– ʻUkhad Le BLR Policeʼ ಎಂದು ಲೇವಡಿ ಮಾಡಿದ್ದ ಯುವತಿ
ಬೆಂಗಳೂರು: 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ (Umar Khalid) ಮತ್ತು ಶಾರ್ಜೀಲ್ ಇಮಾಮ್ ಪರ ಪೋಸ್ಟರ್ ಪ್ರದರ್ಶಿಸಿದ್ದ ಯುವತಿ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಉಪ್ಪಾರಪೇಟೆ ಠಾಣೆಗೆ (Upparpet Police Station) ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ʻಗಲಭೆ ಉದ್ದೇಶದಿಂದ ಪ್ರಚೋದನೆʼ ನೀಡುವ ಆರೋಪದ ಮೇಲೆ ಕೇಸ್ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ʻನೀಟ್ʼ ಪ್ರತಿಭಟನೆ ವೇಳೆ ವಿವಾದ – 2020ರ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಪರ ಪೋಸ್ಟರ್

ಏನಿದು ವಿವಾದ?
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ (ಜು.24) ಯುವತಿಯೊಬ್ಬಳು ಹಿಡಿದಿದ್ದ ಪೋಸ್ಟರ್ ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನೆಗೆ ಬಂದಿದ್ದ ಆಕೆ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಪರವಾಗಿ ಘೋಷಣೆಗಳಿರುವ ಪೋಸ್ಟರ್‌ಗಳನ್ನ ಪ್ರದರ್ಶಿಸಿದ್ದಳು. ಅಷ್ಟೇ ಅಲ್ಲದೇ ʻUkhad Le BLR Policeʼ ಎಂಬ ಬರಹವನ್ನು ಪೋಸ್ಟರ್‌ನಲ್ಲಿ ಪ್ರದರ್ಶಿಸಿ, ಬೆಂಗಳೂರು ಪೊಲೀಸರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಳು.
ಈ ಪೋಸ್ಟರ್‌ಗಳು ಅಲ್ಲಿದ್ದ ಪೊಲೀಸರ ಗಮನ ಸೆಳೆದು, ಪರಿಸ್ಥಿತಿ ಉದ್ವಿಗ್ನವಾಗದಂತೆ ಪೊಲೀಸರು ತಕ್ಷಣವೇ ಪೋಸ್ಟರ್‌ಗಳನ್ನ ವಶಪಡಿಸಿಕೊಂಡಿದ್ದರು. ಇದೇ ವೇಳೆ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಆಕೆಗೆ ಕ್ಲಾಸ್ ತೆಗದುಕೊಂಡು, ಪ್ರತಿಭಟನಾ ಸ್ಥಳದಿಂದ ಕಳುಹಿಸಿದ್ದರು. ಇದೀಗ ಈ ಸಂಬಂಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದನ್ನೂ ಓದಿ: ನೀಟ್ ಪ್ರತಿಭಟನೆ ವೇಳೆ ಉಮರ್ ಖಾಲಿದ್ ಪರ ಪೋಸ್ಟರ್ – ಕೇಸ್ ದಾಖಲಿಸಲು ಕಾನೂನು ತಜ್ಞರ ಮೊರೆಹೋದ ಪೊಲೀಸ್
