-ನೀರು ಹರಿಸಿದರೆ ಉಗ್ರ ಹೋರಾಟದ ಎಚ್ಚರಿಕೆ
ನವದೆಹಲಿ/ಮಂಡ್ಯ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು (ಸೆ.8) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮಹತ್ವದ ಹೈವೋಲ್ಟೇಜ್ ಸಭೆ ನಡೆಯಲಿದೆ.
ಈ ಹಿಂದಿನ ಸಭೆಗಳಲ್ಲಿ ಸತತ ಮೂರು ಬಾರಿ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿದ್ದು, ಈ ಬಾರಿಯಾದರೂ ಪ್ರಾಧಿಕಾರಗಳು ವಾಸ್ತವ ಪರಿಸ್ಥಿತಿಯನ್ನು ಅರಿತು ನಿರ್ಧಾರ ಕೈಗೊಳ್ಳುತ್ತವೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ತಮಿಳುನಾಡಿಗೆ ನಿರಂತರ ನೀರು – ಮೂರೇ ದಿನದಲ್ಲಿ 3 ಅಡಿ ಕುಸಿದ ಕೆಆರ್‌ಎಸ್ ಡ್ಯಾಮ್ ನೀರಿನ ಮಟ್ಟ
40 ಟಿಎಂಸಿ ನೀರು ಖಾಲಿ:
ಈಗಾಗಲೇ ಪ್ರಾಧಿಕಾರಗಳ ಆದೇಶಕ್ಕೆ ಮಣಿದು ರಾಜ್ಯ ಸರ್ಕಾರ (Karnataka Govt) ಮೂರು ಬಾರಿ ಒಟ್ಟು 40 ಟಿಎಂಸಿಗೂ ಅಧಿಕ ನೀರನ್ನು ತಮಿಳುನಾಡಿಗೆ (Tamilnadu) ಹರಿಸಿದೆ. ಪ್ರತಿ ಬಾರಿಯೂ ನೀರು ಬಿಡುವುದಿಲ್ಲ ಎಂದು ಹೇಳುತ್ತಲೇ ಸರ್ಕಾರ ನೀರು ಹರಿಸಿದೆ. ಈ ಬಾರಿ ಯಾವುದೇ ಕಾರಣಕ್ಕೂ ನೀರು ಬಿಡುವ ಪ್ರಮೇಯಕ್ಕೇ ಹೋಗಬಾರದು ಎಂದು ಮಂಡ್ಯ (Mandya) ಜಿಲ್ಲೆಯ ರೈತರು (Farmers) ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳು ಹಾಗೂ ಆಕ್ಷೇಪ:
ರಾಜ್ಯದಲ್ಲಿನ ಜಲಾಶಯಗಳ ನೀರಿನ ಮಟ್ಟ, ಮಳೆ ಕೊರತೆ ಮತ್ತು ಮುಂದಿನ ಸಂಕಷ್ಟದ ಬಗ್ಗೆ CWMA ಹಾಗೂ CWRC ಮುಂದೆ ರಾಜ್ಯ ಸರ್ಕಾರ ಸಮರ್ಥವಾಗಿ, ವಸ್ತುನಿಷ್ಠ ಅಂಕಿ-ಅಂಶಗಳೊಂದಿಗೆ ವಾದ ಮಂಡಿಸಬೇಕು.ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು – ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತ
ನಮ್ಮ ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವದ ನೆಪವೊಡ್ಡಿ ರೈತರಿಗೆ ಕಟ್ಟು ಪದ್ಧತಿಯಲ್ಲಿ ನೀರು ಪೂರೈಸಲಾಗುತ್ತಿದೆ. ಆದರೆ ತಮಿಳುನಾಡು ಸರ್ಕಾರ ಅದೇ ನೀರನ್ನು ತಮ್ಮ ರೈತರ ಬೆಳೆಗಳಿಗೆ ರಾಜಾರೋಷವಾಗಿ ಬಳಸಿಕೊಳ್ಳುತ್ತಿರುವುದು ಕರ್ನಾಟಕದ ರೈತರಿಗೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ರೈತರ ಹಿತವನ್ನು ಬಲಿಕೊಟ್ಟು ಮತ್ತೆ ತಮಿಳುನಾಡಿಗೆ ನೀರು ಹರಿಸಲು ಮುಂದಾದರೆ ರಸ್ತೆಗಿಳಿದು ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ; ನಾಳೆ ದೆಹಲಿಯಲ್ಲಿ CWRC & CWMA ಸಭೆ
