ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ (Corruption) ವಿರುದ್ಧದ ನಮ್ಮ ಹೋರಾಟ ನಾಳೆಗೆ ಕೊನೆಯಾಗುವುದಿಲ್ಲ. ನಾಳೆ ಮುಕ್ತಾಯವಾಗುತ್ತಿರುವುದು ಮೊದಲ ಹಂತದ ಪಾದಯಾತ್ರೆ ಮಾತ್ರ, ಈ ಜನವಿರೋಧಿ ಸರ್ಕಾರವನ್ನು ತೊಲಗಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B. Y. Vijayendra) ಗುಡುಗಿದ್ದಾರೆ.
ಬಳ್ಳಾರಿಯ ಗ್ರಾಮಾಂತರ ಪ್ರದೇಶವಾದ ಅಲ್ಲಿಪುರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10 ದಿನಗಳ ಪಾದಯಾತ್ರೆಯ ಅನುಭವ ಹಾಗೂ ನಾಳಿನ ಬೃಹತ್ ಸಮಾವೇಶದ ವಿವರಗಳನ್ನು ಹಂಚಿಕೊಂಡರು.
ಇಂದು 9 ಕಿ.ಮೀ ಸಾಗಿ ವಾಲ್ಮೀಕಿ ವೃತ್ತ ತಲುಪಲಿದ್ದೇವೆ. ನಾಳೆ ಬೆಳಿಗ್ಗೆ 10 ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ, ಮಧ್ಯಾಹ್ನ ವಾಲ್ಮೀಕಿ ಸರ್ಕಲ್‌ನಿಂದ 2-3 ಕಿ.ಮೀ ಪಾದಯಾತ್ರೆ ನಡೆಸಿ ನೇರವಾಗಿ ಮುನ್ಸಿಪಲ್ ಮೈದಾನಕ್ಕೆ ತೆರಳಲಿದ್ದೇವೆ. ಸಂಜೆ 4:30ಕ್ಕೆ ಸಮಾವೇಶದ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದರು.
ಈ ಪಾದಯಾತ್ರೆ ನನ್ನ ರಾಜಕೀಯ ಜೀವನದ ಮಹತ್ವದ ತಿರುವು. ಮಹಿಳೆಯರು, ಅಲೆಮಾರಿ ಸಮುದಾಯಗಳು, ರೈತರು ಹಾಗೂ ಯುವಕರೊಂದಿಗೆ ನಡೆಸಿದ ಸಂವಾದ ನನಗೆ ಅಪಾರ ಆತ್ಮತೃಪ್ತಿ ತಂದಿದೆ. ಇದು ನನ್ನ ನಾಯಕತ್ವಕ್ಕೆ ಗಟ್ಟಿಯಾದ ಬುನಾದಿ ಹಾಕಿಕೊಟ್ಟಿದೆ ಎಂದರು.
ಜಿಲ್ಲಾಧಿಕಾರಿಯವರು ಸಂಜೆ 6:30ಕ್ಕೆ ಕಾರ್ಯಕ್ರಮ ಮುಗಿಸಲು ಸಮಯ ನಿಗದಿ ಮಾಡಿದ್ದಾರೆ. ನಾವು ಕಾರ್ಯಕ್ರಮ ಆರಂಭಿಸುವ ಸಮಯ ಗೊತ್ತು, ಮುಕ್ತಾಯ ಯಾವಾಗ ಎಂದು ನಾವೇನು ಬ್ರಿಟಿಷ್ ಆಡಳಿತದಲ್ಲಿದ್ದೇವಾ? ಕಾನೂನಿನ ನೆಪವೊಡ್ಡಿ ನಮ್ಮ ಬ್ಯಾನರ್‌ಗಳನ್ನು ರಾತ್ರೋರಾತ್ರಿ ಹರಿದು ಹಾಕಲಾಗಿದೆ. ಸರ್ಕಾರ ಹತಾಶೆಗೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ದಲಿತ ನಾಯಕರ ಏಳಿಗೆ ಸಹಿಸಲು ಬಿಜೆಪಿಗೆ ಆಗುತ್ತಿಲ್ಲ- ಜಾರಕಿಹೊಳಿ ಪರ ಡಿಕೆಶಿ ಬ್ಯಾಟಿಂಗ್
ಇಡಿ ದುರುಪಯೋಗ ಆರೋಪಕ್ಕೆ ಉತ್ತರಿಸಿದ ಅವರು, ನಾಗೇಂದ್ರ ಪ್ರಕರಣದಲ್ಲೂ ಇದೇ ಮಾತು ಹೇಳಿದ್ದರು. ಪ್ರಸ್ತುತ ಕೆಲ ಸಚಿವರು ಬಿಜೆಪಿ ಹಿಟ್ ಲಿಸ್ಟ್‌ನಲ್ಲಿದ್ದರೆ, ಇನ್ನು ಕೆಲವರು ಸ್ವತಃ ಕಾಂಗ್ರೆಸ್ ಹೈಕಮಾಂಡ್‌ನ ಹಿಟ್ ಲಿಸ್ಟ್‌ನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಮಾರೋಪ ಸಮಾವೇಶದಲ್ಲಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
