ನಟಿ ಹಾಗೂ ಸಿಎಂ ವಿಜಯ್ ಆಪ್ತೆ ತ್ರಿಶಾ ವಿರುದ್ಧ ಆಕ್ಷೇಪಾರ್ಹ ನೀಡಿದ್ದ ತಮಿಳುನಾಡಿನ ವಿಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ವಿಜಯ್ ವಿಧಾನಸಭೆಯಲ್ಲೇ ಗುಡುಗಿದ್ದರು. ಮಹಿಳೆಯರನ್ನ ಗುರಿಯಾಗಿಸಿಕೊಂಡು ನಿಂದಿಸುವುದು ಹಾಗೂ ಚಾರಿತ್ರ್ಯಹರಣ ಮಾಡುವುದನ್ನ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಈ ಬೆನ್ನಲ್ಲೇ ಇದೀಗ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ ಕೂಡ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ವಿಜಯ್ ಹಾಗೂ ತ್ರಿಶಾ ಪರ ನಿಂತಿರುವ ಕಂಗನಾ, ಮಹಿಳೆಯರ ಚಾರಿತ್ರ್ಯಹರಣದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತ್ರಿಶಾ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದ ಕಂಗನಾ, ಇತ್ತೀಚಿನ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇತ್ತೀಚೆಗೆ ತಮಿಳುನಾಡಿನಲ್ಲಿ ಏನಾಯಿತು ಎಂಬುದನ್ನ ನೀವು ನೋಡಿದ್ದೀರಿ. ಅತ್ಯಂತ ಗೌರವಾನ್ವಿತ ಕಲಾವಿದೆಯೊಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ನಿಂದನೆ ಮತ್ತು ಚಾರಿತ್ರ್ಯಹತ್ಯೆಯ ವಿಷಯ ಬಂದಾಗಲೆಲ್ಲಾ ಮಹಿಳೆಯರನ್ನೇ ಗುರಿಯಾಗಿಸಲಾಗುತ್ತದೆ. ಮಹಿಳೆಯರನ್ನು ಕೆಳಗಿಳಿಸಲು ಅವರ ಚಾರಿತ್ರ್ಯವನ್ನೇ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಕಂಗನಾ ಕಿಡಿಕಾರಿದ್ದಾರೆ.
ಮುಂದುವರಿದು… ಮಹಿಳೆಯರನ್ನ ಹತ್ತಿಕ್ಕಲು ಅವರ ಚಾರಿತ್ರ್ಯವನ್ನೇ ಯಾವಾಗಲೂ ಅವರ ವಿರುದ್ಧ ಬಳಸಿಕೊಳ್ಳಲಾಗುತ್ತದೆ. ಮಹಿಳೆಯರನ್ನ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನ ಅರ್ಥಮಾಡಿಕೊಳ್ಳಲು ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದು. ಇದು ಭಾರತಕ್ಕೆ ಮಾತ್ರ ಸೀಮಿತವಾದ ವಿಚಾರವಲ್ಲ. ಜಗತ್ತಿನಾದ್ಯಂತ ಕಂಡುಬರುವ ವಿದ್ಯಮಾನವಾಗಿದೆ. ಉದ್ಯೋಗಸ್ಥ ಮಹಿಳೆಯರು, ಯಶಸ್ವಿ ಮಹಿಳೆಯರು, ನಟಿಯರು, ರಾಜಕಾರಣಿಗಳು ಹಾಗೂ ಅಧಿಕಾರ ಮತ್ತು ಪ್ರಭಾವದ ಸ್ಥಾನದಲ್ಲಿರುವ ಮಹಿಳೆಯರನ್ನ ಕೆಳಗಿಳಿಸಲು ಅವರ ಚಾರಿತ್ರ್ಯವನ್ನೇ ಗುರಿಯಾಗಿಸಲಾಗುತ್ತಿದೆ ಎಂದು ಕಂಗನಾ ಹೇಳಿದ್ದಾರೆ.
