಿವೆ. ಅದಕ್ಕೆ ಈ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಬೇಕು.
2022 ರಿಂದ ಬಾಕಿ ಉಳಿದಿರುವ ಎಲ್ಲಾ ರಾಜ್ಯ ಪ್ರಶಸ್ತಿ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. 2026 ರಿಂದ ಪ್ರತಿ ವರ್ಷ ನಿಯಮಿತವಾಗಿ ಪ್ರಶಸ್ತಿಗಳನ್ನ ನೀಡಬೇಕು. ಏಪ್ರಿಲ್ 24 ಡಾ. ರಾಜಕುಮಾರ್ ಅವರ ಜನ್ಮದಿನದಂದು ಪ್ರಶಸ್ತಿ ವಿತರಣೆ ಮಾಡಬೇಕು.
ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಚಿತ್ರ ನಗರಿಗೆ ಶಂಕುಸ್ಥಾಪನೆ ನೆರವೇರಿಸಬೇಕು. ಜೊತೆಗೆ ಘೋಷಣೆ ಮಾಡಿರುವ 500 ಕೋಟಿ ಅನುದಾನ ಬಿಡುಗಡೆ ಮಾಡಿಕೊಡಬೇಕು. ಚಲನಚಿತ್ರಗಳಿಗೆ ನೀಡುವ 10 ಲಕ್ಷ ಸಹಾಯಧನದ ಮೊತ್ತವನ್ನು ಹೆಚ್ಚಿಸಬೇಕು.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯವರು ಕಡಿಮೆ ದರದಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕ ಸದಸ್ಯರುಗಳಿಗೆ ವಸತಿ ಫ್ಲಾಟ್ ಗಳನ್ನು ನಿರ್ಮಿಸಿಕೊಡುತ್ತಿದ್ದಾರೆ. ಅದಕ್ಕಾಗಿ ಬಿಡಿಎ ವತಿಯಿಂದ 5 ಎಕರೆ ಭೂಮಿ ಮಂಜೂರು ಮಾಡಿ ಕೊಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
