ಇಸ್ಲಾಮಾಬಾದ್: ಗಂಭೀರ ಇಂಧನ ಹಾಗೂ ವಿದ್ಯುತ್ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ (Pakistan) ಸರ್ಕಾರವು ವೆಚ್ಚ ಕಡಿತ ಮತ್ತು ಇಂಧನ ಉಳಿತಾಯಕ್ಕಾಗಿ ಕಠಿಣ ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದಿದೆ.
ಸರ್ಕಾರಿ ವಾಹನಗಳ ಇಂಧನ ಕಡಿತ, ಹೊಸ ವಾಹನ ಖರೀದಿ ನಿಷೇಧ, ಅಧಿಕಾರಿಗಳ ವಿದೇಶ ಪ್ರವಾಸ ರದ್ದು ಹಾಗೂ ಅಧಿಕೃತ ಭೋಜನಕೂಟಗಳ ಮೇಲಿನ ನಿರ್ಬಂಧಗಳು ಇದರಲ್ಲಿ ಸೇರಿವೆ.
ಮಿತವ್ಯಯ ಕ್ರಮಗಳು ಏನೇನು?
ಸರ್ಕಾರಿ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಕೋಟಾವನ್ನು(Fuel Subsidy) ಮುಂದಿನ ಮೂರು ತಿಂಗಳ ಕಾಲ ಶೇ. 50ರಷ್ಟು ಕಡಿತಗೊಳಿಸಲಾಗಿದೆ.
ವಿದೇಶಿ ವಿದ್ಯಾರ್ಥಿವೇತನಗಳನ್ನು ಹೊರತುಪಡಿಸಿ, ಅಧಿಕಾರಿಗಳ ಎಲ್ಲಾ ರೀತಿಯ ವಿದೇಶ ಭೇಟಿ ಹಾಗೂ ಪ್ರವಾಸಗಳನ್ನು (ಕಡ್ಡಾಯ ಪ್ರವಾಸಗಳನ್ನೂ ಒಳಗೊಂಡು) ಮುಂದಿನ ಮೂರು ತಿಂಗಳ ಅವಧಿಗೆ ನಿರ್ಬಂಧಿಸಲಾಗಿದೆ.
ಮಾಹಿತಿ ತಂತ್ರಜ್ಞಾನ(IT) ಉಪಕರಣಗಳನ್ನು ಹೊರತುಪಡಿಸಿ ಉಳಿದ ಯಾವುದೇ ಬಾಳಿಕೆ ಬರುವ ವಸ್ತುಗಳ ಖರೀದಿಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ನೌಕರೇತರ ಸಂಬಂಧಿತ ವೆಚ್ಚಗಳ ಬಜೆಟ್ನಲ್ಲಿ ಇಡೀ 2026-27ರ ಹಣಕಾಸು ವರ್ಷಕ್ಕೆ ಶೇ. 5ರಷ್ಟು ಕಡಿತ ಘೋಷಿಸಲಾಗಿದೆ.
ದೇಶಾದ್ಯಂತ ನಡೆಯುವ ಎಲ್ಲಾ ವಿವಾಹ ಸಂಬಂಧಿತ ಸಮಾರಂಭ ಹಾಗೂ ಸಭೆಗಳಲ್ಲಿ ಅತಿಥಿಗಳಿಗೆ ಕೇವಲ ಒಂದೇ ತಿನಿಸನ್ನು (One dish) ಮಾತ್ರ ಬಡಿಸಬೇಕೆಂದು ಆದೇಶಿಸಲಾಗಿದೆ.
ಇಂಧನ ಮತ್ತು ಪ್ರಯಾಣ ವೆಚ್ಚವನ್ನು ತಗ್ಗಿಸಲು ಅಧಿಕಾರಿಗಳು ಸಭೆಗಳಿಗೆ ವರ್ಚುವಲ್ (ವಿಡಿಯೋ ಕಾನ್ಫರೆನ್ಸಿಂಗ್) ಮಾಧ್ಯಮವನ್ನು ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದನ್ನೂ ಓದಿ: BRICS Summit | ವರ್ಷಗಳ ಹಿಂದೆಯೆ ಅರ್ಜಿ ಸಲ್ಲಿಸಿದ್ರೂ ಪಾಕಿಸ್ತಾನಕ್ಕೆ ಸಿಗದ ಬ್ರಿಕ್ಸ್ ಸದಸ್ಯತ್ವ

ಎಲ್ಲಾ ಅಂಗಡಿಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್ಗಳು ಮತ್ತು ದಿನಸಿ ಅಂಗಡಿಗಳು ಕಡ್ಡಾಯವಾಗಿ ರಾತ್ರಿ 9 ಗಂಟೆಯೊಳಗೆ ಮುಚ್ಚಬೇಕು. ಕಲ್ಯಾಣ ಮಂಟಪಗಳು ಮತ್ತು ಹಬ್ಬದ ಕಾರ್ಯಕ್ರಮ ನಡೆಸುವ ಸ್ಥಳಗಳನ್ನು ರಾತ್ರಿ 10 ಗಂಟೆಯೊಳಗೆ ಮುಚ್ಚಲು ಸೂಚಿಸಲಾಗಿದೆ.
ಹೋಟೆಲ್ಗಳು ಮತ್ತು ಕೆಫೆಗಳು ರಾತ್ರಿ 11 ರವರೆಗೆ ತೆರೆಯಲು ಅವಕಾಶವಿದ್ದು, ಹೋಮ್ ಡೆಲಿವರಿ ಮತ್ತು ಟೇಕ್ಅವೇ ಸೇವೆಗಳಿಗೆ ಯಾವುದೇ ಸಮಯದ ನಿರ್ಬಂಧವಿಲ್ಲ.
ಹೆಚ್ಚಿದ ಬೆಲೆ
ಪಶ್ಚಿಮ ಏಷ್ಯಾದ ಸಂಘರ್ಷಗಳಿಂದಾಗಿ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪಾಕಿಸ್ತಾನದ ಇಂಧನ ವಲಯ ತೀವ್ರ ಒತ್ತಡಕ್ಕೆ ಸಿಲುಕಿದೆ. ಮಂಗಳವಾರ ಪೆಟ್ರೋಲ್ ದರ ಲೀಟರ್ಗೆ 4.10 ಪಾಕಿಸ್ತಾನಿ ರೂಪಾಯಿ ಮತ್ತು ಹೈಸ್ಪೀಡ್ ಡೀಸೆಲ್ ದರ 6.41 ರೂ. ಏರಿಕೆಯಾಗಿದೆ.
ಇದರೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 384.34 ಪಾಕ್ ರೂ. ಹಾಗೂ ಡೀಸೆಲ್ ಬೆಲೆ 415.83 ಪಾಕ್ ರೂ.ಗೆ ಏರಿಕೆಯಾಗಿದೆ. ಇರಾನ್ ಯುದ್ಧ ಆರಂಭಕ್ಕ ಮೊದಲು ಪ್ರತಿ ಲೀಟರ್ ಪೆಟ್ರೋಲ್ಗೆ 266.17 ರೂ. ಇದ್ದರೆ ಡೀಸೆಲ್ ದರ 280.86 ರೂ. ಇತ್ತು.
ಸರ್ಕಾರಿ ವಾಹನಗಳಿಗೆ ನೀಡಲಾಗುವ ಇಂಧನ ಕೋಟಾವನ್ನು ಸಹ ಶೇ.50 ರಷ್ಟು ಕಡಿತಗೊಳಿಸಲಾಗಿದೆ. ಸಾಮಾನ್ಯ ನಾಗರಿಕರಿಗೆ ನೆರವಾಗಲು ಜಾರಿಗೆ ತಂದಿರುವ ಹೊಸ ಇಂಧನ ಪರಿಹಾರ ಯೋಜನೆಯಡಿ, ಮೋಟಾರ್ ಸೈಕಲ್, ಆಟೋ ರಿಕ್ಷಾ ಮತ್ತು ಸಣ್ಣ ಕಾರುಗಳ ಮಾಲೀಕರಿಗೆ ನಿಗದಿತ ಮಾಸಿಕ ಕೋಟಾದಡಿ ಪ್ರತಿ ಲೀಟರ್ಗೆ 100 ರೂ. ಸಬ್ಸಿಡಿ ಒದಗಿಸಲಾಗುತ್ತಿದೆ ಎಂದು ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ತಿಳಿಸಿದ್ದಾರೆ.
ಆಮದು ಇಂಧನವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಪಾಕಿಸ್ತಾನದಲ್ಲಿ ಅನಿಲ ಮತ್ತು ವಿದ್ಯುತ್ ಕೊರತೆ ತೀವ್ರಗೊಂಡಿದ್ದು, ಸರ್ಕಾರವು ಇಂಧನ ಬಳಕೆಯನ್ನು ನಿಯಂತ್ರಿಸಿ ಬಿಕ್ಕಟ್ಟಿನಿಂದ ಹೊರಬರಲು ಈ ಕಠಿಣ ಹೆಜ್ಜೆಗಳನ್ನು ಇರಿಸಿದೆ.

