ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಮಂಗಳವಾರ ಮುಂಜಾನೆ 7 ಗಂಟೆಗೆ ಯಶವಂತಪುರದ ಎಪಿಎಂಸಿ (APMC) ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈರುಳ್ಳಿ ಮಂಡಿಗೆ ಭೇಟಿ ನೀಡಿದ ಅವರು, ಸ್ಥಳೀಯ ವರ್ತಕರು, ರೈತರು ಮತ್ತು ಕೂಲಿಕಾರರೊಂದಿಗೆ ಕುಳಿತು ಸಮಸ್ಯೆಗಳನ್ನು ಆಲಿಸಿದರು.
ಮಾರುಕಟ್ಟೆ ಪರಿಶೀಲನೆ ವೇಳೆ ರಸ್ತೆ ಬದಿಯ ಸಣ್ಣ ಪೆಟ್ಟಿಗೆ ಹೋಟೆಲ್‌ಗೆ ತೆರಳಿದ ಡಿ.ಕೆ. ಶಿವಕುಮಾರ್, ಅಲ್ಲಿನ ಕೂಲಿ ಕಾರ್ಮಿಕರ ಜೊತೆಯಲ್ಲೇ ಕುಳಿತು ಇಡ್ಲಿ(Idli) ಸೇವಿಸಿದರು. ಈ ವೇಳೆ ತಮ್ಮೊಂದಿಗೆ ಕುಳಿತಿದ್ದ ಕೂಲಿಕಾರರ ಉಪಹಾರದ ಬಿಲ್ ಪಾವತಿಸಲು ಮುಂದಾಗಿ ಹೋಟೆಲ್(Hotel) ಮಾಲೀಕರಿಗೆ 500 ರೂ. ನೀಡಿ ಇವರ ಬಳಿ ಹಣ ಪಡೆಯಬೇಡಿ ಎಂದು ಹೇಳಿದರು.
ಭೇಟಿಯ ವೇಳೆ ಎಪಿಎಂಸಿ ಮಾಜಿ ಸದಸ್ಯ ಅರುಣ್ ಪರಮೇಶ್ವರ್ ಹಾಗೂ ಸ್ಥಳೀಯರು ಮಾರುಕಟ್ಟೆಯ ದುರವಸ್ಥೆ ಮತ್ತು ಅವ್ಯವಸ್ಥೆಗಳ ಕುರಿತು ದೂರು ನೀಡಿದರು.
ರೈತರಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಬಾಟಲಿಗೆ 20 ರೂ. ನೀಡಿ ಖರೀದಿಸಬೇಕಾದ ಸ್ಥಿತಿಯಿದೆ. ಶೌಚಾಲಯದ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ರೈತರಿಗಾಗಿ ನಿರ್ಮಿಸಲಾದ ಈ ಮಾರುಕಟ್ಟೆಯಲ್ಲಿ ಹಿಂದಿನ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಯಶವಂತಪುರ ಎಪಿಎಂಸಿಗೆ ಡಿಕೆಶಿ ದಿಢೀರ್ ಭೇಟಿ – ಈರುಳ್ಳಿ ಮೂಟೆ ಮೇಲೆ ಕುಳಿತು ರೈತರ ಜೊತೆ ಚರ್ಚೆ
