ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿಗಳ (Veterinary Officers) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಬೃಹತ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಸಿಐಡಿ (CID) ನಡೆಸಿದ ತನಿಖೆಯಲ್ಲಿ ಬರೋಬ್ಬರಿ 24 ಅಭ್ಯರ್ಥಿಗಳು ಹಣ ನೀಡಿ ಹುದ್ದೆ ಗಿಟ್ಟಿಸಿಕೊಂಡಿರುವ ಆಘಾತಕಾರಿ ಸತ್ಯಾಂಶ ಬಯಲಾಗಿದೆ.
ನೇಮಕಾತಿ ಪರೀಕ್ಷೆಗೂ ಮುನ್ನವೇ ಆರೋಪಿಗಳ ತಂಡವು 24 ಅಭ್ಯರ್ಥಿಗಳಿಂದ ಮುಂಗಡ ಹಣ ಪಡೆದು ಪ್ರತ್ಯೇಕ ತರಬೇತಿ ನೀಡಿತ್ತು. ಅಭ್ಯರ್ಥಿಯೊಬ್ಬರಿಂದ 20 ಲಕ್ಷ, 40 ಲಕ್ಷದಿಂದ ಹಿಡಿದು 80 ಲಕ್ಷ ರೂ.ವರೆಗೆ ಒಟ್ಟು 12 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಆರೋಪಿಗಳು ಸಂಗ್ರಹಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಇದನ್ನೂ ಓದಿ: ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 7.5% ಮೀಸಲಾತಿ – ಕರಡು ನಿಯಮ ಪ್ರಕಟ
ಸಂಗ್ರಹಿಸಲಾದ ಬಹುತೇಕ ಹಣವನ್ನು ನಗದು ರೂಪದಲ್ಲೇ ಪಡೆಯಲಾಗಿತ್ತು. ಆರೋಪಿ ಬಸವರಾಜ್ ಎಂಬಾತನ ಬ್ಯಾಂಕ್ ಖಾತೆಗೆ ಅಭ್ಯರ್ಥಿಗಳು ಸುಮಾರು 75 ಲಕ್ಷ ರೂ. ಹಣವನ್ನು ನೇರವಾಗಿ ಸಂದಾಯ ಮಾಡಿದ್ದರು. ಈ ಹಣವನ್ನು ಬೀದರ್‌ನ ಕೋ-ಆಪರೇಟಿವ್ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿತ್ತು.
ಪ್ರಕರಣದ ಬೆನ್ನುಬಿದ್ದ ಸಿಐಡಿ ಅಧಿಕಾರಿಗಳು, ಬ್ಯಾಂಕ್ ಖಾತೆಯಲ್ಲಿದ್ದ 75 ಲಕ್ಷ ರೂ. ನಗದು ಸೇರಿದಂತೆ ಅಕ್ರಮಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
