ಮಡಿಕೇರಿ: ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಕಂಬಳ (Kamabala) ಸ್ಪರ್ಧೆ ಆಯೋಜಿಸುವ ವಿಚಾರಕ್ಕೆ ಕೊಡಗು–ಮೈಸೂರು ಸಂಸದ ಯದುವೀರ್ ಒಡೆಯರ್ (Yaduveer Wadiyar) ವಿರೋಧ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಂಬಳವು ಕೇವಲ ಕ್ರೀಡೆಯಲ್ಲ. ಅದು ಕರಾವಳಿಯ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯದೊಂದಿಗೆ ಬೆಸೆದುಕೊಂಡಿರುವ ಆಚರಣೆ. ಅದನ್ನು ದಸರಾ ವೇದಿಕೆಗೆ ತರುವುದು ಸೂಕ್ತವಲ್ಲ. ಅದನ್ನು ಬೇರೆಡೆಗೆ ತಂದು ವಾಣಿಜ್ಯೀಕರಣ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ದಸರಾ ಸಂದರ್ಭದಲ್ಲಿ ಟಿಕೆಟ್ ವ್ಯವಸ್ಥೆ, ಯುವ ದಸರಾ, ವಸ್ತು ಪ್ರದರ್ಶನ ಸೇರಿದಂತೆ ಈಗಾಗಲೇ ಹಲವು ಸಮಸ್ಯೆಗಳಿವೆ. ಮೊದಲು ಅವುಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹರಿಸಬೇಕು. ಕಂಬಳವು ಕರಾವಳಿ ಭಾಗದ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯಾಗಿದ್ದು, ಅದರ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವುದು ಅಗತ್ಯ. ಹೀಗಾಗಿ ಮೈಸೂರು ದಸರಾ ವೇದಿಕೆಯಲ್ಲಿ ಕಂಬಳ ಆಯೋಜಿಸುವುದು ಸೂಕ್ತವಲ್ಲ.
ಕಂಬಳವನ್ನು ಮೈಸೂರು ದಸರಾದ ಭಾಗವನ್ನಾಗಿಸುವ ಪ್ರಸ್ತಾಪದ ಕುರಿತು ಸಂಸದರ ಈ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬು ಕುತೂಹಲ ಮೂಡಿಸಿದೆ.
