ಕೂದಲು ಉದುರುವಿಕೆ, ಕೂದಲು ತೆಳ್ಳಗಾಗುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಆಹಾರ ಪದ್ಧತಿಯೂ ಪ್ರಮುಖ ಪಾತ್ರ ವಹಿಸುತ್ತದೆ. ದೇಹಕ್ಕೆ ಅಗತ್ಯವಾದ ಪ್ರೋಟೀನ್, ಜಿಂಕ್, ಒಮೆಗಾ-3 ಹಾಗೂ ವಿಟಮಿನ್‌ಗಳ ಕೊರತೆಯೂ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಪೌಷ್ಟಿಕ ಅಂಶಗಳಿರುವ ಸೀಡ್ಸ್‌ಗಳು ಮತ್ತು ಡ್ರೈಫ್ರೂಟ್ಸ್ ಬಳಸಿ ಮನೆಯಲ್ಲೇ ತಯಾರಿಸಬಹುದಾದ ಈ ಲಡ್ಡುವನ್ನು ತಿಂದರೆ ಕೂದಲು ಉದುರುವಿಕೆಯನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು.

ಬೇಕಾಗುವ ಪದಾರ್ಥಗಳು
ಬಾದಾಮಿ – 1 ಕಪ್
ಅಗಸೆ ಬೀಜ – ½ ಕಪ್
ಕುಂಬಳಕಾಯಿ ಬೀಜ – ½ ಕಪ್
ಬಿಳಿ ಎಳ್ಳು – ¼ ಕಪ್
ಖರ್ಜೂರ – 1½ ಕಪ್
ತುಪ್ಪ – 2 ರಿಂದ 3 ಚಮಚ

ಮಾಡುವ ವಿಧಾನ
ಮೊದಲು ಬಾಣಲೆಗೆ ಬಾದಾಮಿ ಹಾಕಿ ಸಣ್ಣ ಉರಿಯಲ್ಲಿ 3–4 ನಿಮಿಷ ಹುರಿದುಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ಅಗಸೆ ಬೀಜ, ಕುಂಬಳಕಾಯಿ ಬೀಜ ಮತ್ತು ಬಿಳಿ ಎಳ್ಳನ್ನು ಹಾಕಿ 2–3 ನಿಮಿಷ ಒಣವಾಗಿ ಹುರಿದುಕೊಳ್ಳಿ.
ಹುರಿದ ಎಲ್ಲಾ ಪದಾರ್ಥಗಳನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಬಳಿಕ ಬಾದಾಮಿ ಮತ್ತು ಹುರಿದ ಬೀಜಗಳನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ತುಂಬಾ ನುಣ್ಣಗೆ ಪುಡಿ ಮಾಡದಿರುವುದು ಉತ್ತಮ.
ಈಗ ಖರ್ಜೂರವನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಖರ್ಜೂರ ಗಟ್ಟಿಯಾಗಿದ್ದರೆ ಸುಮಾರು 10 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ, ನೀರು ತೆಗೆದು ಬಳಿಕ ಬಳಸಬಹುದು.
ಬಾಣಲೆಗೆ 2 ಚಮಚ ತುಪ್ಪ ಹಾಕಿ ಖರ್ಜೂರದ ಪೇಸ್ಟ್ ಸೇರಿಸಿ ಸಣ್ಣ ಉರಿಯಲ್ಲಿ ಸುಮಾರು 2 ನಿಮಿಷ ಹುರಿಯಿರಿ. ನಂತರ ಇದಕ್ಕೆ ತಯಾರಿಸಿಟ್ಟಿರುವ ಸೀಡ್ಟ್ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮಿಶ್ರಣ ಉಗುರುಬೆಚ್ಚಗಿರುವಾಗ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಸಣ್ಣ ನಿಂಬೆಹಣ್ಣಿನ ಗಾತ್ರದ ಲಡ್ಡುಗಳನ್ನು ತಯಾರಿಸಿಕೊಳ್ಳಿ.

ಹೇಗೆ ಸೇವಿಸಬೇಕು?
ದಿನಕ್ಕೆ ಒಂದು ಲಡ್ಡುವನ್ನು ಬೆಳಗ್ಗೆ ಅಥವಾ ಸಂಜೆ ಸ್ನ್ಯಾಕ್ಸ್ ಸಮಯದಲ್ಲಿ ಸೇವಿಸಬಹುದು.
ಶೇಖರಣೆ ಹೇಗೆ?
ಲಡ್ಡುಗಳನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಸಂಗ್ರಹಿಸಬಹುದು.
ಖರ್ಜೂರದ ಬದಲಿಗೆ ಬೆಲ್ಲವನ್ನು ಬಳಸಬಹುದು. ಆದರೆ ಬೆಲ್ಲದ ಪ್ರಮಾಣವನ್ನು ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.
ಈ ಲಡ್ಡುವಿನಲ್ಲಿ ಕೂದಲಿನ ಆರೋಗ್ಯಕ್ಕೆ ಅಗತ್ಯವಾಗಿರುವ ಹಲವು ಪೌಷ್ಟಿಕಾಂಶಗಳಿರುವ ಆಹಾರ ಪದಾರ್ಥಗಳಿವೆ. ಆದರೆ ಕೂದಲು ಉದುರುವಿಕೆಗೆ ಒಂದೇ ಆಹಾರ ಪರಿಹಾರವಾಗುವುದಿಲ್ಲ. ನಿರಂತರವಾಗಿ ಕೂದಲು ಉದುರುತ್ತಿದ್ದರೆ ಅಥವಾ ಕೂದಲು ತೆಳ್ಳಗಾಗುತ್ತಿದ್ದರೆ ಕಾರಣ ತಿಳಿದುಕೊಳ್ಳಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

