Connect with us

ಉತ್ತರ ಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ

ಉತ್ತರ ಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ

ಲಕ್ನೋ: ಉತ್ತರಪ್ರದೇಶದ 21 ನೇ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾನ್ಶಿರಾಮ್ ಸ್ಮೃತಿ  ಭವನದ ಎದುರು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ರಾಮ್ ನಾಯ್ಕ್ ಯೋಗಿ ಆದಿತ್ಯನಾಥ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಸಮಾರಂಭದಲ್ಲಿ ಕೇಶವ ಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಉಪ ಮುಖ್ಯಮಂತ್ರಿಯಾಗಿ ಹಾಗೂ 43 ಮಂದಿ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದರು.

2ನೇ ಕಿರಿಯ ಸಿಎಂ: ಪ್ರಸ್ತುತ ಈಗ ಇರುವ ಮುಖ್ಯಮಂತ್ರಿಗಳಲ್ಲಿ 37 ವರ್ಷದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದರೆ, 44 ವರ್ಷದ ಯೋಗಿ ಆದಿತ್ಯನಾಥ್ ಅವರು 2ನೇ ಅತಿ ಕಿರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

ಗಣ್ಯರ ಉಪಸ್ಥಿತಿ: ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಗೃಹ ಸಚಿವ ರಾಜನಾಥ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಮುಲಾಯಂ ಸಿಂಗ್ ಯಾದವ್, ಮುರಳಿ ಮನೋಹರ್ ಜೋಶಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್, ಮಾಜಿ ಸಿಎಂ ಅಖಿಲೇಶ್ ಯಾದವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಯಾರು ಈ ಯೋಗಿ ಆದಿತ್ಯನಾಥ್?
ಉತ್ತರಾಖಂಡದ ಪಂಚೂರು ಮೂಲದ ಯೋಗಿ ಆದಿತ್ಯನಾಥ್, ಬಿಎಸ್‍ಸ್ಸಿ ಪದವಿ ಓದಿದ್ದಾರೆ. ಪದವಿ ಪಡೆದ ಬಳಿಕ ಅವರು ಸನ್ಯಾಸ ಸ್ವೀಕರಿಸಿ ಉತ್ತರಪ್ರದೇಶದ ನೇಪಾಳ ಗಡಿಯಲ್ಲಿರುವ ಪ್ರಭಾವಿ ಗೋರಖನಾಥ ಮಠ ಸೇರಿ ಕೊಂಡಿದ್ದರು. 2014ರಿಂದ ಆ ಮಠದ ಮುಖ್ಯಸ್ಥರೂ ಆಗಿದ್ದಾರೆ. ಪಕ್ಕಾ ಹಿಂದುತ್ವವಾದಿ, ಕರ್ಮಠ ಯೋಗಿ, ಕೇಸರಿ ಕೆಂಡ ಯೋಗಿ ಆದಿತ್ಯನಾಥ್ ಹಿಂದೂ ಮಹಾಸಭಾ, ಹಿಂದೂ ಯುವ ವಾಹಿನಿಯ ಅಧ್ಯಕ್ಷರೂ ಆಗಿದ್ದಾರೆ.

ಸದಾ ಮುಸ್ಲಿಂ ವಿರುದ್ಧದ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಯೋಗಿ ಆದಿತ್ಯನಾಥ್ ಘರ್‍ವಾಪ್ಸಿ ಕಾರ್ಯಕ್ರಮದೊಂದಿಗೆ ದೇಶಾದ್ಯಂತ ದೊಡ್ಡ ಆಂದೋಲನ ಸೃಷ್ಟಿಸಿದ್ದರು. ಉತ್ತರ ಪ್ರದೇಶದ ಹಲವೆಡೆ ಬೃಹತ್ ಗೋ ರಕ್ಷಣಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಸೋಲಿಲ್ಲದ ಸರದಾರ: 1998ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಆಗ ಅವರು 26 ವರ್ಷದ ಅವರು 12ನೇ ಲೋಕಸಭೆಯ ಅತಿ ಕಿರಿಯ ಎನಿಸಿದ್ದರು. ಆದಿತ್ಯನಾಥ್ ಲೋಕಸಭೆ ಚುನಾವಣೆ ಅಖಾಡದಲ್ಲಿ 1998 ರಿಂದ 2014ರವರೆಗೂ ಸೋಲಿಲ್ಲದ ಸರದಾರನಾಗಿ ಐದು ಬಾರಿ ಸಂಸದರಾಗಿ ಗೋರಖ್‍ಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಪದವೀಧರರಾಗಿರುವ ಯೋಗಿ ರಫ್ತಿ ನದಿಯ ದಡದಲ್ಲಿರುವ ಗೋರಖ್‍ನಾಥ್ ಮಠದ ಪೀಠಾಧಿಪತಿಯೂ ಆಗಿದ್ದಾರೆ.

ಮಂತ್ರಿಯಾಗಲ್ಲ  ಎಂದಿದ್ರು: ಹೆಸರಿನಲ್ಲಿಯೇ ಯೋಗ ಪಡೆದಿರುವ ಯೋಗಿ ಆದಿತ್ಯನಾಥ್‍ಗೆ 2014ರಲ್ಲಿ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ಕೇಂದ್ರ ಸಚಿವರಾಗುವಂತೆ ಸ್ವತಃ ಪ್ರಧಾನಿ ಮೋದಿ ಆಹ್ವಾನಿಸಿದಾಗ ನನಗೆ ನನ್ನ ಕ್ಷೇತ್ರದಲ್ಲಿ ಕೆಲಸ ಇದೆ ಎಂದು ಹೇಳಿ ನಯವಾಗಿ ನಿರಾಕರಿಸಿದ್ದರು. ಹೈಕಮಾಂಡ್‍ನ ಕಮಾಂಡ್‍ಗಳನ್ನ ಚಾಚೂ ತಪ್ಪದೆ ಪಾಲಿಸುವ ಯೋಗಿ ಹಲವು ಬಾರಿ ವಿವಾದ್ಮಕ ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ರು.

ಆದಿತ್ಯನಾಥ್ ಆಯ್ಕೆಗೆ ಕಾರಣಗಳೇನು..?
ಅಖಿಲೇಶ್ ಯಾದವ್ ಮತ್ತು ಮಾಯಾವತಿಯನ್ನ ಎದುರಿಸುವ ಮಾಸ್ ಲೀಡರ್ ಆಗಿದ್ದು ಹಿಂದೂಗಳ ಜೊತೆಗೆ ಯಾದವ, ದಲಿತರನ್ನ ಓಲೈಕೆ ಮಾಡುವ ಚಾಣಕ್ಷತೆಯನ್ನು ಯೋಗಿ ಹೊಂದಿದ್ದಾರೆ.

ಈಗಿನ ಹಿಂದೂ ಮತಗಳ ವೋಟ್ ಬ್ಯಾಂಕ್ ಭದ್ರಪಡಿಸಿ ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಯೋಗಿ ಬಳಿ ಇದ್ದು ಬಿಜೆಪಿಯಲ್ಲೇ ಉತ್ತಮ ಸಂಘಟನಾಕಾರ, ಕಾರ್ಯಚತುರಗಾರನಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಿಟ್ಟಿದ್ದ ಬಿಜೆಪಿ ನಾಯಕರನ್ನು ಯೋಗಿ ಒಗ್ಗುಡಿಸಿ ಪಕ್ಷವನ್ನು ಬಲ ಪಡಿಸಿದ್ದರು.

ಬಾಬ್ರಿ ಮಸೀದಿ ಧ್ವಂಸ ಬಳಿಕ ತೀವ್ರವಾಗಿ ಹಿಂದೂತ್ವ ಪ್ರತಿಪಾದನೆ ಮಾಡುತ್ತಾ ಬಂದಿರುವ ಇವರು ಉತ್ತರ ಪ್ರದೇಶದ ಪೂರ್ವಾಂಚಲ ಹಾಗೂ ಪಶ್ಚಿಮ ಭಾಗದಲ್ಲಿ ಬಿಗಿ ಹಿಡಿತವನ್ನು ಹೊಂದಿದ್ದಾರೆ. ಬಿಜೆಪಿಯ ಪ್ರಣಾಳಿಕೆಯ ಮುಖ್ಯ ಅಂಶ ರಾಮಮಂದಿರ ನಿರ್ಮಾಣಕ್ಕೆ ಹಿಂದಿನಿಂದ ಆಗ್ರಹಿಸುತ್ತಾ ಬಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲ 80 ಕ್ಷೇತ್ರವನ್ನು ಜಯಿಸಲು ಭದ್ರಬುನಾದಿಯ ಲೆಕ್ಕಾಚಾರ ಹಾಕಿ ಬಿಜೆಪಿ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಯೋಗಿ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಚುನಾವಣೆ ವೇಳೆ ಪ್ರಧಾನಿ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್ ಬಳಿಕ ಹೆಚ್ಚು ಪ್ರಚಾರವನ್ನು ಕೈಗೊಂಡಿದ್ದರು. 2014ರ ಸಾರ್ವತ್ರಿಕ ಚುನಾವಣೆ ವೇಳೆ ಮೋದಿಯನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಆಗ್ರಹಿಸಿದ್ದ ಪ್ರಮುಖ ನಾಯಕರ ಪೈಕಿ ಯೋಗಿಯೂ ಒಬ್ಬರಾಗಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ನೇರ ಸಂಪರ್ಕ ಹೊಂದಿರುವ ಕಾರಣ ಈಗ ಯೋಗಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿದೆ.

ಕಳೆದ 5 ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಪಡೆದ ಪತಗಳು

Advertisement
Advertisement