ಆಕಾಶಾ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದೂರು ನಿರ್ಮಿಸುತ್ತಿರುವ, ಪಿ.ಸಿ. ಶೇಖರ್ ನಿರ್ದೇಶಿಸುತ್ತಿರುವ ಹಾಗೂ ಶಿವರಾಜ್ ಕುಮಾರ್ ಮತ್ತು ವಿಜಯ್ ರಾಘವೇಂದ್ರ ನಟಿಸಿರುವ ‘ಮಹಾನ್’ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಕನ್ನಡ ಚಿತ್ರರಂಗದ ಮಹಾನ್ ನಟರಾದ ದೇವರಾಜ್, ರಮೇಶ್ ಭಟ್, ಅವಿನಾಶ್, ರಂಗಾಯಣ ರಘು, ಶರತ್ ಲೋಹಿತಾಶ್ವ ಹಾಗೂ ರಮೇಶ್ ಇಂದಿರಾ ಅವರು ಅಭಿನಯಿಸಿರುವುದು. ಈ ಆರು ಮಂದಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗೆ ಈ ಆರು ಕಲಾವಿದರ ಫಸ್ಟ್ ಲುಕ್‌ಗಳು ಅನಾವರಣಗೊಂಡಿವೆ.
ಪಾತ್ರದ ಪ್ರಾಬಲ್ಯ ಹೆಚ್ಚಾದಷ್ಟೂ ನಟರ ಜವಾಬ್ದಾರಿಯೂ ಹೆಚ್ಚಾಗುತ್ತದೆ. ನಿರ್ದೇಶಕರ ನಿರೀಕ್ಷೆಗೆ ಜೀವ ತುಂಬುವ ಕೆಲಸವನ್ನು ಇಲ್ಲಿ ಕನ್ನಡದ ಮೇರು ನಟರು ನಿರ್ವಹಿಸಿದ್ದಾರೆ.

ರಮೇಶ್ ಇಂದಿರಾ
ಇತ್ತೀಚಿನ ದಿನಗಳಲ್ಲಿ ವಿಶಿಷ್ಟ ನಟನೆಯ ಮೂಲಕ ತಮ್ಮದೇ ಛಾಪು ಮೂಡಿಸಿರುವ ರಮೇಶ್ ಇಂದಿರಾ ಅವರು ಇನ್‌ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.
ಡೈನಾಮಿಕ್ ಸ್ಟಾರ್ ದೇವರಾಜ್
ಇನ್‌ಸ್ಪೆಕ್ಟರ್ ಕಾರ್ಯನಿರ್ವಹಣೆಯ ವಿಧಾನ ಹಾಗೂ ಲೋಪಗಳನ್ನು ಪ್ರಶ್ನಿಸುವ ಮೇಲಧಿಕಾರಿಯ ಪಾತ್ರಕ್ಕೆ ಒಬ್ಬ ಗಟ್ಟಿಯಾದ, ಸಮರ್ಥ ನಟನ ಅವಶ್ಯಕತೆ ಇತ್ತು. ಹೀಗಾಗಿ ನಿರ್ದೇಶಕರ ಆಯ್ಕೆ ಕನ್ನಡ ಚಿತ್ರರಂಗದಲ್ಲಿ ಪೊಲೀಸ್ ಪಾತ್ರಗಳಿಗೆ ಹೆಸರುವಾಸಿಯಾದ ಹಿರಿಯ ನಟ ಡೈನಾಮಿಕ್ ಹೀರೋ ದೇವರಾಜ್ ಅವರತ್ತ ನೆಟ್ಟಿತ್ತು.
ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪಾತ್ರ ನಿರ್ವಹಣೆಗೆ ಅವರೇ ಸರಿಸಾಟಿ. ಅವರ ಫಸ್ಟ್ ಲುಕ್‌ನಲ್ಲೇ ಪಾತ್ರದ ಮೇಲಿರುವ ಅವರ ಹಿಡಿತ ಸ್ಪಷ್ಟವಾಗಿ ಕಾಣಿಸುತ್ತದೆ.

ರಂಗಾಯಣ ರಘು
ಇಡೀ ಹಳ್ಳಿಯ ಹಿತಾಸಕ್ತಿಯನ್ನ ಕಾಯುವ ಹಿರಿಯ ರೈತ ಮುಖಂಡನ ಪಾತ್ರದಲ್ಲಿ ರಂಗಾಯಣ ರಘು ಅವರು ಕಾಣಿಸಿಕೊಂಡಿದ್ದಾರೆ. ಅವರ ನಟನಾ ಕೌಶಲ್ಯದ ಪರಿಚಯ ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಯಾವುದೇ ಕಾಲಘಟ್ಟದ ಪಾತ್ರವಾಗಲಿ, ಯಾವುದೇ ರೀತಿಯ ಪಾತ್ರವಾಗಲಿ, ಅದನ್ನು ಸಲೀಸಾಗಿ ನಿರ್ವಹಿಸಬಲ್ಲ ನಟರಾಗಿದ್ದಾರೆ.
ರಮೇಶ್ ಭಟ್
ಅತ್ಯಂತ ಅನುಭವಿ ನಟರಾದ ರಮೇಶ್ ಭಟ್ ಅವರು ‘ಮಹಾನ್’ ಚಿತ್ರದಲ್ಲಿ ಅನುಭವಿ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶರತ್ ಲೋಹಿತಾಶ್ವ
ಊರಿನ ಆಚರಣೆಗಳು, ದೈವಿಕ ಮೌಲ್ಯಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಜನರ ಮೇಲೆ ಪ್ರಭಾವ ಬೀರುವ ಧಾರ್ಮಿಕ ಗುರುವಿನ ಪಾತ್ರದಲ್ಲಿ ಹಿರಿಯ ಕಲಾವಿದ ಶರತ್ ಲೋಹಿತಾಶ್ವ ಅವರು ನಟಿಸಿದ್ದಾರೆ. ಈ ಪಾತ್ರದಲ್ಲಿ ಅವರು ತಮ್ಮ ಹಿಂದಿನ ಎಲ್ಲಾ ಪಾತ್ರಗಳಿಗಿಂತಲೂ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.
ಅವಿನಾಶ್
ಇಡೀ ಹಳ್ಳಿಗೆ ಸೇನೆಯ ಮಹತ್ವವನ್ನು ಪರಿಚಯಿಸುವ, ಹೆಮ್ಮೆಯ ಹಾಗೂ ಶಿಸ್ತಿನ ಸಿಪಾಯಿಯ ಪಾತ್ರದಲ್ಲಿ ಅವಿನಾಶ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಎಲ್ಲಾ ನಟರ ಸಹಭಾಗಿತ್ವವು ‘ಮಹಾನ್’ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ ಎಂದು ನಿರ್ದೇಶಕ ಪಿ.ಸಿ. ಶೇಖರ್ ಅವರು ಸಂತಸ ಹಂಚಿಕೊಂಡಿದ್ದಾರೆ.
ಇದೊಂದು ಬಹುತಾರಾಬಳಗದ ಚಿತ್ರವಾಗಿದ್ದು, ವಿಜಯ್ ರಾಘವೇಂದ್ರ ಅವರು ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷಾ ಬೊಳ್ಳಮ್ಮ ಹಾಗೂ ಕಿರಣ್ ಶ್ರೀನಿವಾಸ್ ಅವರು ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಜನಪ್ರಿಯ ತಾಂತ್ರಿಕ ವರ್ಗವಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿ. ನಾಗೇಂದ್ರ ಪ್ರಸಾದ್ ಗೀತರಚನೆ, ಎಸ್. ವೈದಿ ಛಾಯಾಗ್ರಹಣ ಹಾಗೂ ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಚಿತ್ರಕ್ಕಿದೆ.
