– ಅಮರ ಯೋಧರಿಗೆ ನಮನ ಸಲ್ಲಿಸುತ್ತಲೇ ರಕ್ಷಣಾ ಪಡೆಗಳ ಸಾಮರ್ಥ್ಯ ಕೊಂಡಾಡಿದ ಪ್ರಧಾನಿ
ನವದೆಹಲಿ: ಭಾರತ ಈಗ ಅತ್ಯಂತ ವಿಶ್ವಾಸಾರ್ಹ ಜಾಗತಿಕ ರಕ್ಷಣಾ ಪಾಲುದಾರನಾಗಿ (Global Defence Partner) ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ವಿಶ್ವಾಸ ವ್ಯಕ್ತಪಡಿಸಿದರು.
ಇಂದು (ಭಾನುವಾರ) ‘ಮನ್ ಕಿ ಬಾತ್’ನ (Mann Ki Baat) 136 ನೇ ಸಂಚಿಕೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾರ್ಗಿಲ್ ವಿಜಯ್ ದಿವಸ್‌ನ ಮಹತ್ವವನ್ನು ಸಾರಿದರು. ಇದೇ ವೇಳೆ ಭಾರತೀಯ ರಕ್ಷಣಾ ಪಡೆಗಳ (Indian Defense Force) ಸಾಮರ್ಥ್ಯವನ್ನು ಕೊಂಡಾಡಿದರು.

ಕಾಗಿರ್ಲ್ ವಿಜಯ ದಿವಸ ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಇಂದು ‘ಕಾರ್ಗಿಲ್ ವಿಜಯ ದಿವಸ’ (Kargil Vijay Diwas). ಈ ದಿನ ನಮ್ಮಲ್ಲಿ ಹೆಮ್ಮೆ ತುಂಬುತ್ತದೆ. ಇದು ನಮ್ಮ ವೀರ ಸೈನಿಕರ ಅಸಾಧಾರಣ ಧೈರ್ಯ ನೆನಪಿಸುತ್ತದೆ. ಕಾರ್ಗಿಲ್ಲಿನ ಎತ್ತರದ ಶಿಖರಗಳು, ಪ್ರತಿಕೂಲ ಹವಾಮಾನ, ಶತ್ರುಗಳ ತೀವ್ರ ಸವಾಲುಗಳು ಮತ್ತು ಎಲ್ಲ ರೀತಿಯ ಪರಿಸ್ಥಿತಿಗಳು, ಇವೆಲ್ಲವೂ ನಮ್ಮ ಯೋಧರ ಮುಂದಿದ್ದವು. ಆದರೆ, ಅವರ ಅಚಲ ಧೈರ್ಯ, ಅಸಾಧಾರಣ ಶೌರ್ಯ ಮತ್ತು ದೇಶಭಕ್ತಿಯ ಸಂಕಲ್ಪವು ಪ್ರತಿಯೊಂದು ಸವಾಲಿಗಿಂತಲೂ ಎತ್ತರವಾಗಿ ನಿಂತಿತು. ಮಾತೃಭೂಮಿಯ ಭದ್ರತೆ, ಸ್ವಾಭಿಮಾನ ಮತ್ತು ಸಾರ್ವಭೌಮತ್ವ ಕಾಪಾಡುವ ಉದ್ದೇಶದಿಂದ ಅವರು ತಮ್ಮ ಸರ್ವಸ್ವವನ್ನೂ ಭಾರತ ಮಾತೆಗೆ ಸಮರ್ಪಿಸಿದರು. ಇಂದು ‘ಕಾರ್ಗಿಲ್ ವಿಜಯ ದಿವಸ’ ದಂದು ನಾನು ಎಲ್ಲ ವೀರ ಸೈನಿಕರಿಗೆ ಮತ್ತು ಹುತಾತ್ಮರಿಗೆ ಶ್ರದ್ಧೆಯಿಂದ ನಮಿಸುತ್ತೇನೆ ಎಂದು ಭಾವುಕರಾದರು.
ʻOne Ride, One Nation, One Saluteʼ
ಮುಂದುವರಿದು…. ಇಂದು ಭಾರತ ತನ್ನ ವೀರರನ್ನ ಸ್ಮರಿಸಿಕೊಳ್ಳುವುದು ಮಾತ್ರವಲ್ಲದೆ, ಹೊಸ ಪೀಳಿಗೆಗೆ ಅವರ ಗಾಥೆಯನ್ನು ತಿಳಿಸುತ್ತಿದೆ. ಇದೇ ಭಾವನೆಯೊಂದಿಗೆ, ಈ ವರ್ಷ ಒಂದು ವಿಶೇಷ ‘ಶೌರ್ಯ ವಿಜಯ ಯಾತ್ರೆ’ ಯನ್ನ ಆಯೋಜಿಸಲಾಗಿದೆ. ಜುಲೈ 14 ರಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ಪ್ರಾರಂಭವಾಗಿರುವ ʻಮೋಟಾರ್ ಸೈಕಲ್ ಯಾತ್ರೆʼ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕ ತಲುಪಲಿದೆ. ʻOne Ride, One Nation, One Saluteʼ ಎಂಬುದೇ ಇದರ ಸಂದೇಶವಾಗಿದೆ. ರಾಷ್ಟ್ರಕ್ಕಾಗಿ ಮಾಡಿದ ತ್ಯಾಗವನ್ನ ಎಂದಿಗೂ ಮರೆಯಲಾಗದು ಎಂಬುದನ್ನು ಈ ಯಾತ್ರೆ ನಮಗೆ ನೆನಪಿಸುತ್ತದೆ ಎಂದು ತಿಳಿಸಿದರು.

ಸಾಹಸದ ಜೊತೆಗೆ ತಾಂತ್ರಿಕ ಸಾಮರ್ಥ್ಯದ ಬಲ ಹೆಚ್ಚಳ
ಭಾರತವು ಇಂದು ತನ್ನ ಸೈನಿಕರ ಸಾಹಸದ ಜೊತೆ ಜೊತೆಗೆ, ತನ್ನ ತಾಂತ್ರಿಕ ಸಾಮರ್ಥ್ಯಗಳನ್ನ ನಿರಂತರವಾಗಿ ಬಲಪಡಿಸುತ್ತಿದೆ. ಕೆಲ ದಿನಗಳ ಹಿಂದೆ, ʻಐಎನ್‌ಸ್ ಮಹೇಂದ್ರಗಿರಿʼಯನ್ನು ಭಾರತೀಯ ನೌಕಾಪಡೆಗೆ ಸೇರಿಸಲಾಯಿತು. ಈ ಆಧುನಿಕ ಯುದ್ಧನೌಕೆಯನ್ನ ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿ ಭಾರತದಲ್ಲಿಯೇ ನಿರ್ಮಿಸಲಾಗಿದೆ. ಶೇ.75 ಕ್ಕೂ ಹೆಚ್ಚು ಸ್ಥಳೀಯ ವಸ್ತುಗಳನ್ನ ಇದರಲ್ಲಿ ಬಳಸಲಾಗಿದೆ. ಇದು ʻಆತ್ಮ ನಿರ್ಭರ ಭಾರತ – ಸ್ವಾವಲಂಬಿ ಭಾರತʼದ ವೃದ್ಧಿಸುತ್ತಿರುವ ಶಕ್ತಿಯ ಸಂಕೇತವಾಗಿದೆ. ಈ ತಿಂಗಳು, ಡಿಆರ್‌ಡಿಒ ಪಿನಾಕಾ Long Range Guided Rocket ಅನ್ನು ಕೂಡ ಯಶಸ್ವಿಯಾಗಿ ಪರೀಕ್ಷಿಸಿತು. ಈ ಯಶಸ್ಸಿನ ಹಿಂದೆ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಸಾಮೂಹಿಕ ಪರಿಶ್ರಮ ಅಡಗಿದೆ. ಕೇವಲ ಎರಡು ಅಥವಾ ಮೂರು ದಿನಗಳ ಹಿಂದೆ, ಕುಶಾ ಕ್ಷಿಪಣಿಯನ್ನು ಸಹ ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷಿಸಿತು ಎಂದು ಶ್ಲಾಘಿಸಿದರು.

ʻಬ್ರಹ್ಮೋಸ್ʼ & ʻಅಸ್ತ್ರʼ ಕ್ಷಿಪಣಿಗಳ ಡೀಲ್‌ಗೆ ಸಹಿ
ರಕ್ಷಣಾ ಉತ್ಪಾದನೆಯಾಗಲಿ, ರಕ್ಷಣಾ ರಫ್ತುಗಳಾಗಲಿ ಅಥವಾ ಸ್ನೇಹಪರ ರಾಷ್ಟ್ರಗಳೊಂದಿಗೆ ರಾಜಕೀಯ ಸಹಕಾರವಾಗಲಿ, ಭಾರತ ನಿರಂತರವಾಗಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಈ ತಿಂಗಳ ಆರಂಭದಲ್ಲಿ, ನಾನು ಇಂಡೋನೇಷ್ಯಾದಲ್ಲಿದ್ದೆ, ಅಲ್ಲಿ ʻಬ್ರಹ್ಮೋಸ್ʼ ಮತ್ತು ʻಅಸ್ತ್ರʼ ಎಂಬ ಕ್ಷಿಪಣಿಗಳ ಕುರಿತು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಭಾರತದ ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ವಿಶ್ವಾಸ ವೃಧ್ಧಿಸುತ್ತಿದೆ. ಬನ್ನಿ ಈ ‘ಕಾರ್ಗಿಲ್ ವಿಜಯ್ ದಿವಸ’ ದಂದು, ನಮ್ಮ ಅಮರ ಹುತಾತ್ಮರಿಗೆ ಗೌರವ ಸಲ್ಲಿಸೋಣ ಮತ್ತು ಸುರಕ್ಷಿತ, ಸಮರ್ಥ ಮತ್ತು ಆತ್ಮನಿರ್ಭರ- ಸ್ವಾವಲಂಬಿ ಭಾರತವನ್ನ ನಿರ್ಮಿಸುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸೋಣ ಎಂದು ಕರೆ ನೀಡಿದರು.
