ನವದೆಹಲಿ: ಕರ್ನಾಟಕದ ರೈಲು ಮೂಲಸೌಕರ್ಯ (Karnataka Rail Infrastructure) ಹಾಗೂ ಸಂಚಾರ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಒಟ್ಟು 10,021 ಕೋಟಿ ರೂ. ವೆಚ್ಚದ ಐದು ಬಹುಹಳಿ ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ.
ನಾಲ್ಕು ರಾಜ್ಯಗಳ 17 ಜಿಲ್ಲೆಗಳನ್ನು ಒಳಗೊಂಡ ಈ ಯೋಜನೆಗಳಿಂದ ರೈಲ್ವೆ ಜಾಲಕ್ಕೆ ಸುಮಾರು 540 ಕಿ.ಮೀ. ಹೆಚ್ಚುವರಿ ಮಾರ್ಗ ಸೇರ್ಪಡೆಯಾಗಲಿದೆ. ಕರ್ನಾಟಕಕ್ಕೆ(Karnataka) ಸಂಬಂಧಿಸಿದಂತೆ ವೈಟ್‌ಫೀಲ್ಡ್– ಬಂಗಾರಪೇಟೆ 3ನೇ ಮತ್ತು 4ನೇ ಮಾರ್ಗ ಹಾಗೂ ಹೊಸೂರು – ಒಮಲೂರು ಡಬ್ಲಿಂಗ್ ಯೋಜನೆಗೆ ಅನುಮೋದನೆ ನೀಡಿದೆ.
ವೈಟ್‌ಫೀಲ್ಡ್–ಬಂಗಾರಪೇಟೆ ನಡುವೆ 47 ಕಿ.ಮೀ. ಉದ್ದದ 3ನೇ ಮತ್ತು 4ನೇ ರೈಲು ಮಾರ್ಗ ನಿರ್ಮಾಣವಾಗಲಿದೆ. ಈ ಕಾಮಗಾರಿಯಿಂದ ಬೆಂಗಳೂರು – ಚೆನ್ನೈ ರೈಲು ಕಾರಿಡಾರ್‌ನಲ್ಲಿ ಸಂಚಾರ ಸಾಮರ್ಥ್ಯ ಹೆಚ್ಚಲಿದ್ದು, ಪ್ರಯಾಣಿಕ ಮತ್ತು ಸರಕು ರೈಲುಗಳ ಸಂಚಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಈ ಮಾರ್ಗವು ಕರ್ನಾಟಕ – ತಮಿಳುನಾಡು ನಡುವಿನ ಪ್ರಮುಖ ಅಂತರರಾಜ್ಯ ಸಂಪರ್ಕವಾಗಿದ್ದು, ಸರಕು ಸಾಗಣೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಹೊಸೂರು – ಒಮಲೂರು ಡಬ್ಲಿಂಗ್‌ನಿಂದ ಬೆಂಗಳೂರು – ಹೊಸೂರು ಭಾಗದಿಂದ ತಮಿಳುನಾಡಿನ ವಿವಿಧ ಪ್ರದೇಶಗಳತ್ತ ರೈಲು ಸಂಚಾರ ಸಾಮರ್ಥ್ಯ ಹೆಚ್ಚಲಿದೆ. ಪ್ರಯಾಣಿಕರ ಜತೆಗೆ ಕೈಗಾರಿಕಾ ಸರಕು ಸಾಗಣೆಯೂ ಮತ್ತಷ್ಟು ಸುಗಮವಾಗುವ ನಿರೀಕ್ಷೆಯಿದೆ.

ಈ ಎರಡೂ ಯೋಜನೆಗಳು ಪೂರ್ಣಗೊಂಡರೆ ಕರ್ನಾಟಕದ ಪ್ರಮುಖ ಕೈಗಾರಿಕಾ ಹಾಗೂ ವಾಣಿಜ್ಯ ಪ್ರದೇಶಗಳಿಗೆ ರೈಲು ಸಂಪರ್ಕ ಬಲಗೊಳ್ಳಲಿದ್ದು, ರೈಲು ಸಂಚಾರದ ದಟ್ಟಣೆ ಕಡಿಮೆಯಾಗಲು ನೆರವಾಗಲಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಚತುಷ್ಪಥ ರೈಲು ಯೋಜನೆ ನೀಡಿಲ್ಲ ಎಂಬುದು ತಪ್ಪು; ಎಂ.ಬಿ ಪಾಟೀಲ್ ಆರೋಪಕ್ಕೆ ವಿ. ಸೋಮಣ್ಣ ತಿರುಗೇಟು
ನಾಲ್ಕು ರಾಜ್ಯಗಳಲ್ಲಿ ಅನುಷ್ಠಾನಗೊಳ್ಳುವ ಐದು ಯೋಜನೆಗಳಿಂದ ಸುಮಾರು 2,121 ಗ್ರಾಮಗಳಿಗೆ ರೈಲು ಸಂಪರ್ಕ ಸುಧಾರಣೆಯಾಗಲಿದ್ದು, ಸುಮಾರು 52 ಲಕ್ಷ ಜನರಿಗೆ ಪ್ರಯೋಜನ ದೊರೆಯಲಿದೆ. ಅಲ್ಲದೇ ತಿರುಪತಿ, ತಿರುಟ್ಟಣಿ, ತಿರುಚಾನೂರು, ಬಂಗಾರು ತಿರುಪತಿ, ಕೆಜಿಎಫ್, ಹೊಗೆನಕ್ಕಲ್ ಜಲಪಾತ, ಹೊಸೂರು ಕೋಟೆ, ಮೆಟ್ಟೂರು ಅಣೆಕಟ್ಟು, ಕೊಡೈಕೆನಾಲ್ ಸೇರಿದಂತೆ ಹಲವು ಪ್ರಮುಖ ಪ್ರವಾಸಿ ಮತ್ತು ಧಾರ್ಮಿಕ ತಾಣಗಳಿಗೆ ರೈಲು ಸಂಪರ್ಕ ಸುಧಾರಿಸಲಿದೆ.
ಕಲ್ಲಿದ್ದಲು, ಸಿಮೆಂಟ್, ಕಬ್ಬಿಣ–ಉಕ್ಕು, ಕಂಟೇನರ್‌ಗಳು, ವಾಹನಗಳು, ಆಹಾರ ಧಾನ್ಯಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಸಗೊಬ್ಬರಗಳ ಸಾಗಣೆಗೆ ಈ ಮಾರ್ಗಗಳು ಪ್ರಮುಖವಾಗಲಿವೆ. ಈ ಯೋಜನೆಗಳಿಂದ ವರ್ಷಕ್ಕೆ ಸುಮಾರು 47 ದಶಲಕ್ಷ ಟನ್ ಹೆಚ್ಚುವರಿ ಸರಕು ಸಾಗಣೆ ಸಾಮರ್ಥ್ಯ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
