– 52 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಯೋಜನೆಗಳಿಗೆ ಮಂಜೂರಾತಿ
– ಕರ್ನಾಟಕಕ್ಕೂ ಹೈ ಡೆನ್ಸಿಟಿ ನೆಟ್‌ವರ್ಕ್ ಯೋಜನೆ
– ಭೂಸ್ವಾಧೀನ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ
ನವದೆಹಲಿ: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ರೈಲ್ವೆ ಕ್ಷೇತ್ರದಲ್ಲಿ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂಬ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರ ಆರೋಪಕ್ಕೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ (V Somanna) ತಿರುಗೇಟು ನೀಡಿದ್ದಾರೆ. ರೈಲು ಮಾರ್ಗಗಳ ಚತುಷ್ಪಥೀಕರಣವನ್ನು ರಾಜ್ಯವಾರು ಅಥವಾ ರಾಜಕೀಯ ಆಧಾರದ ಮೇಲೆ ಅಲ್ಲ, ಹೈ ಡೆನ್ಸಿಟಿ ನೆಟ್‌ವರ್ಕ್ ಹಾಗೂ ತಾಂತ್ರಿಕ ಮಾನದಂಡಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ತಾಂತ್ರಿಕ ಮಾನದಂಡಗಳ ಆಧಾರದಲ್ಲಿ ಏಳು ಪ್ರಮುಖ ಹೈ ಡೆನ್ಸಿಟಿ ರೈಲ್ವೆ ಮಾರ್ಗಗಳನ್ನು ಗುರುತಿಸಲಾಗಿದೆ. ಇವುಗಳ ಒಟ್ಟು ಉದ್ದ ಸುಮಾರು 11 ಸಾವಿರ ಕಿ.ಮೀ. ಇದ್ದು, ದೇಶದ ರೈಲ್ವೆ ಜಾಲದ ಶೇ.16ರಷ್ಟಿದ್ದರೂ ಒಟ್ಟು ರೈಲು ಸಂಚಾರದ ಶೇ.41ರಷ್ಟು ಹೊರೆ ನಿರ್ವಹಿಸುತ್ತವೆ ಎಂದು ವಿವರಿಸಿದರು.
ದೆಹಲಿ–ಹೌರಾ, ಹೌರಾ–ಚೆನ್ನೈ, ಚೆನ್ನೈ–ಮುಂಬೈ, ಮುಂಬೈ–ದೆಹಲಿ, ದೆಹಲಿ–ಚೆನ್ನೈ, ಮುಂಬೈ–ಹೌರಾ ಹಾಗೂ ದೆಹಲಿ–ಗುವಾಹಟಿ ಮಾರ್ಗಗಳು ಈ ಹೈ ಡೆನ್ಸಿಟಿ ನೆಟ್‌ವರ್ಕ್ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದರು.
ಕರ್ನಾಟಕಕ್ಕೂ ಹೈ ಡೆನ್ಸಿಟಿ ನೆಟ್‌ವರ್ಕ್ ಯೋಜನೆ
ಕರ್ನಾಟಕಕ್ಕೆ ಹೈ ಡೆನ್ಸಿಟಿ ನೆಟ್‌ವರ್ಕ್ ಮಾರ್ಗದ ಚತುಷ್ಪಥ ಯೋಜನೆ ನೀಡಿಲ್ಲ ಎಂಬ ಆರೋಪವನ್ನು ಸೋಮಣ್ಣ ತಳ್ಳಿಹಾಕಿದ್ದಾರೆ. ಚೆನ್ನೈ–ಮುಂಬೈ ಹೈ ಡೆನ್ಸಿಟಿ ನೆಟ್‌ವರ್ಕ್ ಮಾರ್ಗ ಕರ್ನಾಟಕದ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಮೂಲಕವೇ ಹಾದುಹೋಗುತ್ತದೆ ಎಂದು ಹೇಳಿದ್ದಾರೆ.
ವಾಡಿ–ರಾಯಚೂರು ವಿಭಾಗದಲ್ಲಿ ವಿದ್ಯುತ್ ಟ್ರ್ಯಾಕ್ಷನ್ ವ್ಯವಸ್ಥೆಯನ್ನು 1×25 ಕೆ.ವಿ.ಯಿಂದ 2×25 ಕೆ.ವಿ.ಗೆ ಮೇಲ್ದರ್ಜೆಗೇರಿಸಲು 220 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದು ಹೈ ಡೆನ್ಸಿಟಿ ನೆಟ್‌ವರ್ಕ್‌ನ ಭಾಗವಾಗಿದ್ದು, ಕರ್ನಾಟಕಕ್ಕೂ ಇದರ ಪ್ರಯೋಜನ ದೊರೆಯಲಿದೆ ಎಂದು ಹೇಳಿದರು.
ಹೈ ಡೆನ್ಸಿಟಿ ಮಾರ್ಗಗಳ ಆಯ್ಕೆ ವಾರ್ಷಿಕ ಸರಕು ಸಾಗಣೆ ಪ್ರಮಾಣ ಸೇರಿದಂತೆ ಹಲವು ತಾಂತ್ರಿಕ ಮಾನದಂಡಗಳ ಆಧಾರದಲ್ಲಿ ನಡೆಯುತ್ತದೆ. ಹೀಗಾಗಿ ಇದನ್ನು ಯಾವುದೇ ರಾಜ್ಯದ ವಿರುದ್ಧದ ತಾರತಮ್ಯ ಎಂದು ಬಿಂಬಿಸುವುದು ಸರಿಯಲ್ಲ ಎಂದು ಸೋಮಣ್ಣ ತಿರುಗೇಟು ನೀಡಿದ್ದಾರೆ.
52 ಸಾವಿರ ಕೋಟಿ ರೂ.ಗಿಂತ ರೈಲ್ವೆ ಯೋಜನೆಗಳಿಗೆ ಮಂಜೂರಾತಿ
ಮೋದಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಹಣ ನೀಡಲಾಗಿದೆ ಎಂದು ಸೋಮಣ್ಣ ಹೇಳಿದ್ದಾರೆ. ದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ಸರಾಸರಿ ಸುಮಾರು 830–882 ಕೋಟಿ ರೂ.ದಾನ ದೊರೆಯುತ್ತಿತ್ತು. ಮೋದಿ ಸರ್ಕಾರದ ಅವಧಿಯಲ್ಲಿ ಇದು ವರ್ಷಕ್ಕೆ 7,500 ಕೋಟಿ ರೂ.ಗಿಂತಲೂ ಅಧಿಕವಾಗಿದೆ. 2026ರಲ್ಲಿಯೂ ರಾಜ್ಯದ ರೈಲ್ವೆ ಮೂಲಸೌಕರ್ಯಕ್ಕೆ 7,748 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 12 ವರ್ಷಗಳಲ್ಲಿ ಕರ್ನಾಟಕದಲ್ಲಿ 52 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಇದೇ ಮೊತ್ತದ ರೈಲ್ವೆ ಕಾಮಗಾರಿಗಳು ರಾಜ್ಯದಲ್ಲಿ ಪ್ರಗತಿಯಲ್ಲಿವೆ ಎಂದು ಸೋಮಣ್ಣ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೂ ಹಲವು ಯೋಜನೆ
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 12,900 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.
ಬಳ್ಳಾರಿ–ಚಿಕ್ಕಜಾಜೂರು ಡಬ್ಲಿಂಗ್ ಯೋಜನೆಗೆ 3,400 ಕೋಟಿ ರೂ. ಮಂಜೂರಾಗಿದ್ದು, ಹಗರಿಬೊಮ್ಮನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದ ಪ್ರಮುಖ ಮಾರ್ಗಗಳಿಗೆ ಹೈ ಡೆನ್ಸಿಟಿ ನೆಟ್‌ವರ್ಕ್ ಸ್ಥಾನಮಾನ ಇಲ್ಲದಿದ್ದರೂ ಅವುಗಳ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ–ಹೊಸಪೇಟೆ 3ನೇ ಮತ್ತು 4ನೇ ಮಾರ್ಗಕ್ಕೆ 2,380 ಕೋಟಿ ರೂ, ಬಳ್ಳಾರಿ–ಚಿಕ್ಕಜಾಜೂರು ಡಬ್ಲಿಂಗ್‌ಗೆ 3,400 ಕೋಟಿ ರೂ. ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ತುಮಕೂರು–ಬೆಂಗಳೂರು 3ನೇ ಮತ್ತು 4ನೇ ಮಾರ್ಗದ ಡಿಪಿಆರ್ ಪೂರ್ಣಗೊಂಡಿದ್ದು, ಮುಂದಿನ ಹಂತದ ಕ್ರಮಕ್ಕೆ ಸಿದ್ಧತೆ ನಡೆದಿದೆ ಎಂದು ಹೇಳಿದರು.
ತುಮಕೂರು–ವಸಂತನರಸಾಪುರದಲ್ಲಿ ದಕ್ಷಿಣ ಏಷ್ಯಾದ ಪ್ರಮುಖ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು ಎಂದು ಸೋಮಣ್ಣ ತಿಳಿಸಿದರು.
ಭೂಸ್ವಾಧೀನ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ
ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದಿಂದ ಭೂಸ್ವಾಧೀನ ವಿಳಂಬವಾಗುತ್ತಿದೆ ಎಂದು ಸೋಮಣ್ಣ ಆರೋಪಿಸಿದ್ದಾರೆ. 3,000 ಎಕರೆಗೂ ಹೆಚ್ಚು ಭೂಮಿ ಇನ್ನೂ ರೈಲ್ವೆಗೆ ಹಸ್ತಾಂತರವಾಗಬೇಕಿದೆ ಎಂದು ಹೇಳಿದ್ದಾರೆ.
ಬೆಳಗಾವಿ–ಧಾರವಾಡ ಹೊಸ ರೈಲು ಮಾರ್ಗಕ್ಕೆ 2019–20ರಲ್ಲೇ ಅನುಮೋದನೆ ದೊರೆತಿದ್ದರೂ ಭೂಮಿ ಹಸ್ತಾಂತರದಲ್ಲಿ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
ಹೆಜ್ಜಾಲ–ಚಾಮರಾಜನಗರ 141 ಕಿ.ಮೀ. ಯೋಜನೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ 2024ರ ಡಿಸೆಂಬರ್‌ನಲ್ಲಿ ರಾಜ್ಯ ಹಣಕಾಸು ಇಲಾಖೆಯಿಂದ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂಬ ಪತ್ರ ಬಂದಿತ್ತು ಎಂದು ಸೋಮಣ್ಣ ಆರೋಪಿಸಿದ್ದಾರೆ. ಇದನ್ನೂ ಓದಿ: ವೀಡಿಯೋ ವೈರಲ್ ಬಳಿಕ ತಂದೆ, ಸಹೋದರನಿಂದ ಯುವತಿಯ `ಮರ್ಯಾದಾ ಹತ್ಯೆ’ – ಅಪಘಾತದಂತೆ ಬಿಂಬಿಸಲು ಯತ್ನ
ಮಂಗಳೂರು ರೈಲ್ವೆ ವ್ಯಾಪ್ತಿಯಲ್ಲೂ ಬದಲಾವಣೆ
ಮಂಗಳೂರು ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ತರಲಾಗಿದೆ ಎಂದು ಸೋಮಣ್ಣ ಹೇಳಿದ್ದಾರೆ.
ಇದರಿಂದ ಮಂಗಳೂರು ರೈಲ್ವೆ ಪ್ರದೇಶದ ಸುಮಾರು 55 ಕಿ.ಮೀ. ವ್ಯಾಪ್ತಿ ಮೈಸೂರು ವಿಭಾಗದ ಅಡಿಗೆ ಬರಲಿದೆ. ಮೈಸೂರು ವಿಭಾಗಕ್ಕೆ ವಾರ್ಷಿಕ 600–700 ಕೋಟಿ ರೂ. ಹೆಚ್ಚುವರಿ ಆದಾಯ ಬರಬಹುದು ಎಂದು ಅವರು ತಿಳಿಸಿದ್ದಾರೆ.
ಪಡೀಲ್ ಬದಲಿಗೆ ಉಳ್ಳಾಲವು ಮೈಸೂರು–ಪಾಲಕ್ಕಾಡ್ ವಿಭಾಗಗಳ ಹೊಸ ಇಂಟರ್‌ಚೇಂಜ್ ಆಗಲಿದೆ ಎಂದು ಹೇಳಿದರು.
ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮಾತನಾಡುತ್ತಿಲ್ಲ ಎಂದು ಸೋಮಣ್ಣ ಕಿಡಿಕಾರಿದ್ದಾರೆ. ಕೇರಳ ಲಾಬಿಗೆ ಮಣಿದು ಅವರು ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮೋದಿ ಸಾರ್ವಜನಿಕ ಬದುಕಿಗೆ 25 ವರ್ಷ: ಸೆ.17ರಿಂದ ಬಿಜೆಪಿಯ ಸಂಕಲ್ಪ ಸೇವಾ ಅಭಿಯಾನ
