ಬೆಂಗಳೂರು: ಎಪಿಎಂಸಿ (APMC) ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಕಾರ್ಮಿಕರ ಹಾಗೂ ವ್ಯಾಪಾರಿಗಳ ಸಮಸ್ಯೆಗಳನ್ನು ಖುದ್ದು ಆಲಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಕ್ರಮವನ್ನು ಕರ್ನಾಟಕ ಹೈಕೋರ್ಟ್ (High Court) ಮುಕ್ತಕಂಠದಿಂದ ಶ್ಲಾಘಿಸಿದೆ.
ಕಾರ್ಮಿಕರ ಸಮಸ್ಯೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ(Justice V. Srishananda) ಅವರಿದ್ದ ಏಕಸದಸ್ಯ ಪೀಠ ಈ ಪ್ರಶಂಸನೀಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿಗಳ ಈ ದಿಢೀರ್ ಭೇಟಿಯನ್ನು ಕೆಲವರು ಗಿಮಿಕ್ ಎಂದು ಕರೆದರೂ, ನಿಸ್ಸಂದೇಹವಾಗಿ ಇದೊಂದು ಶ್ಲಾಘನೀಯ ಕಾರ್ಯ. ಸಿಎಂ ಅವರು ಖುದ್ದು ಮಾರುಕಟ್ಟೆಗೆ ತೆರಳಿ ಈರುಳ್ಳಿ ಮತ್ತು ಬೆಳ್ಳುಳ್ಳಿ ವರ್ತಕರು ಹಾಗೂ ಹಮಾಲಿ ಕಾರ್ಮಿಕರ ಕಷ್ಟ-ಸುಖಗಳನ್ನು ಆಲಿಸಿದ್ದಾರೆ. ವಿಶೇಷವಾಗಿ ಅಲ್ಲಿನ ಶ್ರಮಜೀವಿ ಮಹಿಳೆಯರ ಜೊತೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿರುವುದು ಅತ್ಯಂತ ಸಂತಸದ ವಿಚಾರ ಎಂದು ನ್ಯಾಯಮೂರ್ತಿಗಳು ಪ್ರಶಂಸಿಸಿದರು. ಇದನ್ನೂ ಓದಿ: ಯಶವಂತಪುರ ಎಪಿಎಂಸಿಯಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಕೂಲಿಕಾರರೊಂದಿಗೆ ಇಡ್ಲಿ ತಿಂದ ಡಿಕೆಶಿ
ಇದೇ ಸಂದರ್ಭದಲ್ಲಿ ರಾಜ್ಯದ ಎಪಿಎಂಸಿ ಮಾರುಕಟ್ಟೆಗಳ ವಾಸ್ತವ ಸ್ಥಿತಿಗತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ರಾಜ್ಯದಲ್ಲಿ ಪ್ರಸ್ತುತ ಎಪಿಎಂಸಿಗಳು ಯಾರದ್ದೋ ಹೆಸರು, ಇನ್ನಾರದ್ದೋ ಬಾಡಿಗೆ ಎನ್ನುವಂತಾಗಿ ಸಂಪೂರ್ಣವಾಗಿ ನಶಿಸಿಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿತು.
ಮಾರುಕಟ್ಟೆಯಲ್ಲಿನ ಮಧ್ಯವರ್ತಿಗಳ ಹಾವಳಿ ಹಾಗೂ ಮೂಲಸೌಕರ್ಯಗಳ ಕೊರತೆಯ ನಡುವೆ, ಮುಖ್ಯಮಂತ್ರಿಗಳು ತಳಮಟ್ಟದ ಕಾರ್ಮಿಕರ ಜೊತೆ ನೇರವಾಗಿ ಸಂವಾದ ನಡೆಸಿರುವುದು ಆಡಳಿತಕ್ಕೆ ಸಕಾರಾತ್ಮಕ ಸಂದೇಶ ನೀಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
