ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳದ ಶ್ರೀ ಅಲ್ಲಮಪ್ರಭು ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗಳು(Terdal Wrestling Competition) ಅತ್ಯಂತ ರೋಮಾಂಚಕಾರಿಯಾಗಿ ಜರುಗಿದ್ದು, ಸಾವಿರಾರು ಕ್ರೀಡಾಭಿಮಾನಿಗಳನ್ನು ರಂಜಿಸಿತು
ಕಳೆದ ವರ್ಷ ಮಳೆಯಿಂದಾಗಿ ಕುಸ್ತಿ ರದ್ದಾಗಿ ನಿರಾಸೆಗೊಂಡಿದ್ದ ಪ್ರೇಕ್ಷಕರಿಗೆ ಈ ಬಾರಿಯ ಮೈದಾನದ ಸೆಣಸಾಟಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡಿದವು. ಅದರಲ್ಲೂ ಅಂತರರಾಷ್ಟ್ರೀಯ ಮಟ್ಟದ ಪೈಲ್ವಾನರ ನಡುವಿನ ಅಂತಿಮ ಮೂರು ಪಂದ್ಯಗಳು ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದವು.
ಮುಂಬೈನ ಪೈಲ್ವಾನ್ ಗಣೇಶ್ ಜಗತಾಪ್ ಅವರು ಇರಾನ್(Iran) ದೇಶದ ಖ್ಯಾತ ಪೈಲ್ವಾನ್ ಅಲಿ ಇರಾನಿ ಅವರನ್ನು ಕೇವಲ 3 ನಿಮಿಷಗಳಲ್ಲಿ ಚಿತ್ ಮಾಡುವ ಮೂಲಕ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.

ಪುಣೆಯ ಪೈಲ್ವಾನ್ ಪೃಥ್ವಿರಾಜ್ ಮೋಹಳ ಅವರು ರಷ್ಯಾ(Russia) ಪ್ರಸಿದ್ಧ ಪೈಲ್ವಾನ್ ಜಬರ್ ಅಲಿ ವಿರುದ್ಧ ಭರ್ಜರಿ ಜಯಗಳಿಸಿ, ವಿದೇಶಿ ಮಲ್ಲನಿಗೆ ಸೋಲಿನ ರುಚಿ ತೋರಿಸಿದರು.
ಕೊಲ್ಲಾಪುರದ ಪ್ರಸಿದ್ಧ ಪೈಲ್ವಾನ್ ಸಿಕಂದರ್ ಶೇಕ್ ಮತ್ತು ಇರಾನ್‌ನ ಅಮಿರ್ ಮಹ್ಮದ್ ಹುಸೈನ್ ನಡುವಿನ ಸುಮಾರು 10 ನಿಮಿಷಗಳ ಸೆಣಸಾಟ ಮೈದಾನದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಹಲವು ಬಾರಿ ಸೋಲಿನ ಅಂಚಿಗೆ ಹೋದರೂ ಎದೆಗುಂದದೆ ಕಠಿಣ ಪೈಪೋಟಿ ನೀಡಿದ ಸಿಕಂದರ್ ಶೇಕ್, ಅಂತಿಮವಾಗಿ ಇರಾನ್ ಪೈಲ್ವಾನ್‌ನನ್ನು ಮಣ್ಣು ಮುಕ್ಕಿಸಿ ವಿಜಯ ಪತಾಕೆ ಹಾರಿಸಿದರು. ಇದನ್ನೂ ಓದಿ: `ಕೆಲ್ಸ ಮಾಡೋದು ಬಿಟ್ಟು, ಬಿಟ್ಟಿ ಯಾಕೆ ಹೋಗ್ತೀರಿ?ʼ – ನಿರ್ವಾಹಕರ ವಿರುದ್ಧ ಸಿಡಿದ ಮಹಿಳೆಯರು
ಜಾತ್ರೆಗೆ ನೆರೆಹೊರೆಯ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸುವ ಭಕ್ತರು ಮತ್ತು ಕ್ರೀಡಾಭಿಮಾನಿಗಳಿಗೆ ಸಾರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಸ್‌ಗಳನ್ನು ಒದಗಿಸುವಂತೆ ಸಾಮಾಜಿಕ ಕಾರ್ಯಕರ್ತ ಶರತ್ ಬಾಳಿಕಾಯಿ ಅವರು ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್‌ಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಅವರು ಡಿಪೋ ಮ್ಯಾನೇಜರ್‌ಗೆ ವಿಶೇಷ ಧನ್ಯವಾದ ಅರ್ಪಿಸಿದರು.
