ಹಾಸನ: ಪೂಜೆ ವಿಚಾರಕ್ಕೆ ಅರ್ಚಕರ ನಡುವೆ ಜಟಾಪಟಿ (Pooja Dispute) ನಡೆದು ದೇವಾಲಯಕ್ಕೆ ಬೀಗ ಜಡಿದ ಘಟನೆ ಹೊಳೆನರಸೀಪುರ (Holenarasipur) ತಾಲೂಕಿನ ಮಳಲಿ ಗ್ರಾಮದ ಶ್ರೀಲಕ್ಷ್ಮೀದೇವಿ ದೇವಾಲಯದಲ್ಲಿ (Srilakshmidevi Temple) ನಡೆದಿದೆ.
ಹಿಂದಿನಿಂದಲೂ ಯಾದವ ಸಮುದಾಯಕ್ಕೆ ಸೇರಿದ 24 ಕುಟುಂಬಗಳು ಪೂಜೆ ಕೈಂಕರ್ಯ ನಡೆಸುತ್ತಿದ್ದರು. ಈ ಬಾರಿ ಆರು ಕುಟುಂಬಗಳಿಗೆ ಮಾತ್ರ ಉಪವಿಭಾಧಿಕಾರಿಗಳು ಅವಕಾಶ ನೀಡಿದ್ದಾರೆ. ಇದರಿಂದ ಕೆರಳಿದ ಅರ್ಚಕರ ಕುಟುಂಬಗಳು ದೇವಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಬಹಳ ಹಿಂದಿನಿಂದಲೂ ಯಾದವ ಸಮುದಾಯಕ್ಕೆ ಸೇರಿದ 24 ಕುಟುಂಬಗಳು 15 ದಿನಗಳಿಗೆ ಒಂದು ಕುಟುಂಬದಂತೆ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೀಗ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ ಆಗಿರುವುದರಿಂದ ವರ್ಷಕ್ಕೊಮ್ಮೆ ತಹಶೀಲ್ದಾರ್ ಕಚೇರಿಗೆ ಕುಟುಂಬದ ದಾಖಲೆ ನೀಡಿ ಪೂಜೆಗೆ ಅನುಮತಿ ಪಡೆಯಬೇಕಿದೆ. ಇದನ್ನೂ ಓದಿ: ಅವಧಿ ಮೀರಿದ ಆಹಾರ ಪದಾರ್ಥ ಬಳಕೆ – ಚಾ.ನಗರದಲ್ಲಿ ಹೊಟೇಲ್‌ಗಳ ಮೇಲೆ ಡಿಸಿ ದಿಢೀರ್ ದಾಳಿ
ಎಲ್ಲಾ ಕುಟುಂಬಗಳು ದೇವಸ್ಥಾನದ ಪೂಜೆಗಾಗಿ ಭತ್ಯೆ ಪಡೆಯುತ್ತಿದ್ದು, ದೇವಾಲಯದ ಹೆಸರಿನಲ್ಲಿದ್ದ ಜಮೀನನ್ನು 24 ಕುಟುಂಬಗಳಿಗೆ ಹಂಚಿಕೆ ಮಾಡಲಾಗಿದೆ. ಈ ವರ್ಷ 24 ಕುಟುಂಬಗಳು ಪೂಜೆ ನೆರವೇರಿಸಲು ತಹಶೀಲ್ದಾರ್ ಕಚೇರಿಗೆ ದಾಖಲೆ ಸಲ್ಲಿಸಿದ್ದು ಕೇವಲ 6 ಕುಟುಂಬಗಳಿಗೆ ಮಾತ್ರ ಉಪವಿಭಾಗಧಿಕಾರಿ ಅನುಮತಿ ನೀಡಿದ್ದಾರೆ. ಉಳಿದ 18 ಕುಟುಂಬಗಳಲ್ಲಿ 13 ಕುಟುಂಬಗಳು ದಾಖಲೆ ಸರಿಯಿದ್ದರೂ ಪೂಜೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕೆ ಬಂದ ಹೊಳೆನರಸೀಪುರ ತಹಶೀಲ್ದಾರ್ ರೇಣುಕುಮಾರ್ ಅವರನ್ನ ಅರ್ಚಕರು ತರಾಟೆ ತೆಗೆದುಕೊಂಡರು. ನಿಮ್ಮ ಆದೇಶದಿಂದ ಅರ್ಚಕರ ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು. ಇತ್ತ, ಬೆಳಗ್ಗೆ 7 ಗಂಟೆಗೆ ದೇವರ ಪೂಜೆಗೆ ಬಂದಿದ್ದ ಭಕ್ತರು 12 ಗಂಟೆಯವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶ್ರೀ ಲಕ್ಷ್ಮೀದೇವಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಮನೆ ದೇವರಾಗಿದೆ. ಅರ್ಚಕರಿಗೆ ಪೂಜೆಗೆ ಅನುಮತಿ ಕೊಡುವ ವಿಚಾರದ ಹಿಂದೆ ರಾಜಕೀಯ ಮುಖಂಡರ ಕೈವಾಡವಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಅಧಿಕಾರಿಗಳ ಯಡವಟ್ಟು ಹಾಗೂ ಅರ್ಚಕರ ತಿಕ್ಕಾಟಕ್ಕೆ ಭಕ್ತಾದಿಗಳು ತೊಂದರೆ ಪರದಾಡುವಂತೆ ಆಗಿದೆ. ಇದನ್ನೂ ಓದಿ: ಇನ್ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ 25 ದಿನಕ್ಕೊಮ್ಮೆ LPG ಸಿಲಿಂಡರ್
