ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಮತ್ತೆ ಮಳೆ ಸುರಿದಿದೆ. ಗುಡುಗು-ಸಿಡಿಲು ಸಹಿತ ಮಳೆಯಾಗಿದ್ದು, ಚಳಿಯ ವಾತಾವರಣ ಆವರಿಸಿದೆ.
ನಿನ್ನೆ ಬೆಳಗ್ಗೆ 8 ಗಂಟೆ ವರೆಗೆ ಮಳೆ ಸುರಿದಿತ್ತು. ನಂತರ ಬಿಸಿಲಿನ ವಾತಾವರಣ ಇತ್ತು. ಹಗಲಿನಲ್ಲಿ ಬಿಡುವು ನೀಡಿದ್ದ ಮಳೆ ಇಂದು ಮುಂಜಾನೆಯಿಂದ ಸುರಿದಿದೆ. ಮೆಜೆಸ್ಟಿಕ್, ಶೇಷಾದ್ರಿಪುರಂ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವಡೆ ಮಳೆಯಾಗಿದೆ. ಬೆಳಗ್ಗೆ ಶಾಲಾ-ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ಮಳೆ ಕಾಟ ಎದುರಾಗಿದೆ. ಇದನ್ನೂ ಓದಿ: ಮಡಗಾಂವ್ – ಮಂಗಳೂರು ವಂದೇ ಭಾರತ್ ಬೆಂಗಳೂರುವರೆಗೆ ವಿಸ್ತರಣೆ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ನಗರದಲ್ಲಿ ಮಳೆ ಅವಾಂತರ ಸೃಷ್ಟಿಯಾಗಿದೆ. ಹವಮಾನ ಇಲಾಖೆ ಮುಂದಿನ ಮೂರು ದಿನ ಬೆಂಗಳೂರಿಗೆ ಮಳೆ ಮುನ್ಸೂಚನೆ ನೀಡಿದೆ. ಇಂದು ಕೂಡ ನಗರಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಗುಡುಗು ಸಹಿತ ಜೋರು ಮಳೆ ಸಾಧ್ಯತೆಯಿದೆ. ಸದ್ಯ ನಗರದಲ್ಲಿ ದಟ್ಟ ಮೋಡ ಆವರಿಸಿದ್ದು, ತುಂತುರು ಮಳೆ ಬೀಳುತ್ತಿದೆ.
ಮಳೆಯಿಂದಾಗಿ ಕೆ.ಆರ್. ಮಾರ್ಕೆಟ್‌ನಲ್ಲಿ ವ್ಯಾಪಾರಿಗಳು ಪರದಾಡುವಂತಾಗಿದೆ. ಮಳೆಗೆ ಹೂವುಗಳು ನೆನೆದು ತೊಪ್ಪೆಯಾಗಿವೆ. ಕೊಳ್ಳುವವರಿಲ್ಲದೆ ಮಾರುಕಟ್ಟೆ ಬಿಕೋ ಎನ್ನುತ್ತಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಮಳೆ ಸುರಿಯುವ ಸಾಧ್ಯತೆಯಿದೆ. ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆ ಸಾಧ್ಯತೆಯಿದೆ. ಗಂಟೆಗೆ 30–40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರಕ್ಕೂ ಮಳೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಕರ್ನಾಟಕದ ಬರ ಪರಿಸ್ಥಿತಿಗೆ 3,705 ಕೋಟಿ ರೂ. ಕೇಂದ್ರ ನೆರವು ಕೋರಿದ ಹೆಚ್‌ಡಿಕೆ
ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

