– ಪಾಕ್ ದುಸ್ಸಾಹಸ ಮಾಡಿದ್ರೆ ಊಹೆಗೂ ಮೀರಿದ ರೀತಿ ಭಾರತ ಪ್ರತಿಕ್ರಿಯಿಸುತ್ತೆ
ದೆಹಲಿ: ಭಾರತಕ್ಕೆ ಭಯೋತ್ಪಾದನೆಯ ಮೂಲಕ ಬೆದರಿಕೆ ಹಾಕುವವರಿಗೆ ‘ಆಪರೇಷನ್ ಸಿಂಧೂರ್’ (operation sindoor) ಸ್ಪಷ್ಟ ಸಂದೇಶ. ಪಿಒಕೆ (POK) ಹೊರತುಪಡಿಸಿ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸ್ಪಷ್ಟಪಡಿಸಿದ್ದಾರೆ.
27ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಶನಿವಾರ (ಜು.25) ಲಡಾಖ್‌ನ ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ, 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು. ಈ ವೇಳೆ, ಸೇನಾ ಸಿಬ್ಬಂದಿ ಮತ್ತು ನಿವೃತ್ತ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ‘ಆಪರೇಷನ್ ಸಿಂಧೂರ್’ ಭಾರತಕ್ಕೆ ಭಯೋತ್ಪಾದನೆಯಿಂದ ಬೆದರಿಕೆ ಹಾಕುವವರ ಭವಿಷ್ಯ ಏನಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ ಎಂದು ಎಚ್ಚರಿಕೆ ನೀಡಿದರು.
ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಅದರ ಕಲ್ಪನೆಗೂ ಮೀರಿದ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಭಾರತೀಯ ಪಡೆಗಳು ಹೊಂದಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಕೆಡಿಸಲು ಯಾವುದೇ ದುಷ್ಟ ಹೆಜ್ಜೆ ಇಡುವುದಕ್ಕೂ ಮುನ್ನ ಅವರು ಎರಡು ಬಾರಿ ಯೋಚಿಸಬೇಕು ಎಂದು ಎಚ್ಚರಿಸಿದರು.ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಭಾರತ ಹೊಸ ಅವಿಷ್ಕಾರದ ಹೊಸ ಮಾರ್ಗಗಳನ್ನು ಕಂಡುಹಿಡಿದು ಅಭಿವೃದ್ದಿಯತ್ತ ಸಾಗುತ್ತಿರುವ ಸಮಯದಲ್ಲಿ, ಪಾಕಿಸ್ತಾನ ತನ್ನ ಭಯೋತ್ಪಾದಕ ಕುತಂತ್ರಿ ಬುದ್ದಿಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಯಾವಾಗಲೂ ಸಂಚು ಮಾಡಿ ಒಳನುಸುಳುವಿಕೆಯ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತದೆ ಎಂದು ಟೀಕಿಸಿದರು.
ಭಾರತ ಈ ಎಲ್ಲ ತಂತ್ರಗಳಿಗೂ ಉತ್ತರ ನೀಡಲು ಸದಾ ಸಿದ್ಧವಾಗಿರುತ್ತದೆ. ಕಾರ್ಗಿಲ್ ಸಮಯದಲ್ಲಿ ಗುಂಡಿನ ದಾಳಿಯ ನಡುವೆಯೇ ಕಡಿದಾದ ಪರ್ವತಗಳನ್ನು ಹತ್ತುವುದು, ತಮ್ಮ ಸಹಚರರು ಹುತಾತ್ಮರಾಗುವುದನ್ನು ನೋಡಿದರೂ ಹೋರಾಟ ಮುಂದುವರಿಸುವುದು ಮತ್ತು ಶತ್ರುಗಳ ವಿರುದ್ಧ ಮುಖಾಮುಖಿ ಯುದ್ಧ ಮಾಡುವುದು ಭಾರತೀಯ ಸೈನಿಕರಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಧೈರ್ಯ, ತ್ಯಾಗ ಮತ್ತು ದೇಶಭಕ್ತಿ ಮುಂದಿನ ಪೀಳಿಗೆಗೂ ಸದಾ ಸ್ಫೂರ್ತಿಯಾಗಿರಲಿದೆ ಸಿಂಗ್ ಅಭಿಪ್ರಾಯಪಟ್ಟರು.ಇದನ್ನೂ ಓದಿ: ಭಾರತ ಅತ್ಯಂತ ವಿಶ್ವಾಸಾರ್ಹ ಜಾಗತಿಕ ರಕ್ಷಣಾ ಪಾಲುದಾರನಾಗಿ ಹೊರಹೊಮ್ಮುತ್ತಿದೆ – ಮೋದಿ ʻಮನದ ಮಾತುʼ
